- ಎಸಿ ಕಚೇರಿ ಮುಖೇನ ರಾಷ್ಟ್ರಪತಿ, ಪ್ರಧಾನಿ, ಸಿಎಂಗೆ ಮನವಿ । ಗೋಮಾತಾ ಗೌರವ ಅಭಿಯಾನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗೋಮಾತೆಯನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸುವ ಜೊತೆಗೆ ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಒತ್ತಾಯಿಸಿ ದೇಶಾದ್ಯಂತ ಕೈಗೊಂಡಿರುವ ಗೋಮಾತಾ ಗೌರವ ಅಭಿಯಾನದ ಪ್ರಯುಕ್ತ ಹಿಂದೂ ಸಮನ್ವಯ ಸಮಿತಿಯಿಂದ ನಗರದಲ್ಲಿ ಸೋಮವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸೋಮವಾರ ಇಲ್ಲಿನ ಜಯದೇವ ವೃತ್ತದಿಂದ ಗೋಮಾತೆಯೊಂದಿಗೆ ಮೆರವಣಿಗೆ ನಡೆಸಿದ ಸಮಿತಿ ಮುಖಂಡರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಎಸಿ ಮುಖಾಂತರ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.


ಸಮಿತಿ ಸಂಚಾಲಕ ಆಲೂರು ಲಿಂಗರಾಜ ಮಾತನಾಡಿ, ಪ್ರಸ್ತುತ ದೇಶದಲ್ಲಿ ಪವಿತ್ರ ದೇಸಿ ಗೋವಂಶದ ಸಂಖ್ಯೆಯು ನಿರಂತರವಾಗಿ ಇಳಿಮುಖವಾಗುತ್ತಿದೆ. ದೇಸಿ ಗೋವಂಶವು ಬೀದಿಗೆ ಬಿದ್ದಿದೆ. ಅನ್ನದಾತ ರೈತರನ್ನು ರಾಸಾಯನಿಕ ಗೊಬ್ಬರಗಳ ಹಾನಿಕಾರಕ ಚಕ್ರದಿಂದ ಮುಕ್ತಗೊಳಿಸಲು ಗೋವು ಆಧಾರಿತ ನೈಸರ್ಗಿಕ ಕೃಷಿಯೇ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದರು.

ಕೃಷಿ ಮತ್ತು ಪಶು ಸಂಗೋಪನೆ ಆಧುನಿಕ ಮತ್ತು ವೈಜ್ಞಾನಿಕ ತತ್ವಗಳ ಆಧಾರದ ಮೇಲೆ ಸಂಘಟಿಸಲು ಪ್ರಯತ್ನಿಸಬೇಕು. ಸರ್ಕಾರಿ ಕಟ್ಟಡ, ಆಸ್ಪತ್ರೆಗಳನ್ನು ಗೋಮಯ ಬಣ್ಣಕ್ಕೆ ಬದಲಾಯಿಸಬೇಕು. ಆಯುರ್ವೇದ ಆಸ್ಪತ್ರೆಗಳಲ್ಲಿ ಪಂಚಗವ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಬೇಕು. ದೇವಾಲಯಗಳಲ್ಲಿ ದೇಸಿ ಹಸುಗಳ ಹಾಲು, ಮೊಸರು ಮತ್ತು ತುಪ್ಪವನ್ನು ಬಳಸಬೇಕು. ಎಲ್ಲ ರಾಜ್ಯಗಳು ಗೋಶಾಲೆಗಳಿಗೆ ವಿಶೇಷ ಅನುದಾನ ನೀಡಬೇಕು. ಮೇವಿನ ಸರಿಯಾದ ಬೆಲೆ ನಿಗದಿಪಡಿಸಬೇಕು. ಗೋಹತ್ಯೆ ಮತ್ತು ಗೋ ಕಳ್ಳಸಾಗಣೆಯಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಿ, ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಪಂಚಗವ್ಯ ಆಸ್ಪತ್ರೆಗಳನ್ನು ಸ್ಥಾಪಿಸಬೇಕು. ಸಂಸ್ಕೃತ ಕಾಲೇಜುಗಳಲ್ಲಿ ಗೋಸೇವಾ ತರಬೇತಿ ಕಡ್ಡಾಯವಾಗಿ ನಡೆಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಸಮಿತಿ ಮುಖಂಡರಾದ ಪರಶುರಾಮ ನಡುಮನಿ, ರಾಜು ವೀರಣ್ಣ, ಗೌತಮ್ ಜೈನ್, ಪ್ರವೀಣ ಜಾಧವ್, ಕಿರಣಕುಮಾರ್, ಗಣೇಶ, ಅನಿಲ್, ಮಲ್ಲೇಶ ಭಜರಂಗದಳ, ಚೇತನ್, ಗುರು, ಬಸವರಾಜ, ಮಂಜು ಪೈಲ್ವಾನ್, ರವಿಗೌಡ್ರು, ಮಂಜುನಾಥ, ಅಜಯಕುಮಾರ್ ಇತರರು ಇದ್ದರು.

- - -

(ಬಾಕ್ಸ್‌) * ಬೇಡಿಕೆ ಈಡೇರುವವರೆಗೂ ಹೋರಾಟ ನಿರಂತರ ಗೋಮಾತೆಯ ಗೌರವ ಅಭಿಯಾನದ ಅಂಗವಾಗಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುತ್ತಿದ್ದೇವೆ. ಸರ್ಕಾರದಿಂದ ಸ್ಪಂದನೆ ವ್ಯಕ್ತವಾಗದಿದ್ದಲ್ಲಿ ಜುಲೈ 27ರಂದು ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಲಾಗುವುದು. ಅದಕ್ಕೂ ಸ್ಪಂದಿಸದಿದ್ದರೆ ಅಕ್ಟೋಬರ್ 27ರಂದು ರಾಜಧಾನಿಗೆ ತೆರಳಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಮುಖಾಂತರ ಮನವಿ ಸಲ್ಲಿಸಲಾಗುವುದು. 2027 ಜನವರಿ 14ರೊಳಗೆ ಸರ್ಕಾರ ಯಾವುದೇ ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ, ಫೆಬ್ರವರಿ 27ರಂದು ರಾಷ್ಟ್ರದ ರಾಜಧಾನಿ ದೆಹಲಿಗೆ ತೆರಳಿ ಪ್ರತಿಭಟನೆ ನಡೆಸುವ ಜೊತೆಗೆ ನಿಯಮಿತವಾಗಿ ಪತ್ರ ಬರೆಯುವ ಮೂಲಕ ಗೋಸೇವೆ, ಗೋರಕ್ಷಣೆ ಮತ್ತು ಗೋಗೌರವಕ್ಕಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಬೇಡಿಕೆ ಈಡೇರುವವರೆಗೂ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಆಲೂರು ಲಿಂಗರಾಜ ಎಚ್ಚರಿಸಿದರು.

- - -

-27ಕೆಡಿವಿಜಿ45, 46:

ದಾವಣಗೆರೆಯಲ್ಲಿಂದು ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಒತ್ತಾಯಿಸಿ ಗೋಮಾತಾ ಗೌರವ ಅಭಿಯಾನದ ಪ್ರಯುಕ್ತ ಹಿಂದೂ ಸಮನ್ವಯ ಸಮಿತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.