ಸಾರಾಂಶ
ಶಿವಾನಂದ ಗೊಂಬಿ ಹುಬ್ಬಳ್ಳಿ
ರೈಲ್ವೆ ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆಗೆ ಇರುವ ಆರ್‌ಪಿಎಫ್ ಸಿಬ್ಬಂದಿ ಕೊರತೆ ನೀಗಿಸುವ ಉದ್ದೇಶದಿಂದ ಇದೀಗ ಹೋಂಗಾರ್ಡ್ ಬಳಕೆ ಮಾಡಲು ನೈಋತ್ಯ ರೈಲ್ವೆ ವಲಯವೂ ಮುಂದಾಗಿದೆ. ಆರ್‌ಪಿಎಫ್ ಸಿಬ್ಬಂದಿ ನೇಮಕವಾಗುವ ವರೆಗೂ ಹೋಂಗಾರ್ಡ್ ಬಳಕೆ ಮಾಡುವ ಉದ್ದೇಶ ವಲಯದ್ದು.ಬೆಂಗಳೂರು, ಹುಬ್ಬಳ್ಳಿ, ಮೈಸೂರು ಹೀಗೆ ಮೂರು ವಿಭಾಗಗಳನ್ನು ಒಳಗೊಂಡಿರುವ ದೊಡ್ಡ ವಲಯ ನೈಋತ್ಯ ರೈಲ್ವೆಯದ್ದು. ಪ್ರತಿನಿತ್ಯ ನೂರಾರು ರೈಲು ಸಂಚರಿಸುತ್ತವೆ. ಲಕ್ಷಾಂತರ ಜನ ಪ್ರಯಾಣಿಕರು ಪ್ರಯಾಣಿಸುತ್ತಾರೆ. ರೈಲುಗಳಲ್ಲಿ ಆಗಾಗ ಕಳ್ಳತನ, ಹೊಡೆದಾಟ, ಮಹಿಳೆಯರನ್ನು ಚುಡಾಯಿಸುವಂತಹ ಘಟನೆಗಳು ನಡೆಯುವುದು ಸರ್ವೇ ಸಾಮಾನ್ಯ. ಕೆಲ ವೇಳೆಯಂತೂ ಕೆಲವು ಕಿಡಿಗೇಡಿಗಳು ಟಿಕೆಟ್ ಇಲ್ಲದೇ ಎಸಿ ಕೋಚ್, ಸ್ಲೀಪರ್ ಕೋಚ್‌ಗಳಲ್ಲಿ ನುಗ್ಗುತ್ತಾರೆ. ಆಗ ಸಹಪ್ರಯಾಣಿಕರಿಗೂ ಕಿರಿಕಿರಿಯಾಗುತ್ತದೆ. ಭಯವೂ ಉಂಟಾಗುವುದುಂಟು.
ಇತ್ತೀಚಿಗೆ ರಾಜ್ಯದಲ್ಲಿ ಸದ್ದು ಮಾಡಿದ್ದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಆರೋಪಿ ದಾವಣಗೆರೆಯಲ್ಲಿ ರೈಲಿನಲ್ಲೇ ಮಹಿಳೆಯೊಬ್ಬರೊಂದಿಗೆ ಜಗಳ ತೆಗೆದು ಚಾಕುವಿನಿಂದ ಇರಿದಿದ್ದ ಘಟನೆಯೂ ನಡೆದಿದ್ದುಂಟು. ಆರೋಪಿಯನ್ನು ಬಂಧಿಸಿದ್ದು ಕೂಡ ಆರ್‌ಪಿಎಫ್ ಸಿಬ್ಬಂದಿಯೇ ಎಂಬುದು ವಿಶೇಷ. ಇಂಥ ಘಟನೆ ನಡೆಯದಂತೆ ನೋಡಿಕೊಳ್ಳಬೇಕು, ಪ್ರಯಾಣಿಕರಿಗೆ ಸುರಕ್ಷತೆಯ ಬಗ್ಗೆ ಭರವಸೆ ನೀಡಬೇಕು ಎಂಬುದು ರೈಲ್ವೆ ಇಲಾಖೆಯ ಜವಾಬ್ದಾರಿ.ಹೀಗಾಗಿ ಪ್ರತಿ ರೈಲುಗಳಲ್ಲಿ ಆರ್‌ಪಿಎಫ್ ಸಿಬ್ಬಂದಿ ಇರಬೇಕು. ಇದು ಪ್ರಯಾಣಿಕರ ಸುರಕ್ಷತೆಗಾಗಿ ಅಗತ್ಯ ಹಾಗೂ ಅನಿವಾರ್ಯ. ಜತೆ ಜತೆಗೆ ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸುವುದು ಕೂಡ ಅಷ್ಟೇ ಅಗತ್ಯ.
ಎಷ್ಟು ಕೊರತೆ?: ವಲಯಕ್ಕೆ 1577 ಆರ್‌ಪಿಎಫ್ ಸಿಬ್ಬಂದಿ ಮಂಜೂರಾದ ಹುದ್ದೆಗಳು. ಆದರೆ 1100 ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಶೇ. 30ರಷ್ಟು ಸಿಬ್ಬಂದಿ ಕೊರತೆ ಇದೆ. ಇದನ್ನು ಸರಿದೂಗಿಸಲು ರೈಲ್ವೆ ಮಂಡಳಿಗೆ ಮನವಿ ಮಾಡಲಾಗಿದೆ. ಖಾಲಿಯಿರುವ ಸಿಬ್ಬಂದಿ ಭರ್ತಿ ಕಾರ್ಯ ನಡೆಯುತ್ತಿದೆ. ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಹೋಂ ಗಾರ್ಡ್‌ಗಳನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ.ಹುಬ್ಬಳ್ಳಿ ವಿಭಾಗದಲ್ಲಿ 112 ಆರ್‌ಪಿಎಫ್ ಹುದ್ದೆ ಖಾಲಿ ಇದ್ದು, 110 ಹೋಂಗಾರ್ಡ್ ಬಳಕೆ ಮಾಡಿಕೊಳ್ಳುವ ಯೋಚನೆ ಇದೆ. ಮೈಸೂರು ವಿಭಾಗದಲ್ಲಿ 114 ಖಾಲಿ ಇವೆ. ಅಲ್ಲಿ 108 ಹೋಂ ಗಾರ್ಡ್, ಬೆಂಗಳೂರು ವಿಭಾಗದಲ್ಲಿ ಖಾಲಿಯಿರುವ 160 ಆರ್‌ಪಿಎಫ್ ಹುದ್ದೆಗಳಿಗೆ ಹೋಂಗಾರ್ಡ್ ಬಳಸಿಕೊಳ್ಳಲು ಮುಂದಾಗಿದೆ. ಹೋಂಗಾರ್ಡ್ ಸಿಬ್ಬಂದಿ ನಿಯೋಜಿಸಲು ಬೇಕಾದ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದೆ. ಇನ್ನೊಂದು ತಿಂಗಳು ಅಥವಾ ಎರಡು ತಿಂಗಳು ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಳಿಕ ಗೃಹ ರಕ್ಷಕ ದಳದ ಸಿಬ್ಬಂದಿ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ.
ಎಲ್ಲಿ ಬಳಕೆ?: ಹೋಂ ಗಾರ್ಡ್‌ಗಳನ್ನು ನಿಯೋಜಿಸಿಕೊಂಡರೂ ಅವರನ್ನೇನೂ ರೈಲುಗಳಲ್ಲಿ ರಕ್ಷಣೆಗೆ ನಿಯೋಜಿಸಲ್ಲ. ನಿಲ್ದಾಣ ಸೇರಿದಂತೆ ಒಂದೇ ಕಡೆ ನಿಂತುಕೊಂಡು ಭದ್ರತೆ ಒದಗಿಸುವಂತಹ ಸ್ಥಳಗಳಲ್ಲಿ ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗುವುದು. ಅಲ್ಲಿ ಇರುವ ಆರ್‌ಪಿಎಫ್ ಸಿಬ್ಬಂದಿಯನ್ನು ರೈಲುಗಳಲ್ಲಿ ಪ್ರಯಾಣಿಕರ ರಕ್ಷಣೆಗೆ ಬಳಸಿಕೊಳ್ಳಲಾಗುವುದು. ಈ ಮೂಲಕ ಪ್ರಯಾಣಿಕರ ರಕ್ಷಣೆಯ ಜತೆಗೆ ಯಾವುದೇ ಬಗೆ ನಿರ್ಲಕ್ಷ್ಯ ತೋರದೇ, ಆರ್‌ಪಿಎಫ್ ಸಿಬ್ಬಂದಿ ಕೊರತೆ ಎದುರಾಗದಂತೆ ನೋಡಿಕೊಳ್ಳುವ ಉದ್ದೇಶ ವಲಯದ್ದು.ಒಟ್ಟಿನಲ್ಲಿ ನೈಋತ್ಯ ರೈಲ್ವೆ ವಲಯ ಒಳ್ಳೆಯ ನಿರ್ಧಾರ ಮಾಡಿರುವುದಂತೂ ಸತ್ಯ. ಆದಷ್ಟು ಬೇಗನೆ ಇದು ಅನುಷ್ಠಾನಗೊಳ್ಳಬೇಕು ಎಂಬುದು ಪ್ರಯಾಣಿಕರ ಅಂಬೋಣ.
ಆರ್‌ಪಿಎಫ್ ಸಿಬ್ಬಂದಿ ಕೊರತೆ ಸರಿದೂಗಿಸಲು ಹೋಂಗಾರ್ಡ್‌ಗಳನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳಲು ವಲಯ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಕೂಡ ಶುರುವಾಗಿದೆ. ಖಾಲಿ ಇರುವ ಹುದ್ದೆಗಳಿಗೆ ಆರ್‌ಪಿಎಫ್ ಸಿಬ್ಬಂದಿ ನೇಮಕವಾದ ಬಳಿಕ ಹೋಂಗಾರ್ಡ್‌ಗಳನ್ನು ಕೈಬಿಡಲಾಗುವುದು ಎಂದು ನೈಋತ್ಯ ರೈಲ್ವೆ ವಲಯ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.