ಗೋವನ್ನು ರಾಷ್ಟ್ರೀಯ ಪಶು ಎಂಬುದಾಗಿ ಘೋಷಿಸುವ ಮೂಲಕ ದೇಶದಲ್ಲಿ ಗೋ ಹತ್ಯೆ ತಡೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗಲಿ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುಭಾನ್ ಖಾನ್ ಒತ್ತಾಯಿಸಿದ್ದಾರೆ.
- ದೇಶದಲ್ಲಿ ಗೋ ಹತ್ಯೆ ತಡೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗಲಿ: ಸುಭಾನ್ ಖಾನ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಗೋವನ್ನು ರಾಷ್ಟ್ರೀಯ ಪಶು ಎಂಬುದಾಗಿ ಘೋಷಿಸುವ ಮೂಲಕ ದೇಶದಲ್ಲಿ ಗೋ ಹತ್ಯೆ ತಡೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗಲಿ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುಭಾನ್ ಖಾನ್ ಒತ್ತಾಯಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ರಕ್ಷಣೆ ಹೆಸರಿನ ಹಿಂಸಾಚಾರ, ಅಪರಾಧ, ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂಬುದಾಗಿ ಘೋಷಿಸಿದರೆ, ಕಾನೂನು ಭಯಕ್ಕಾದರೂ ಯಾರೂ ಗೋ ವಧೆ ಮಾಡುವುದಿಲ್ಲ ಎಂದರು.
ನವಿಲನ್ನು ರಾಷ್ಟ್ರೀಯ ಪಕ್ಷಿಯೆಂದು ಘೋಷಿಸಲಾಗಿದೆ. ಅದೇ ರೀತಿ ಹಸುವನ್ನೂ ರಾಷ್ಟ್ರೀಯ ಪಶು ಎಂಬುದಾಗಿ ಕೇಂದ್ರ ಸರ್ಕಾರ ಘೋಷಿಸಲಿ. ಗೋ ಹತ್ಯೆ ಮಾಡುವವರಿಗೆ ಕನಿಷ್ಠ 5ರಿಂದ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಕಾನೂನು ತರಲಿ. ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ವಿಶ್ವ ಮುಸ್ಲಿಂ ಪರಿಷತ್ ಮನವಿ ಮಾಡಿ, ಒತ್ತಾಯಿಸಲಿದೆ ಎಂದು ಹೇಳಿದರು.ದಾವಣಗೆರೆಯ ಆಜಾದ್ ನಗರ, ಭಾಷಾ ನಗರ ಭಾಗದಲ್ಲಿ ಸುಮಾರು 60, ಕೆಟಿಜೆ ನಗರದ ಭಾಗದಲ್ಲಿ 10 ಕಸಾಯಿಖಾನೆಗಳಿವೆ. ಬಹುತೇಕ ಕಸಾಯಿಖಾನೆಗಳಿಗೆ ಲೈಸೆನ್ಸ್ ಇಲ್ಲ. ನಿತ್ಯ ಇಲ್ಲಿ ಸುಮಾರು 100-150 ಗೋವು ವಧೆಯಾಗುತ್ತಿವೆ. ಈ ಬಗ್ಗೆ ಮುಸ್ಲಿಮರಲ್ಲಿ ಜಾಗೃತಿ ಮೂಡಿಸಲು ಇಲ್ಲಿಂದಲೇ ಅಭಿಯಾನ ಆರಂಭಿಸಿದ್ದೇವೆ. ಅಕ್ರಮ ಕಸಾಯಿಖಾನೆ, ಮಾಂಸದಗಂಡಿಗಳನ್ನು ಬಂದ್ ಮಾಡಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಪಾಲಿಕೆಗಳು ಮುಂದಾಗಲಿ ಎಂದು ಆಗ್ರಹಿಸಿದರು.
ಹೆಂಡದ ಅಂಗಡಿಗಳೇ ಇಲ್ಲದಿದ್ದರೆ ಜನರು ಕುಡಿಯುವುದಕ್ಕೆ ಹೋಗುವುದಿಲ್ಲ. ಅದೇ ರೀತಿ ಇಂತಹ ಅಕ್ರಮ ಕಸಾಯಿಖಾನೆಗಳನ್ನು ಕಾನೂನು ಚೌಕಟ್ಟಿನಲ್ಲಿ ಬಂದ್ ಮಾಡಿಸಿದರೆ ಗೋ ಹತ್ಯೆ ತಾನಾಗಿಯೇ ನಿಲ್ಲುತ್ತದೆ. ಗೋಹತ್ಯೆ ತಡೆಯುವ ಹೆಸರಿನಲ್ಲಿ ಕೆಲವರು ಜನರಿಗೆ ಹಲ್ಲೆ ಮಾಡಿ, ಹಣ ವಸೂಲಿ ಮಾಡುವುದು, ಕಾನೂನು ಕೈಗೆತ್ತಿಕೊಳ್ಳುವುದನ್ನು ಮಾಡುತ್ತಿದ್ದಾರೆ. ಇಂತಹದ್ದಕ್ಕೆಲ್ಲಾ ಅವಕಾಶ ಮಾಡಿಕೊಡಬಾರದು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮಹಾಸಭಾದಿಂದ ಮನವಿ ಅರ್ಪಿಸುತ್ತೇವೆ ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ರಕ್ಷಣೆಯೊಂದಿಗೆ ನಾವೇ ಖುದ್ದಾಗಿ ನಿಂತು, ಗೋ ಹತ್ಯೆ ಮತ್ತು ಅಕ್ರಮ ಗೋ ಸಾಗಾಟವನ್ನು ತಡೆಯುತ್ತೇವೆ. ದೇಶದಲ್ಲಿ ಗೋಹತ್ಯೆ ವಿಚಾರವಾಗಿ ನಡೆಯುತ್ತಿರುವ ಗಲಾಟೆ, ಹಿಂಸಾಚಾರಗಳನ್ನು ತಡೆಯುವ ಕೆಲಸವಾಗಬೇಕು. ಮುಸ್ಲಿಮರಿಗೆ ನನ್ನದೊಂದು ಕಳಕಳಿಯ ಪ್ರಾರ್ಥನೆ ಇದ್ದು, ದಯವಿಟ್ಟು ಗೋಹತ್ಯೆ ನಿಲ್ಲಿಸಿ. ಇನ್ನು ಮುಂದೆ ಯಾವುದೇ ಹಬ್ಬ ಅಥವಾ ದಿನಗಳಲ್ಲಿ ಹಸುಗಳನ್ನು ಕೊಲ್ಲಬೇಡಿ. ಮುಸ್ಲಿಂ ಧಾರ್ಮಿಕ ಮುಖಂಡರಾದ ಮೌಲ್ವಿಗಳು ಸಹ ಈ ಬಗ್ಗೆ ಫತ್ವಾ ಹೊರಡಿಸಿದ್ದಾರೆ. ಹಸುಗಳನ್ನು ಖರೀದಿಸದಂತೆ ಹಾಗೂ ಗೋ ಮಾಂಸ ತಿನ್ನದಂತೆ ಕರೆ ನೀಡಿದ್ದನ್ನು ನಾವೆಲ್ಲರೂ ಕಡ್ಡಾಯವಾಗಿ ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಳೆದ 15 ವರ್ಷದಿಂದ ಪರಿಷತ್ ಕಾರ್ಯ ನಿರ್ವಹಿಸುತ್ತಿದ್ದು, ಈಗ ಸಂಘಟನೆ ಪುನಃ ಸಕ್ರಿಯಗೊಳಿಸಲಾಗಿದೆ. ಮುಸ್ಲಿಮರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ, ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗುವಂತೆ ಪ್ರೇರೇಪಿಸುವ ಜೊತೆಗೆ ಗೋ ರಕ್ಷಣೆ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗಾಣಿಸಿ, ಶಾಂತಿ, ಸೌಹಾರ್ದ, ಸಾಮರಸ್ಯ ಸ್ಥಾಪಿಸುವ ಉದ್ದೇಶದಿಂದ ಗೋಹತ್ಯೆ ನಿಷೇಧ ಅಭಿಯಾನ ಆರಂಭಿಸುತ್ತಿದ್ದೇವೆ. ಮುಸ್ಲಿಂ ಸಮುದಾಯಕ್ಕೆ ಈ ಮಣ್ಣಿನ ಕಾನೂನೇ ಬೇಕು. ಅದನ್ನು ನಾವೂ ಪಾಲನೆ ಮಾಡುತ್ತೇವೆ ಎಂದು ಸುಭಾನ್ ಖಾನ್ ಹೇಳಿದರು.ಪರಿಷತ್ ಮುಖಂಡರಾದ ಅಲ್ಲಾಬಕ್ಷಿ, ನೂರುಲ್ಲಾ, ಶೇಕ್ ಅಹಮ್ಮದ್, ಫರ್ವೇಜ್ ಇತರರು ಇದ್ದರು.
- - -(ಬಾಕ್ಸ್)
* ವಿರೋಧ ಕಟ್ಟಿಕೊಂಡು ಗೋಹತ್ಯೆ ಮಾಡೋದು ಬೇಡ ಗೋವುಗಳ ವಿಚಾರದಲ್ಲಿ ದಾವಣಗೆರೆಯಲ್ಲೂ ಹೊಡೆದಾಟಗಳಾಗಿವೆ. 2-3 ದಿನಗಳ ಹಿಂದೆ ಭಾಷಾ ನಗರಕ್ಕೂ ನುಗ್ಗಿ, ಗೋ ಹತ್ಯೆಗೆ ಬಿಡುವುದಿಲ್ಲವೆಂದು ಹೇಳಿದ್ದರು. ಕೆಲವರ ಮನಸ್ಸನ್ನು ನೋಯಿಸಿ, ಗೋ ಹತ್ಯೆ ಮಾಡುವುದು ಬೇಡವೆಂದು ಮುಸ್ಲಿಮರಿಗೂ ನಾನು ಮನವಿ ಮಾಡುತ್ತೇನೆ. ದೇಶದಲ್ಲಿ ಸರ್ವಧರ್ಮೀಯರೂ ಸಹೋದರರಿದ್ದಂತೆ. ವಿರೋಧ ಕಟ್ಟಿಕೊಂಡು ಗೋಹತ್ಯೆ ಮಾಡುವುದು ಬೇಡ. ಗೋ ಹತ್ಯೆ ನಿಷೇಧ ಅಭಿಯಾನ ಇಲ್ಲಿಂದಲೇ ಶುರು ಮಾಡುತ್ತೇವೆ. ನಾವೇ ಮುಂದೆ ನಿಂತು ಗೋ ಕಳ್ಳತನ, ಗೋ ಸಾಗಾಣಿಕೆ, ಗೋ ಹತ್ಯೆ ನಿಲ್ಲಿಸುತ್ತೇವೆ. ಪೊಲೀಸರಿಗೂ ಮಾಹಿತಿ ನೀಡುತ್ತೇವೆ. ನಮಗೆ ಹಿಂಸೆ ಬೇಡ, ಅಹಿಂಸೆಯ ದಾರಿಯಲ್ಲಿ ನಾವು, ನೀವು ಸಾಗೋಣ. ಗೋ ಹತ್ಯೆ ತಡೆಯುವುದು ಪರಿಷತ್‌ನಲ್ಲಿ ಹೊಸ ಸೇರ್ಪಡೆಯಾಗಿದೆ. ಬಕ್ರೀದ್ ಹಬ್ಬದಲ್ಲಿ ಮತ್ತು ಬೇರೆ ದಿನಗಳಲ್ಲಿ ಮುಸ್ಲಿಂ ಬಾಂಧವರು ಗೋ ಹತ್ಯೆ ನಿಲ್ಲಿಸಬೇಕು ಎಂದು ಸುಭಾನ್ ಖಾನ್ ಹೇಳಿದರು.- - -
-27ಕೆಡಿವಿಜಿ1, 2: ದಾವಣಗೆರೆಯಲ್ಲಿ ಬುಧವಾರ ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುಭಾನ್ ಖಾನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.