ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಸಲಹಾ ಸಮಿತಿಯ ಚರ್ಚೆಯಂತೆ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರು ಸೇರಿದಂತೆ ನಾಲೆಗಳಿಗೆ ಮೂರು ಬಾರಿ ಒಟ್ಟು 9 ಟಿಎಂಸಿ ನೀರು ಹರಿಸಲು ನಿರ್ಧರಿಸಲಾಗಿದೆ. ಇದರಲ್ಲಿ ವಿಶೇಷವಾಗಿ ಚಿಂಚಲಿ ಮಾಯಕ್ಕಾದೇವಿ ಸೇರಿ ವಿವಿಧ ಜಾತ್ರೆಗಳು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ 2 ಟಿಎಂಸಿ ನೀರು ಕಾಯ್ದಿರಿಸಲಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಹಿಡಕಲ್ ಡ್ಯಾಂಮಿನ ಹುನೂರ ಪ್ರವಾಸಿ ಮಂದಿರದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ಏಪ್ರಿಲ್, ಮೇ ತಿಂಗಳಲ್ಲೂ ರೈತರಿಗೆ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು. ಹಿಂಗಾರು ಹಂಗಾಮಿನಲ್ಲಿ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ಮತ್ತು ಚಿಕ್ಕೋಡಿ ಕಾಲುವೆಗೆ 20 ದಿನಗಳವರೆಗೆ, ಘಟಪ್ರಭಾ ಬಲದಂಡೆ ಕಾಲುವೆಗೆ 15 ದಿನಗಳವರೆಗೆ ಇತಿಮಿತಿ ಗಮನದಲ್ಲಿರಿಸಿಕೊಂಡು ನೀರು ಹರಿಸಲಾಗುವುದು, ರೈತರು ಮತ್ತು ಸಾರ್ವಜನಿಕರ ಒತ್ತಾಸೆ ಗಮನದಲ್ಲಿಸಿಕೊಂಡು ಒಟ್ಟಾರೆ 9 ಟಿಎಂಸಿ ನೀರು ಹರಿಸಲಾಗುವುದು. ಮುಧೋಳ, ಬೀಳಗಿಯವರೆಗೂ ನೀರು ಹೋಗುವುದರಿಂದ ನೀರನ್ನು ಮಿತವಾಗಿ ಬಳಸುವಂತೆ ರೈತರಿಗೆ ಸಲಹೆ ನೀಡಿದರು.
ಬೆಳಗಾವಿ, ಸಂಕೇಶ್ವರ ಹಾಗೂ ಸುತ್ತಲಿನ ಗ್ರಾಮಗಳಿಗೆ ಜುಲೈ 25ರ ಅಂತ್ಯದವರೆಗೂ 1.270 ಟಿಎಂಸಿ, ಮುಧೋಳ, ಬಾಗಲಕೋಟೆ, ಸೇರಿದಂತೆ ವಿವಿಧ ಗ್ರಾಮಗಳಿಗೆ ಮೇ 25ರವರೆಗೆ 3 ಟಿಎಂಸಿ ನೀರು ಹರಿಸಲಾಗುವುದು ಜೊತೆಗೆ ಚಿಂಚಲಿ ಮಾಯಕ್ಕದೇವಿ ಸೇರಿದಂತೆ ಹಿಡಕಲ್ ಜಲಾಶಯ ವ್ಯಾಪ್ತಿಗೊಳಪಡುವ ಎಲ್ಲ ಜಾತ್ರೆ ಹಾಗೂ ಜಾನುವಾರುಗಳ ಕುಡಿಯುವುದಕ್ಕಾಗಿ ನೀರು ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಹಿಡಕಲ್ ಜಲಾಶಯದ ಹಿನ್ನೀರು ಪ್ರದೇಶದಲ್ಲಿರುವ ಹೂಳನ್ನು 15 ಜೆಸಿಪಿ ಸಹಾಯದಿಂದ ಎತ್ತುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ತೆರದಾಳ ಶಾಸಕ ಸಿದ್ದು ಸವದಿ, ಬೀಳಗಿ ಶಾಸಕ ಜಿ.ಟಿ.ಪಾಟೀಲ, ಘಟಪ್ರಭಾ ನೀರು ಬಳಕೆದಾರರ ಸಂಘಧ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಮುಖ್ಯ ಅಭಿಯಂತರ ಬಿ.ಆರ್. ರಾಟೋಡ್, ಹಿಡಕಲ್ ಡ್ಯಾಂಮಿನ ಅಧೀಕ್ಷಕ ಅಭಿಯಂತರ ಎಂ.ಎಲ್. ಗಣಿ, ಕಾರ್ಯನಿರ್ವಾಹಕ ಅಭಿಯಂತರ ಆರ್.ವಿ. ತಾಳೂರ, ತಂತ್ರಿಕ ಸಹಾಯಕ ಟಿ.ಎಚ್. ಗಂಗನ್ನವರ, ಸ,ಕಾನಿ,ಅಭಿಯಂತರ ಶುಶಾಂತ ಕುಡಬಳೆ, ಎ.ಎಚ್. ಜಮಖಂಡಿ, ಜಗದೀಶ ಬಿ.ಕೆ, ಮಂಜುನಾಥ ಹೊಸಮನಿ, ಬಸಲಿಂಗ ಮಾವಿನಕಟ್ಟಿ, ಪಂಡಿತ ಹಂಗನ್ನವರ, ರಾಜಶೇಖರ ಪಾಟೀಲ ಇತರರು ಉಪಸ್ಥಿತರಿದ್ದರು.