ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಕಾವೇರಿ ಟ್ರಿಬ್ಯುನಲ್ ಮತ್ತು ಪ್ರಾಧಿಕಾರದ ತೀರ್ಪುಗಳು ವೈಜ್ಞಾನಿಕ ಆಧಾರದ ಮೇಲೆ ಇರಬೇಕೇ ಹೊರತು. ಏರ್ ಕಂಡೀಷನ್ ಕೊಠಡಿಯಲ್ಲಿ ಕುಳಿತು ತೀರ್ಮಾನ ಮಾಡಬಾರದು. ಬದಲಾಗಿ ಕರ್ನಾಟಕ ಹಾಗೂ ತಮಿಳುನಾಡಿನ ಜಲಾಶಯಗಳಿಗೆ ಭೇಟಿ ನೀಡಿ ನೀರಿನ ಲಭ್ಯತೆ, ರೈತರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಅಗತ್ಯವನ್ನು ಪರಿಶೀಲಿಸಿ ನಂತರ ತೀರ್ಮಾನ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರಾಧಿಕಾರದ ತೀರ್ಪುಗಳನ್ನು ಮೌನವಾಗಿ ಒಪ್ಪಿಕೊಳ್ಳುವುದು ರಾಜ್ಯದ ದೌರ್ಬಲ್ಯವಾಗುತ್ತದೆ. ಆದರೆ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಯಾರೇ ಆಗಿರಲಿ, ರಾಜ್ಯದ ಹಿತವನ್ನು ಕಾಪಾಡುವುದು ಮೊದಲ ಆದ್ಯತೆಯಾಗಬೇಕು. ಎಂದು ಒತ್ತಾಯಿಸಿದರು. ತಮಿಳುನಾಡಿನ ಮೆಟ್ಟೂರು ಮತ್ತು ಭವಾನಿ ಜಲಾಶಯಗಳಲ್ಲಿನ ನೀರಿನ ಪ್ರಮಾಣವನ್ನು ಸಹ ಪರಿಶೀಲಿಸಬೇಕು. ಅಲ್ಲಿ ಕೃಷಿಗೆ ನೀರು ಬೇಕೇ ಅಥವಾ ಕುಡಿಯುವ ನೀರಿಗೇ ಬೇಕೇ ಎಂಬುದನ್ನು ವಾಸ್ತವಾಧಾರಿತವಾಗಿ ಅಳೆಯಬೇಕು. ಕರ್ನಾಟಕದ ರೈತರ ಬದುಕನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಬಿಡುವ ನಿರ್ಧಾರ ಎಷ್ಟು ನ್ಯಾಯಸಮ್ಮತ ಎಂಬ ಪ್ರಶ್ನೆಯನ್ನು ಪ್ರಾಧಿಕಾರವೇ ಆತ್ಮಪರಿಶೀಲನೆ ಮಾಡಬೇಕು ಎಂದರು.
ತೀರ್ಪಿನಲ್ಲಿ ಪ್ರಾಧಿಕಾರವು ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದಲ್ಲಿ ಇನ್ನಷ್ಟು ಮಳೆಯಾಗಿ ೧೨ ಟಿಎಂಸಿ ನೀರು ಹರಿದುಬರಬಹುದು ಎಂಬ ಊಹೆಯ ಆಧಾರದ ಮೇಲೆ ನಿರ್ಧಾರ ಕೈಗೊಂಡಿರುವುದು ಆಶ್ಚರ್ಯಕರ. ಊಹಾಪೋಹಗಳ ಮೇಲೆ ಇಂತಹ ಮಹತ್ವದ ತೀರ್ಪು ನೀಡಲಾಗದು. ಈ ವಿಚಾರವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲೂ ಪರಿಣಾಮಕಾರಿಯಾಗಿ ವಾದಿಸಬೇಕು ಎಂದು ಸಲಹೆ ನೀಡಿದರು.ಶನಿವಾರ (ಇಂದು) ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ತಾವು ಭಾಗವಹಿಸಲಿದ್ದು, ಎಲ್ಲ ರಾಜಕೀಯ ಪಕ್ಷಗಳೂ ಒಂದೇ ಧ್ವನಿಯಲ್ಲಿ ರಾಜ್ಯದ ರೈತರ ಹಿತ ಕಾಪಾಡುವ ನಿಲುವು ತಾಳಬೇಕು ಎಂದು ಮನವಿ ಮಾಡಿದರು. ರಾಜ್ಯದ ಸುಮಾರು ೧೬೦ ವಿಧಾನಸಭಾ ಕ್ಷೇತ್ರಗಳಲ್ಲಿ ಮಳೆ ಕೊರತೆಯಿಂದ ಬಿತ್ತನೆಯಾದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವೆಡೆ ರೈತರ ಆತ್ಮಹತ್ಯೆಗಳು ನಡೆಯುತ್ತಿದ್ದು, ೨೦೧೩ರಿಂದ ೨೦೧೭ರ ಅವಧಿಯಲ್ಲಿ ಕಂಡುಬಂದಂತಹ ದುಸ್ಥಿತಿ ಮರುಕಳಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷ್ಣ ಜಲಾನಯನ ಪ್ರದೇಶದ ಜಲಾಶಯಗಳು ಭರ್ತಿಯಾಗಿದ್ದರೂ, ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಸದ್ಯ ಸುಮಾರು ೫೪ ರಿಂದ ೫೫ ಟಿಎಂಸಿ ನೀರಿದ್ದು, ಅದರಲ್ಲಿ ಸುಮಾರು ೧೦ ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ. ಉಳಿದ ನೀರಿನಲ್ಲಿ ಬೆಂಗಳೂರಿನ ಕುಡಿಯುವ ನೀರಿಗೆ ಸುಮಾರು ೩೦ ಟಿಎಂಸಿ ಹಾಗೂ ಪರಿಸರ ಸಂರಕ್ಷಣೆಗೆ ಸುಮಾರು ೧೦ ಟಿಎಂಸಿ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಗೆ ನೀರಿನ ಅವಲಂಬನೆ ಕಡಿಮೆ ಮಾಡಬೇಕೆಂದು ರಾಜ್ಯ ಸರ್ಕಾರವೇ ರೈತರಿಗೆ ಸೂಚನೆ ನೀಡಿರುವುದು ವಾಸ್ತವ ಎಂದರು.
ಮೇಕೆದಾಟು ಯೋಜನೆಗೆ ಹೊಸ ದಿಕ್ಕು
ಮೇಕೆದಾಟು ಯೋಜನೆಯ ಡಿಪಿಆರ್ ಅನ್ನು ಮರುಪರಿಶೀಲನೆಗೆ ಹಿಂದಿರುಗಿಸಿರುವ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರು ಈ ವಿಚಾರವನ್ನು ರಾಜಕೀಯವಾಗಿ ಅಲ್ಲ, ತಾಂತ್ರಿಕವಾಗಿ ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಈಗಾಗಲೇ ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರಿಗೆ ಹಲವು ಬಾರಿ ಪತ್ರ ಬರೆದು, ವೈಯಕ್ತಿಕವಾಗಿ ಭೇಟಿ ಮಾಡಿ ಮೇಕೆದಾಟು ಯೋಜನೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿಯೂ ಇದೇ ಸಲಹೆ ನೀಡಲಾಗಿತ್ತು ಎಂದು ತಿಳಿಸಿದರು. ಪ್ರಸ್ತುತ ಡಿಪಿಆರ್‌ನಲ್ಲಿ ೬೭ ಟಿಎಂಸಿ ನೀರು ಸಂಗ್ರಹಿಸುವ ಪ್ರಸ್ತಾವವಿದೆ. ಆದರೆ ಮೊದಲ ಹಂತದಲ್ಲಿ ೩೦ ಟಿಎಂಸಿ ಸಂಗ್ರಹಕ್ಕೆ ಅನುಮತಿ ಪಡೆದು, ಅದರಲ್ಲಿ ೨೭ ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಟ್ರಿಬ್ಯುನಲ್ ಅವಕಾಶ ನೀಡಿರುವ ಅಂಶವನ್ನು ಆಧರಿಸಿ ಹೊಸ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯ, ಪರಿಸರ ಸಂರಕ್ಷಣೆ ಹಾಗೂ ರಾಜ್ಯದ ಭವಿಷ್ಯದ ನೀರಿನ ಭದ್ರತೆ ದೃಷ್ಟಿಯಿಂದ ಯೋಜನೆಯ ಮಹತ್ವವನ್ನು ಕೇಂದ್ರ ಸರ್ಕಾರಕ್ಕೆ ತಾಂತ್ರಿಕವಾಗಿ ಮನವರಿಕೆ ಮಾಡಿಕೊಡಬೇಕು. ಕೇವಲ ರಾಜಕೀಯ ಘೋಷಣೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದರು. ತಮಿಳುನಾಡಿನ ಮುಖ್ಯಮಂತ್ರಿ ಕರ್ನಾಟಕಕ್ಕೆ ಬಂದಾಗ ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು, ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೆ ಆಗುವ ಅನುಕೂಲಗಳ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು. ಈ ವಿಚಾರವನ್ನು ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾಡದೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.ಸಂಪುಟ ವಿಸ್ತರಣೆಗಾಗಿ ದೆಹಲಿಯಲ್ಲಿ ಸಮಯ ಕಳೆಯುವುದಕ್ಕಿಂತ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ. ಸಚಿವರು ಹಾಗೂ ಅಧಿಕಾರಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ರೈತರ ಸಂಕಷ್ಟದ ಸುದ್ದಿಗಳನ್ನಾದರೂ ಗಮನಿಸುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತಪಡಿಸಿದರು. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಕಾನೂನು ಹೋರಾಟವನ್ನು ಇನ್ನಷ್ಟು ಬಲಪಡಿಸಬೇಕು. ವಕೀಲರಿಗೆ ಸಮಗ್ರ ಮಾಹಿತಿ ನೀಡಿ, ಕರ್ನಾಟಕದ ವಾಸ್ತವ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್ ಹಾಗೂ ಪ್ರಾಧಿಕಾರದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಬೇಕು ಎಂದು ಹೇಳಿದರು. ಕಾವೇರಿ ನೀರಿನ ಪ್ರಶ್ನೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಹೋರಾಡಬೇಕು. ಬಂದ್ ನಡೆಸುವುದಕ್ಕಿಂತ ವಾಸ್ತವ ಸ್ಥಿತಿಯನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಹೆಚ್ಚು ಪರಿಣಾಮಕಾರಿ. ನೀರು ಇದ್ದಾಗ ಕರ್ನಾಟಕ ಯಾವತ್ತೂ ತಮಿಳುನಾಡಿಗೆ ನೀರು ನೀಡದೆ ಕುಳಿತಿಲ್ಲ. ಆದರೆ ರಾಜ್ಯದ ರೈತರ ಬದುಕನ್ನೂ ಸಮಾನವಾಗಿ ಪರಿಗಣಿಸುವ ನ್ಯಾಯ ದೊರಕಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಚ್.ಪಿ. ಸ್ವರೂಪ್, ಸಿ.ಎನ್. ಬಾಲಕೃಷ್ಣ, ಬೋಜೇಗೌಡ, ಜೆಡಿಎಸ್ ಪಕ್ಷದ ಮುಖಂಡರಾದ ಬಿದರಿಕೆರೆ ಜಯರಾಂ ಇತರರು ಉಪಸ್ಥಿತರಿದ್ದರು.=====
ಬಾಕ್ಸ್: ಹೋರಾಟ ರಾಜಕೀಯಕ್ಕಾಗಿ ಅಲ್ಲ: ಎಚ್ಡಿಕೆಇದೀಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನಿಯಂತ್ರಣ ಸಮಿತಿ ಪ್ರತಿದಿನ ೩,೫೦೦ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ, ಮುಂದಿನ ೧೫ ದಿನಗಳಲ್ಲಿ ಸುಮಾರು ನಾಲ್ಕೂವರೆ ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಇದರಿಂದ ರಾಜ್ಯದ ರೈತರಲ್ಲಿ ತೀವ್ರ ಆತಂಕ ಉಂಟಾಗಿದ್ದು, ರೈತಪರ ಸಂಘಟನೆಗಳು ಹೋರಾಟ ಆರಂಭಿಸಿವೆ. ಬಿಜೆಪಿ ಸಹ ಕೆಆರ್‌ಎಸ್ ಬಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದನ್ನು ಉಲ್ಲೇಖಿಸಿದ ಅವರು, ಪ್ರತಿಭಟನೆ ತಪ್ಪಲ್ಲ ಆದರೆ ಅದು ರೈತರ ಹಿತಕ್ಕಾಗಿ ಇರಬೇಕು. ರಾಜಕೀಯಕ್ಕಾಗಿ ಅಲ್ಲ ಎಂದು ಹೇಳಿದರು.
==*ಬಾಕ್ಸ್::: ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ:
ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ರೈತರಿಗೆ ಆತ್ಮಸ್ಥೈರ್ಯ ತುಂಬುವ ಬದಲು ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲೇ ನಿರತರಾಗಿದೆ ಎಂದು ಟೀಕಿಸಿದರು. ಗೃಹಲಕ್ಷ್ಮಿ ಸೇರಿದಂತೆ ಕೆಲವು ಯೋಜನೆಗಳನ್ನು ಎರಡು ವರ್ಷ ಮುಂದೂಡಿದರೂ ಜನರು ವಿರೋಧಿಸುವುದಿಲ್ಲ. ಆ ಹಣವನ್ನು ರೈತರ ನೆರವಿಗೆ ಬಳಸಬೇಕು. ಬರಗಾಲದಿಂದ ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಜನರು ವಲಸೆ ಹೋಗುತ್ತಿದ್ದಾರೆ. ಜಾನುವಾರುಗಳು ಆಹಾರ ಮತ್ತು ನೀರಿಲ್ಲದೆ ಸಾವನ್ನಪ್ಪುತ್ತಿವೆ. ಬಜೆಟ್‌ನಲ್ಲಿ ಘೋಷಿಸಿದ ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.