ಸಾರಾಂಶ
ಶಿವಮೊಗ್ಗ: ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಅರ್ಹ ರೈತರಿಗೆ ಎಕರೆವಾರು ಮತ್ತು ಬೆಳೆವಾರು ನೀಡಬಹುದಾದ ಸಾಮಾನ್ಯ ಬೆಳೆ, ತೋಟಗಾರಿಕೆ ಬೆಳೆಗಳು, ಕಾಫಿ ಬೆಳೆಗಳು, ರೇಷ್ಮೆ ಬೆಳೆ, ಸಾಂಬಾರ ಪದಾರ್ಥಗಳು, ವಾಣಿಜ್ಯ ಹೂ ಬೆಳೆಗಳು, ಕೃಷಿ ಮತ್ತು ಕೃಷಿಗೆ ಸಂಬಂಧಿತ ವಸ್ತುಗಳನ್ನು ಶೇಖರಿಸಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಅಧೀನ ಬ್ಯಾಂಕ್‌ಗಳ ಮೂಲಕ ನೀಡಲಾಗುವ ಬೆಳೆ ಸಾಲದ ಪರಿಮಿತಿಯನ್ನು ಹೆಚ್ಚಿಸಿ, ರಾಜ್ಯ ಮಟ್ಟದ ತಾಂತ್ರಿಕ ಸಭೆಗೆ ಶಿಫಾರಸು ಮಾಡಲು ತಾಂತ್ರಿಕ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ತಾಂತ್ರಿಕ ಸಮಿತಿ ಸಭೆಯಲ್ಲಿ ಬೆಳೆಸಾಲದ ಪರಿಮಿತಿ ನಿರ್ಧಾರ ಕುರಿತು ಸುದೀರ್ಘವಾಗಿ ಚರ್ಚಿಸಿ, ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಸಹಕಾರಿ ಬ್ಯಾಂಕ್‌ಗಳಲ್ಲಿ ನೀಡಲಾಗುತ್ತಿರುವ ಬೆಳೆ ಸಾಲದ ಜೊತೆಗೆ ಏಲಕ್ಕಿ-ಲವಂಗ, ಹಸು, ಎಮ್ಮೆ ಎಚ್.ಎಫ್. ಮತ್ತು ಗೀರ್ ತಳಿಯ ಹಸುಗಳ ಸಾಕಾಣಿಕೆ, ಸಿಹಿ ಗೆಣಸು ಮತ್ತು ಹಸಿ ಮೆಣಸಿನಕಾಯಿ ಬೆಳೆ, ವಿಶೇಷವಾಗಿ ಮಲೆನಾಡಿನ ಮಿಡಿಮಾವು, ಜೇನುಕೃಷಿ ಹಾಗೂ ಹಲಸು ಮತ್ತು ಬೆಣ್ಣೆಹಣ್ಣು (ಅವಕಾಡೋ) ಬೆಳೆಗೆ ಸಾಲ ನೀಡಲು ಕೃಷಿಕರಿಂದ ಬೇಡಿಕೆ ಇದ್ದು, ಅವುಗಳನ್ನು ಪ್ರಸಕ್ತ ಸಾಲಿಗೆ ಶಿಫಾರಸು ಮಾಡಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಸಭೆಯಲ್ಲಿ ನೀರಾವರಿ ಮತ್ತು ಮಳೆ ಆಧಾರಿತ ಭತ್ತದ ಬೆಳೆಗೆ ಸುಮಾರು 60 ಸಾವಿರ ರು., ಮೆಕ್ಕೆಜೋಳ ಬೆಳೆಗೆ 60 ಸಾವಿರ ರು., ಅನಾನಸ್ ಬೆಳೆಗೆ 3.10 ಲಕ್ಷ ರು., ಅಡಿಕೆ ಬೆಳೆಗೆ 1.60 ಲಕ್ಷ ರು. ಸಾಲವಾಗಿ ನೀಡಬಹುದಾಗಿದೆ. ಕಾಳುಮೆಣಸು, ಗೇರು, ರಬ್ಬರ್, ಕಬ್ಬು, ಬಾಳೆ ಸೇರಿದಂತೆ ಅನೇಕ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀಡಬಹುದಾದ ಗರಿಷ್ಠ ಸಾಲದ ಮಿತಿಯನ್ನು, ಸಮಿತಿ ಸದಸ್ಯರ ಸಲಹೆಯನ್ನು ಪರಿಗಣಿಸಿ, ಹಾಗೂ ಇಲಾಖಾ ಅಧಿಕಾರಿಗಳು ಒದಗಿಸಲಾದ ಮಾಹಿತಿ ಆಧರಿಸಿ, ಸಭೆಯ ಅಂತಿಮ ನಿರ್ಣಯದಂತೆ ಕೇಂದ್ರ ತಾಂತ್ರಿಕ ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.ಕೇಂದ್ರ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ, ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯದರ್ಶಿ ಅನ್ನಪೂರ್ಣ, ಜನರಲ್ ಮ್ಯಾನೇಜರ್ ಎನ್.ಜಿ.ನಾಗಭೂಷಣ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಅದರ ಅಧೀನ ಬ್ಯಾಂಕ್‌ಗಳ ಅಧಿಕಾರಿ-ಸಿಬ್ಬಂದಿ ಇದ್ದರು.ಮಾರುಕಟ್ಟೆಯಲ್ಲಿ ಮಿಡಿಮಾವಿಗೆ ಹೆಚ್ಚಿನ ಬೇಡಿಕೆ ಇದ್ದು, ಮಿಡಿಮಾವಿನ ಕೃಷಿಕರು ಹಾಗೂ ನರ್ಸರಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರೊಂದಿಗೆ ಹಲಸು ಮತ್ತು ಬೆಣ್ಣೆಹಣ್ಣು ಬೆಳೆಗಳಿಗೂ ಸಾಲ ನೀಡಲು ನಿರ್ಣಯ ಕೈಗೊಳ್ಳಬಹುದಾಗಿದೆ ಎಂದು ಸಮಿತಿಯಲ್ಲಿ ಒತ್ತಾಯಿಸಲಾಗಿದೆ. ಕೇಂದ್ರ ತಾಂತ್ರಿಕ ಸಮಿತಿ ಈ ಬಗ್ಗೆ ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ.
ಡಾ.ಆರ್.ಎಂ.ಮಂಜುನಾಥಗೌಡ, ಅಧ್ಯಕ್ಷ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಶಿವಮೊಗ್ಗ.