ಸಾರಾಂಶ
ಹಾಸನಾಂಬೆಯ ದರ್ಶನ ಮಾಡಿ ಹೇಳುತ್ತಿದ್ದೇನೆ । ಕಾಂಗ್ರೆಸ್‌ನ ಯಾವ ಕುತಂತ್ರವೂ ಫಲಿಸಲ್ಲ
ಕನ್ನಡಪ್ರಭ ವಾರ್ತೆ ಹಾಸನನನ್ನ ಮಗನನ್ನು ಮುಗಿಸಲು ಕಾಂಗ್ರೆಸ್ ನಾಯಕರು ಏನು ಕುತಂತ್ರ ಮಾಡಿದರೂ ಅದು ಸಾದ್ಯವಿಲ್ಲ. ಜನ ಚುನಾವಣೆಯಲ್ಲಿ ತೋರಿಸುತ್ತಾರೆ. ಚನ್ನಪಟ್ಟಣದಿಂದ ಕಾಂಗ್ರೆಸ್ ಅವನತಿ ಆರಂಭವಾಗುತ್ತದೆ. ಹಾಸನಾಂಬೆ ದರ್ಶನ ಮಾಡಿ ಹೇಳ್ತಾ ಇದೀನಿ ಬರೆದಿಟ್ಟುಕೊಳ್ಳಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
ನಗರದ ರಿಂಗ್ ರಸ್ತೆ ಬಳಿ ಇರುವ ಶಾಸಕ ಎಚ್.ಪಿ.ಸ್ವರೂಪ್ ನಿವಾಸದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಾಯುಭಾರ ಕುಸಿತದಿಂದ ಮಳೆಯ ಅನಾಹುತವಾಗಿದ್ದು, ರಾಜ್ಯದಲ್ಲಿ ರೈತರ ಬದುಕು ಧಾರುಣವಾಗಿದೆ. ಸಿಎಂ ಅವರು ಡಿಸಿ, ಸಿಎಸ್‌ಗಳ ಜತೆ ಸಭೆ ನಡೆಸಿದ್ದಾರೆ. ಸಭೆ ಬಳಿಕ ಸುಮಾರು ೮೦ ಸಾವಿರ ಹೆಕ್ಟೇರ್ ಭೂಮಿ ಬೆಳೆ ನಷ್ಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಅಂದಾಜಿನ ಪ್ರಕಾರವೇ ರೈತರ ಆತ್ಮಹತ್ಯೆ ಪ್ರಕರಣ ಶುರುವಾಗಿದೆ ಎಂದು ಹೇಳಿದರು.ಇನ್ನು ಹದಿನೈದು ದಿನದಲ್ಲಿ ಉಪಚುನಾವಣೆ ನಡೆಯಲಿದ್ದು, ಹಾನಿ ಬಗ್ಗೆ ಸಚಿವರ ಉಸ್ತುವಾರಿ ಇಲ್ಲ. ಆದರೆ ಚುನಾವಣೆ ಉಸ್ತುವಾರಿ ಆಗಿ ಬರುತ್ತಿದ್ದಾರೆ. ಸರ್ಕಾರ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ಮುಂದಾಗದೇ ಬರೀ ಸಭೆ ಮಾಡಿದರೆ ಆಗುವುದಿಲ್ಲ. ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಿ ಮಾಹಿತಿ ಪಡೆದು ರೈತರಿಗೆ ವಿಶ್ವಾಸ ತುಂಬ ಬೇಕು. ಚುನಾವಣೆ ಘೋಷಣೆ ಆಗಿ ನಾಮಪತ್ರ ಸಲ್ಲಿಕೆ ಆಗಿದೆ. ಚನ್ನಪಟ್ಟಣ ದೇಶದ ಗಮನ ಸೆಳೆಯೋದನ್ನು ಕಂಡಿದ್ದೇನೆ. ಚನ್ನಪಟ್ಟಣದ ವಿಷಯದಲ್ಲಿ ವಿರೋಧಿಗಳು ಕೊಡುತ್ತಿರುವ ಹೇಳಿಕೆಗೆ ಜನರೇ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರು ನನ್ನ ಮಗನನ್ನು ಅಭಿಮನ್ಯು ಮಾಡುವುದಿಲ್ಲ. ಅರ್ಜುನನ ಪಾತ್ರ ಕೊಡ್ತಾರೆ. ಖಂಡಿತಾ ಏನೇ ಕುತಂತ್ರ ಮಾಡಿದರೂ ಕೂಡ ಜನರು ನಿಖಿಲ್ ಗೆಲ್ಲಿಸುತ್ತಾರೆ. ಸಹೋದರರು ಎನು ನಿಲ್ಲಿಸಿಕೊಂಡಿದ್ದಾರೆ ಅವರು ಪರಸ್ಪರ ಏನು ಚರ್ಚೆ ಮಾಡಿಕೊಂಡಿದ್ದರು ಎಂದು ಗಮನಿಸಿದರೆ ಸಾಕು. ಆಗ ಜನರೇ ತೀರ್ಮಾನ ಮಾಡ್ತಾರೆ ಎಂದು ಕುಟುಕಿದರು.ಜಿಎಸ್‌ಟಿ ಹಂಚಿಕೆ ವಿಚಾರದಲ್ಲಿ ಗೊಂದಲ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇದು ನೀವೇ ಮಾಡಿದ್ದು, ಆಗ ಇದು ಅರ್ಥ ಆಗಿರಲಿಲ್ಲವೇ. ಮನಮೋಹನ್ ಸಿಂಗ್, ಚಿದಂಬರಂ ಅವರೆಲ್ಲಾ ಕುಳಿತು ಮಾಡಿದ್ದು ಅಲ್ಲವಾ. ಆಗ ಈ ಸಮಸ್ಯೆ ಆಗುತ್ತೆ ಎಂದು ಗೊತ್ತಿರಲಿಲ್ಲವೇ. ಕೊಟ್ಟ ಅನುದಾನವನ್ನು ಬಳಸಿಕೊಳ್ಳದೆ ಏನೇನೊ ಹೇಳಿದ್ರೆ ಆಗುವುದಿಲ್ಲ ಎಂದು ಲೇವಡಿ ಮಾಡಿದರು.
ನಾನು ಮಾಡುವ ಕೆಲಸ ಲೆಕ್ಕ ಕೇಳೋದು ಪ್ರದಾನಿ ಅವರು. ಕಾಂಗ್ರೆಸ್ ನಾಯಕರಿಗೆ ನಾನು ಉತ್ತರ ಕೊಡಬೇಕಿಲ್ಲ. ಅಖಾಡ ಸಿದ್ದ ಆಗಿದೆ. ಅಭ್ಯರ್ಥಿ ಘೋಷಣೆ ಆಗಿದೆ ಅದರ ಬಗ್ಗೆ ಈಗ ಮಾತಾಡೊದು ಬೇಡ. ಮೈತ್ರಿ ಮಾಡಿಸಿದ್ದು ನಾನೇ. ಕಾಂಗ್ರೆಸ್ ಅವರು ಚುನಾವಣೆ ಮುಗಿದೇ ಹೋಗಿದೆ ಅಂದುಕೊಂಡಿದ್ದಾರೆ. ಆದರೆ ಚನ್ನಪಟ್ಟಣದಲ್ಲಿ ಜನರು ತೀರ್ಮಾನ ಮಾಡ್ತಾರೆ. ಚನ್ನಪಟ್ಟಣ ಮೊದಲಿಂದಲೂ ಜೆಡಿಎಸ್ ಕೋಟೆ. ನಮ್ಮಲ್ಲಿನ ಕೆಲ ತಪ್ಪಿನಿಂದ ಹಿನ್ನಡೆ ಆಗಿತ್ತು ಅಷ್ಟೆ. ಅದನ್ನ ಸರಿಮಾಡಲು ನನ್ನನ್ನ ರಾಮನಗರ ದಿಂದ ಚನ್ನಪಟ್ಟಣಕ್ಕೆ ಕರೆದೊಯ್ದರು. ಈಗ ಎಲ್ಲವು ಕೂಡ ಸರಿಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನಮ್ಮಲ್ಲಿ ಯಾವುದೇ ಸಮನ್ವಯದ ಕೊರತೆ ಇಲ್ಲ. ಸಮನ್ವಯದ ಕೊರತೆ ಇರುವುದು ಕಾಂಗ್ರೆಸ್‌ನಲ್ಲಿ ಎಂದು ತಿರುಗೇಟು ನೀಡಿದರು.
ಶಾಸಕರಾದ ಎಚ್.ಪಿ.ಸ್ವರೂಪ್, ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಪರಮೇಶ್ವರಪ್ಪ, ಬೈಲಹಳ್ಳಿ ಸತ್ಯನಾರಾಯಣ್, ಸುಮುಖ ರಘು, ಹೊಂಗೆರೆ ರಘು ಇತರರು ಇದ್ದರು.