ಮುಂಗಾರಿನಲ್ಲಿ ಬಿದ್ದ ಅಲ್ಪ ಮಳೆ ನಂಬಿ ತಾಲೂಕಿನಲ್ಲಿ ಶೇ. 90ರಷ್ಟು ಬಿತ್ತನೆ ಮಾಡಲಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಮೊಳಕೆಯೊಡೆದ ಬೆಳೆ ಒಣಗಿಹೋಗಿವೆ.
ಕುಂದಗೋಳ:
ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿ ಬೆಳೆ ಹಾಳಾಗಿವೆ. ರೈತರು ಸಂಕಷ್ಟದಲ್ಲಿದ್ದು ತಕ್ಷಣ ಕುಂದಗೋಳ ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕು ಎಂದು ಶಾಸಕ ಎಂ.ಆರ್. ಪಾಟೀಲ ಆಗ್ರಹಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಬರ ಪರಿಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆ ಬಿಚ್ಚಿಟ್ಟರು. ಮುಂಗಾರಿನಲ್ಲಿ ಬಿದ್ದ ಅಲ್ಪ ಮಳೆ ನಂಬಿ ತಾಲೂಕಿನಲ್ಲಿ ಶೇ. 90ರಷ್ಟು ಬಿತ್ತನೆ ಮಾಡಲಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಮೊಳಕೆಯೊಡೆದ ಬೆಳೆ ಒಣಗಿಹೋಗಿವೆ. ಹೀಗಾಗಿ ರೈತರು ಬೆಳೆ ಹರಗಿ ಮತ್ತೆ ಬಿತ್ತನೆ ಮಾಡಿದ್ದರು. ಆದರೆ 2ನೇ ಬಾರಿಯೂ ಮಳೆ ಕೈಕೊಟ್ಟಿದ್ದರಿಂದ ಬೆಳೆ ಬಾರದೆ ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ ಎಂದರು.
ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಯಿಂದ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಅಡ್ಡಿಯಾಗಿದೆ. ಈ ತಾಂತ್ರಿಕ ಸಮಸ್ಯೆ ಸರಿಪಡಿಸಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೂಲಕವೂ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದ್ದಾರೆ.ಈಗಾಗಲೇ ಕೇಂದ್ರ ಅಧ್ಯಯನ ತಂಡ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಿಜೆಪಿ ಬರ ಅಧ್ಯಯನ ತಂಡ ತಾಲೂಕಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿವೆ. ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರ ತಕ್ಷಣವೇ ವಾಸ್ತವ ಸ್ಥಿತಿ ಪರಿಗಣಿಸಿ ಕುಂದಗೋಳವನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು. ಇಲ್ಲವಾದಲ್ಲಿ ರೈತರು ಹಾಗೂ ನಾಗರಿಕರೊಂದಿಗೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನೆಹರು ಪಾಟೀಲ್, ತಹಸೀಲ್ದಾರ್ ರಾಜು ಮಾವರಕರ ಹಾಗೂ ತಾಪಂ ಇಒ ರೇಣುಕಾ ಗಡ್ಡದ ಉಪಸ್ಥಿತರಿದ್ದರು.