ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಶ್ರೀ ಕ್ಷೇತ್ರ ಧರ್ಮಸ್ಥಳದ ಬುರುಡೆ ಪ್ರಕರಣವನ್ನು ರಾಜ್ಯ ಸರ್ಕಾರ ನಿಭಾಯಿಸುತ್ತಿರುವ ರೀತಿಯನ್ನು ಖಂಡಿಸಿ ಭಾರತೀಯ ಜನತಾಪಾರ್ಟಿಯ ಹುಣಸೂರು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟಿಸಿದರು.ಸಂವಿಧಾನ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪಕ್ಷದ ಕಾರ್ಯಕರ್ತರು ದಾರಿಯುದ್ದಕ್ಕೂ ಬುರುಡೆ ಗ್ಯಾಂಗ್ ವಿರುದ್ಧ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಪಪ್ರಚಾರ ಮಾಡುತ್ತಿರುವವರ ಬಂಧನ ಯಾವಾಗ? ಧರ್ಮಸ್ಥಳದ ಪಾವಿತ್ರ್ಯತೆ ಹಾಳುಗೆಡುವುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಧರ್ಮಕ್ಕೆ ಜಯವಾಗಲಿ, ದುಷ್ಠರ ಸಂಹಾರವಾಗಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ (ಗ್ರಾಮಾಂತರ) ಹಾಗೂ ನಗರಸಭಾಧ್ಯಕ್ಷ ಗಣೇಶ್, ಕುಮಾರಸ್ವಾಮಿ, ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಲು ನಿರಂತರವಾಗಿ ಶ್ರಮಿಸುತ್ತಿರುವ ಎಡಪಂಥೀಯರ ಜೊತೆಗೂಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂಗಳ ಶ್ರದ್ಧಾಕೇಂದ್ರಗಳ ವಿರುದ್ಧ ಗದಾಪ್ರಹಾರ ನಡಸುತ್ತಿದೆ. ಇದ್ದಕ್ಕಿದ್ದಂತೆ ಎಸ್.ಐಟಿ ರಚನೆ ಮಾಡಿದ್ದಾರೆ. ಮಂಜುನಾಥಸ್ವಾಮಿ ದೇಗುಲದ ವಿರುದ್ಧ ಅಪಚಾರ ನಡೆಸಲು ನಡೆದಿರುವ ಹುನ್ನಾರಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿದೆ. ಅಪಪ್ರಚಾರ ನಡೆಸುತ್ತಿರುವವರನ್ನು ಬಂಧಿಸಿ ಕಾನೂನಿನ ಕೈಗೆ ಒಪ್ಪಿಸುವ ಕಾರ್ಯ ರಾಜ್ಯ ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು.ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಭಾವನೆಗೆ, ಹಿಂದೂ ಸಮುದಾಯಕ್ಕೆ ಅನ್ಯಾಯವನ್ನೇ ಮಾಡುತ್ತಿದೆ. ಇದೀಗ ಚಾಮುಂಡಿಬೆಟ್ಟ ಕೂಡ ಹಿಂದುಗಳ ಆಸ್ತಿಯಲ್ಲವೆಂಬ ಉಪಮುಖ್ಯಮಂತ್ರಿಯ ಹೇಳಿಕೆ ಕಾಂಗ್ರೆಸ್ ಗೆ ಹಿಂದೂಗಳ ವಿರುದ್ಧದ ಭಾವನೆಗೆ ಸಾಕ್ಷಿಯಾಗಿದೆ. ಅನ್ನ, ಅಕ್ಷರ ಮತ್ತು ಸೇವಾ ಕಾರ್ಯದಲ್ಲಿ ವಿಶ್ವದಲ್ಲೆಡೆ ಜಾತಿ, ಮತ, ಪಂಥಗಳನ್ನು ಮೀರಿ ಬೆಳೆದಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಕುರಿತು, ಧರ್ಮಾಧಿಕಾರಿ ಪೂಜ್ಯ ಹೆಗ್ಡಡೆಯವರ ಕುರಿತು ರಾಜ್ಯ ಸರ್ಕಾರದ ನಿಲುವು ಖಂಡನೀಯವೆಂದು ಟೀಕಿಸಿದರು.ಮುಖಂಡರಾದ ಸೋಮಶೇಖರ್, ನಾಗರಾಜ ಮಲ್ಲಾಡಿ, ಚಂದ್ರಶೇಖರ್ ಮಾತನಾಡಿದರು.ಸಂವಿಧಾನ ವೃತ್ತದಿಂದ ಎಸ್.ಜೆ. ರಸ್ತೆ, ಜೆಎಲ್‌ಬಿ ರಸ್ತೆ, ಬಜಾರ್ ರಸ್ತೆಯನ್ನು ಹಾದು ಗೋಕುಲ ರಸ್ತೆಯ ಮೂಲಕ ತಾಲುಕು ಕಚೇರಿಗೆ ತಲುಪಿದರು. ತಹಸೀಲ್ದಾರ್ ಜೆ. ಮಂಜುನಾಥ್ ಪ್ರತಿಭಟನಾಕಾರರಿಂದ ಮನವಿಪತ್ರ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ವಿವೇಕಾನಂದ, ಕಾರ್ಯದರ್ಶಿ ಸತೀಶ್, ಬಿಳಿಕೆರೆ ಘಟಕದ ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ನಗರಮಂಡಲ ಅಧ್ಯಕ್ಷ ನಾರಾಯಣ, ರವಿಕುಮಾರ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ವೆಂಕಟಮ್ಮ, ನಗರಮಂಡಲ ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷ ಯಶೋಧಮ್ಮ, ತಾಲೂಕು ಉಪಾಧ್ಯಕ್ಷೆ ಅಸ್ವಾಳು ಮಂಜುಳಮ್ಮ ಇದ್ದರು.