ಹುಕ್ಕೇರಿ ವಿದ್ಯುತ್ ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ನಿರ್ಧಾರ

| Published : May 11 2025, 11:50 PM IST

ಸಾರಾಂಶ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಲ್ಲಿ ಕಳೆದ ಹಲವಾರು ವರ್ಷದಿಂದ ಹಿಟ್ಲರ್ ಆಡಳಿತಕ್ಕೆ ಬೇಸತ್ತು, 11 ಜನರು ನಿರ್ದೇಶಕ ಮಂಡಳಿಯಿಂದ ಹೊರಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಲ್ಲಿ ಕಳೆದ ಹಲವಾರು ವರ್ಷದಿಂದ ಹಿಟ್ಲರ್ ಆಡಳಿತಕ್ಕೆ ಬೇಸತ್ತು, 11 ಜನರು ನಿರ್ದೇಶಕ ಮಂಡಳಿಯಿಂದ ಹೊರಬಂದಿದ್ದೇವೆ. ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಅರ್ಜಿಯನ್ನು ಸಂಘದ ಅಧಿಕಾರಿಗಳಿಗೆ ತಲುಪಿಸಲಾಗಿದೆ ಎಂದು 11 ಜನ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 23ರಂದು ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸರ್ಕಾರ ದಿನಾಂಕ ನಿಗದಿಪಡಿಸಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಜನ ಅಪಪ್ರಚಾರ ಮಾಡುತ್ತಿದ್ದು, ಆ ಮಾತನ್ನು ಯಾರು ನಂಬಬಾರದು. ರೈತರ ಏಳಿಗೆಗಾಗಿ ನಾವು 24 ಗಂಟೆ ಸದಾ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ.

ವಿದ್ಯುತ್ ಸಂಘದಿಂದ ರೈತರಿಗೆ ಹಲವಾರು ಯೋಜನೆ ನೀಡಲು ತಿಳಿಸುತ್ತಾ ಬಂದರೂ ಇಲ್ಲಿಯವರೆಗೂ ಯಾವುದೇ ಕೆಲಸವಾಗಿಲ್ಲ. ತೋಟದ ಮನೆಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಅಧ್ಯಕ್ಷರು ಯಾವುದೇ ಕ್ರಮಕೈಗೊಂಡಿಲ್ಲ. ಸಚಿವ ಸತೀಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಮತ್ತು ಅಣ್ಣಾಸಾಹೇಬ ಜೊಲ್ಲೆ ಸಹಕಾರದೊಂದಿಗೆ ರೈತರಿಗೆ 24 ಗಂಟೆ ನಿರಂತರ ವಿದ್ಯುತ್‌ ಕೊಡಿಸುವ ಪ್ರಯತ್ನ ನಾವು ಮಾಡುತ್ತೇವೆ. ಈಗಾಗಲೇ ಸುಟ್ಟು ಹೋಗಿರುವ ಟಿಸಿ ರಿಪೇರಿ ಸೇರಿದಂತೆ ಹೊಸ ಟಿಸಿಗಳ ಖರೀದಿ ಮಾಡಲಾಗುವುದು. ವಿದ್ಯುತ್‌ ಕಂಬ ಮುರಿದರೆ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿತ್ತು. ಇದನ್ನು ಮನಗಂಡ ರೈತರಿಗೆ ತೊಂದರೆ ಆಗಬಾರದೆಂದು ಕಡಿಮೆ ದರದಲ್ಲಿ ವಿದ್ಯುತ್ ಕಂಬ ನೀಡಲು ನಾವೆಲ್ಲ ನಿರ್ಧರಿಸಿದ್ದೇವೆ. ದಯವಿಟ್ಟು ರೈತರು ಯಾರ ಮನೆಗೂ ಹೋಗದೇ ತಮ್ಮ ತಮ್ಮ ಕ್ಷೇತ್ರ ನಿರ್ದೇಶಕರಿಗೆ ಫೋನ್ ಮಾಡಿ ಕೆಲಸವನ್ನು ಹೇಳಿದ್ದಲ್ಲಿ ಅತೀ ಶೀಘ್ರವಾಗಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲ ರೈತರು ತಮಗೆ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಹಲವಾರು ಯೋಜನೆ ತಂದು ಜನತೆಗೆ ಅನುಕೂಲ ಮಾಡಿಕೊಡುತ್ತೇವೆ. ಈ ಸಂಘದ ಎಲ್ಲ ಅಧಿಕಾರಿಗಳಿಗೆ ಮತ್ತು ಎಂಜನಿಯರಗಳಿಗೆ ರೈತರು ಬಂದರೆ ಅವರಿಗೆ ಸ್ಪಂದಿಸಿ ಆದಷ್ಟು ಬೇಗ ಕೆಲಸ ಮಾಡಿಕೊಡುವಂತೆ ಈಗಾಗಲೇ ನಿರ್ದೇಶನ ನೀಡಿದ್ದೇವೆ. ರೈತರ ಕೆಲಸಕ್ಕೆ ಅಧಿಕಾರಿಗಳು ಸ್ಪಂದಿಸದೇ ಹೋದಲ್ಲಿ ರೈತರು ನಮ್ಮನ್ನು ಸಂಪರ್ಕಿಸಿದರೆ ನಾವು ಅವರ ಮೇಲೆ ಸೂಕ್ತ ಕ್ರಮ ತೆಗೆದು ಕೊಂಡು ಕೆಲಸ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.