ಸಾರಾಂಶ
- ಜಿಲ್ಲಾ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರೇಣುಕಮ್ಮ ಆಗ್ರಹ । ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿ, ಸಹಾಯಧನವನ್ನು ಬಜೆಟ್‌ನಲ್ಲಿ ಕನಿಷ್ಠ ₹3 ಸಾವಿರ ರು.ಗೆ ಹೆಚ್ಚಿಸಬೇಕು, ಸಮೀಕ್ಷೆಯಲ್ಲಿ ಕೈಬಿಟ್ಟ ದೇವದಾಸಿ ಮಹಿಳೆಯರ ಮತ್ತು ಎಲ್ಲ ದೇವದಾಸಿ ಮಹಿಳೆಯರ ಕುಟುಂಬ ಸರ್ವೇ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಘಟಕ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸಂಘಟನೆ ಹಿರಿಯ ಮುಖಂಡರಾದ ರೇಣುಕಮ್ಮ ಇತರರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಪ್ರತಿಭಟನಾನಿರತ ಮಹಿಳೆಯರು, ಕುಟುಂಬ ವರ್ಗದವರು ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗೆ ಮನವಿ ರವಾಹಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷೆ ಟಿ.ವಿ.ರೇಣುಕಮ್ಮ ಮಾತನಾಡಿ, ಜಿಲ್ಲೆಯಲ್ಲಿ ದೇವದಾಸಿ ಮಹಿಳೆಯರು, ಮತ್ತವರ ಮಕ್ಕಳು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಡುತ್ತಿದ್ದರೂ, ಕೆಲವೇ ಸೌಲಭ್ಯಗಳು ಮಾತ್ರ ಸಿಕ್ಕಿವೆ. ಸಾವಿರಾರು ಕುಟುಂಬಗಳು ಸರ್ಕಾರದ ಪಟ್ಟಿಯಲ್ಲಿ ಸೇರಿಸಿದ ಕಾರಣ ಸೌಲಭ್ಯ ವಂಚಿತರಾಗಿದ್ದಾರೆ ಎಂದು ದೂರಿದರು.ಎಲ್ಲ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿ, ಸಹಾಯಧನವನ್ನು ಬಜೆಟ್‌ನಲ್ಲಿ ಕನಿಷ್ಠ ₹3 ಸಾವಿರಕ್ಕೆ ಹೆಚ್ಚಿಸಬೇಕು, ಸಮೀಕ್ಷೆ ಪಟ್ಟಿಯಲ್ಲಿ ಕೈಬಿಟ್ಟ ದೇವದಾಸಿ ಮಹಿಳೆಯರು ಮತ್ತು ಎಲ್ಲ ದೇವದಾಸಿ ಮಹಿಳೆಯರ ಕುಟುಂಬದ ಸರ್ವೇ ಕಾರ್ಯ ಆರಂಭಿಸಬೇಕು. ದೇವದಾಸಿ ಮಹಿಳೆಯರಿಗೆ ಸ್ವಯಂ ಉದ್ಯೋಗದಡಿ ₹30 ಸಾವಿರ ಸಹಾಯಧನ ನೀಡುತ್ತಿದ್ದು, 3 ವರ್ಷಗಳಿಂದ ಈ ನೆರವು ನಿಲ್ಲಿಸಲಾಗಿದೆ. ಸ್ವಉದ್ಯೋಗಕ್ಕೆ ₹1 ಲಕ್ಷ ಬದಲಿಗೆ, ₹1.5 ಲಕ್ಷ ಆರ್ಥಿಕ ನೆರವು ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ದೇವದಾಸಿ ಮಹಿಳೆಯರ ವಸತಿಗಾಗಿ ಉಚಿತ ನಿವೇಶನ ನೀಡಿ, ರಾಜೀವ್ ಗಾಂಧಿ ವಸತಿ ಯೋಜನೆಯಜಿ ಪಕ್ಕಾ ಮನೆ ಕಟ್ಟಿಕೊಡಬೇಕು. ದುರ್ಬಲ ಮಹಿಳೆಯರು ವಂತಿಗೆ ನೀಡಲು ಸಾಧ್ಯವಾಗದೇ ನಿವೇಶನ, ಸೂರು ಪಡೆಯಲಾಗುತ್ತಿಲ್ಲ. ಒಪ್ಪಿಕೊಂಡ ಮನೆಗಳು ವಂತಿಗೆ ನೀಡಲು ಆಗದ್ದರಿಂದ ಪೂರ್ಣಗೊಳ್ಳದೇ ಅರ್ಧಕ್ಕೆ ನಿಲ್ಲುತ್ತಿವೆ. ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸುತ್ತಿವೆ. ಈ ಹಿನ್ನೆಲೆ ಸರ್ಕಾರವೇ ವಂತಿಗೆ ನೀಡಿ, ಸೂರು ಕಲ್ಪಿಸಬೇಕು. ದೇವದಾಸಿ ಮಹಿಳೆಯರು ಮತ್ತವರ ಕುಟುಂಬದ ಸದಸ್ಯರಿಗೆ ತಲಾ 5 ಎಕರೆ ಭೂಮಿ ನೀಡಬೇಕು. ಜಿಲ್ಲೆಯ ಸರ್ಕಾರಿ ಭೂಮಿಯಲ್ಲಿ ದೇವದಾಸಿ ಮಹಿಳೆಯರಿಗೆ ಖಾಲಿ ಜಾಗ ನೀಡಲು ಕ್ರಮ ಕೈಗೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಮಾರ್ಚ್ ತಿಂಗಳಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಈ ಸವಲತ್ತುಗಳೆಲ್ಲ ಘೋಷಣೆ ಮಾಡಬೇಕು ಎಂದು ಟಿ.ವಿ.ರೇಣುಕಮ್ಮ ಒತ್ತಾಯಿಸಿದರು.ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ.ಎಚ್. ಆನಂದರಾಜು, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾಧ್ಯಕ್ಷೆ ಚನ್ನಮ್ಮ, ಕಾರ್ಯದರ್ಶಿ ಮಂಜುಳಾ, ದೇವೀರಮ್ಮ, ಹೊನ್ನಮ್ಮ, ಮೈಲಮ್ಮ, ಹುಚ್ಚಮ್ಮ, ಶಾಂತಮ್ಮ, ದೇವದಾಸಿ ಮಹಿಳೆಯರು, ಮತ್ತವರ ಕುಟುಂಬದವರು ಇದ್ದರು.
- - -ಬಾಕ್ಸ್* ಆನ್ ಲೈನ್ ಸಮೀಕ್ಷೆ ತಕ್ಷಣವೇ ತಡೆಹಿಡಿಯಿರಿ ಆನ್‌ಲೈನ್‌ನಲ್ಲಿ ದೇವದಾಸಿಯರ ಸಮೀಕ್ಷೆ ಕೈಗೊಂಡಿದ್ದಾರೆ. ಇದರಿಂದಾಗಿ ಆನ್ ಲೈನ್ ಮೂಲಕ ಮಾಹಿತಿ ಭರ್ತಿ ಮಾಡಲು ದೇವದಾಸಿ ಮಹಿಳೆಯರು ಕುಟುಂಬ ಸಮೇತ ಹೋಗಬೇಕಾಗಿದೆ. ಇದು ಕಷ್ಟ ಹಾಗೂ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತಿದೆ. ನಿಜವಾದ ಫಲಾನುಭವಿಗಳೇ ಅಲ್ಲದವರೂ ಪಟ್ಟಿಗೆ ಸೇರಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಮುಖಂಡರು ಆರೋಪಿಸಿದರು.
ಈ ಹಿನ್ನೆಲೆ ಮಹಿಳಾ ಅಭಿವೃದ್ಧಿ ನಿಗಮ ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರ ಗಣತಿಗೆ ಮುಂದಾಗಬೇಕು. ಆನ್ ಲೈನ್ ಸಮೀಕ್ಷೆ ತಕ್ಷಣವೇ ತಡೆಹಿಡಿಯಬೇಕು. ಈ ಹಿಂದೆ ಇದ್ದಂತೆ ಅಂಗನವಾಗಿ ಕೇಂದ್ರಗಳ ಕಾರ್ಯಕರ್ತೆಯರ ಮೂಲಕವೇ ದೇವದಾಸಿಯರ ಗಣತಿ ಕಾರ್ಯ ಕೈಗೊಳ್ಳಲು ಸರ್ಕಾರವು ಸಂಬಂಧಿಸಿದ ಮಂಡಳಿ, ಇಲಾಖೆಗೆ ನಿರ್ದೇಶನ ನೀಡಬೇಕು ಎಂದರು.- - - -24ಕೆಡಿವಿಜಿ1.ಜೆಪಿಜಿ:
ದೇವದಾಸಿ ಮಹಿಳೆಯರ ವಿವಿಧ ಬೇಡಿಕೆಗಳನ್ನು ಸರ್ಕಾರ ಶೀಘ್ರ ಈಡೇರಿಸಲು ಒತ್ತಾಯಿಸಿ, ದಾವಣಗೆರೆ ಡಿಸಿ ಕಚೇರಿ ಎದುರು ಸೋಮವಾರ ಜಿಲ್ಲಾ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಪ್ರತಿಭಟಿಸಲಾಯಿತು.