ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆ ಆಗುತ್ತಿದೆ: ಎಲ್.ಎಸ್.ಮುಕುಂದರಾಜ್

| Published : Sep 19 2024, 01:48 AM IST

ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆ ಆಗುತ್ತಿದೆ: ಎಲ್.ಎಸ್.ಮುಕುಂದರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಲೋಕದ ವಿಮರ್ಶನ ಕೈಂಕರ್ಯದಲ್ಲಿ ಪ್ರೊ.ಜಿ.ಎಚ್. ನಾಯಕರ ಸ್ಥಾನ ಬಹಳ ದೊಡ್ಡದು. ಕನ್ನಡದಲ್ಲಿ ವಿಮರ್ಶೆ ಎಂಬ ಪ್ರಕಾರ ವಿಭಿನ್ನ ಸ್ವರೂಪದಲ್ಲಿತ್ತು. ವಿಮರ್ಶೆಯ ಪರಿಕಲ್ಪನೆ ಪ್ರಾಚೀನ ಕವಿಗಳಾದ ಪಂಪ, ರನ್ನ, ಕುಮಾರವ್ಯಾಸ, ವಚನಕಾರರು ಹಾಗೂ ಮೊದಲಾದವರ ಎಲ್ಲರಲ್ಲಿಯೂ ಇದೇ ಇತ್ತು. ಆದರೆ ನವ್ಯ ವಿಮರ್ಶೆ ಇಂಗ್ಲಿಷ್ ಸಾಹಿತ್ಯದ ಪ್ರೇರಣೆಯಿಂದ ಬಂದದ್ದು. ಇತ್ತೀಚೆಗೆ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನವ್ಯ ವಿಮರ್ಶೆ ಇಂಗ್ಲಿಷ್ ಸಾಹಿತ್ಯದ ಪ್ರೇರಣೆಯಿಂದ ಬಂದದ್ದು. ಇತ್ತೀಚೆಗೆ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎಸ್.ಮುಕುಂದರಾಜ್ ತಿಳಿಸಿದರು.

ನಗರದ ಎಸ್.ಬಿ.ಆರ್.ಆರ್.ಮಹಾಜನ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಿಂತನ ಚಿತ್ತಾರ ಸಹಯೋಗದಲ್ಲಿ ಪ್ರೊ.ಜಿ.ಎಚ್. ನಾಯಕ 89 ಕಾರ್ಯಕ್ರಮದಲ್ಲಿ ಪ್ರೊ.ಜಿ.ಎಚ್.ನಾಯಕರ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಆದರ್ಶ ಮತ್ತು ವಾಸ್ತವ ಪುಸ್ತಕ ಲೋಕಾರ್ಪಣೆ ಮತ್ತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಸಾಹಿತ್ಯ ಲೋಕದ ವಿಮರ್ಶನ ಕೈಂಕರ್ಯದಲ್ಲಿ ಪ್ರೊ.ಜಿ.ಎಚ್. ನಾಯಕರ ಸ್ಥಾನ ಬಹಳ ದೊಡ್ಡದು. ಕನ್ನಡದಲ್ಲಿ ವಿಮರ್ಶೆ ಎಂಬ ಪ್ರಕಾರ ವಿಭಿನ್ನ ಸ್ವರೂಪದಲ್ಲಿತ್ತು. ವಿಮರ್ಶೆಯ ಪರಿಕಲ್ಪನೆ ಪ್ರಾಚೀನ ಕವಿಗಳಾದ ಪಂಪ, ರನ್ನ, ಕುಮಾರವ್ಯಾಸ, ವಚನಕಾರರು ಹಾಗೂ ಮೊದಲಾದವರ ಎಲ್ಲರಲ್ಲಿಯೂ ಇದೇ ಇತ್ತು. ಆದರೆ ನವ್ಯ ವಿಮರ್ಶೆ ಇಂಗ್ಲಿಷ್ ಸಾಹಿತ್ಯದ ಪ್ರೇರಣೆಯಿಂದ ಬಂದದ್ದು. ಇತ್ತೀಚೆಗೆ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

ಕವಿಯಾದವನೇ ಒಬ್ಬ ವಿಮರ್ಶಕನನ್ನು ತಯಾರು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿವರಾಮ ಕಾರಂತರಿಂದ ಕಲಿತ ಪಾಠವನ್ನು ಪ್ರೊ. ಜಿ.ಎಚ್. ನಾಯಕ ಅವರು ಕಾರಂತರ ಕೃತಿಗಳ ಬಗ್ಗೆ ವಿಮರ್ಶಿಸಿದರು. ನವೋದಯ ಕಾವ್ಯ ಪರಂಪರೆಗೆ ಪ್ರತಿಯಾಗಿ ಬಂದ ನವ್ಯ ಪರಂಪರೆಯ ಸಾಹಿತ್ಯ ವಿಮರ್ಶೆಯಲ್ಲಿ ಪ್ರೊ.ಜಿ.ಎಚ್. ನಾಯಕರ ವಿಮರ್ಶನ ಕಾರ್ಯ ಮಹತ್ವದ್ದು ಎಂದರು.

ಪ್ರೊ.ಜಿ.ಎಚ್. ನಾಯಕರ ವಿಮರ್ಶೆ ಮತ್ತು ಬದುಕು ಕುರಿತು ಪ್ರೊ. ಮೈಸೂರು ಕೃಷ್ಣಮೂರ್ತಿ ಮಾತನಾಡಿ, ಜಿ.ಎಚ್. ನಾಯಕರ ವಿಮರ್ಶೆ ಬದುಕು ಶುದ್ಧ ಜಲದಲ್ಲಿ ಮಿಂದೆದ್ದು ಬಂದ ಹಾಗೆ. ಆದರ್ಶಗಳ ಗೈರು ಹಾಜರಿಯಲ್ಲಿ ವರ್ತಮಾನದ ಬದುಕು ಭೀಕರವಾಗುತ್ತದೆ. ಹಾಗಾಗಿ ಬದುಕಿಗೆ ಆದರ್ಶದ ಅಗತ್ಯತೆ ಇದೆ ಎಂದರು.

ಆದರ್ಶ ಮಾದರಿ ವ್ಯಕ್ತಿತ್ವ. ನಾವು ಸಮಾಜದಲ್ಲಿ ಬದುಕುವಾಗ ಆದರ್ಶ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು. ಬಹುಶಃ ಪ್ರೊ.ಜಿ.ಎಚ್. ನಾಯಕ ಅವರು ಅಧ್ಯಾಪಕ ಹಾಗೂ ವಿಮರ್ಶಕರಾಗದೆ ಇದ್ದಿದ್ದರೆ ಕನ್ನಡ ಭಾಷೆ ಮತ್ತು ಸಾಹಿತ್ಯ ವಿಮರ್ಶೆಯ ಸತ್ವ ಪರಿಪಕ್ವವಾಗುತ್ತಿರಲಿಲ್ಲ ಎಂದರು.

ಸಾಂಪ್ರದಾಯಿಕ ವಿಮರ್ಶೆಗೆ ಹಿಡಿದಿದ್ದ ಗ್ರಹಣವನ್ನು ಬಿಟ್ಟು ತಮ್ಮದೇ ಆದ ನವ್ಯ ವಿಮರ್ಶ ಮಾರ್ಗವನ್ನು ರೂಪಿಸಿದವರು ಪ್ರೊ.ಜಿ.ಎಚ್. ನಾಯಕ. ಅವರ ವಿಮರ್ಶೆಯನ್ನು ಓದಿದಾಗ ಅದು ಧ್ಯಾನಸ್ಥ ರೀತಿಯ ಓದು. ಸಾಹಿತ್ಯ ಕೃತಿಯೊಂದರ ಗಂಭೀರ ಚಿಂತನೆಗೆ ಒಂದು ಶ್ರೇಷ್ಠವಾದ ದಾರಿ. ಒಂದು ಕೃತಿಯನ್ನು ನಿಧಾನವಾಗಿ, ಆಮೂಲಾಗ್ರವಾಗಿ ಸ್ವಾಧೀನಪಡಿಸಿಕೊಳ್ಳುವ ನೈಪುಣ್ಯತೆ ಪ್ರೊ.ಜಿ.ಎಚ್. ನಾಯಕರಿಗಿತ್ತು ಎಂಬ ನವ್ಯ ಸಾಹಿತ್ಯದ ಪ್ರಸಿದ್ಧ ಕವಿ ಎಂ. ಗೋಪಾಲಕೃಷ್ಣ ಅಡಿಗರ ಮಾತುಗಳನ್ನು ಉಲ್ಲೇಖಿಸಿದರು.

ಒಂದು ಕೃತಿ ಪರೀಕ್ಷೆಯಲ್ಲಿ ನೈತಿಕ ನೆಲೆ ಮುಖ್ಯ. ಒಟ್ಟು ಸಾಹಿತ್ಯ ವಿಮರ್ಶೆಯ ಒಳಗೆ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ, ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸಿದವರು ಪ್ರೊ.ಜಿ.ಎಚ್. ನಾಯಕ. ದ್ವೇಷ ಬಿಟ್ಟು-ದೇಶಕಟ್ಟು ಎಂಬ ಧ್ಯೇಯವಾಕ್ಯ ಅವರದ್ದು. ವಿದ್ಯಾರ್ಥಿಗಳೊಂದಿಗಿನ ಅವರ ಬದ್ಧತೆ ನೇರ ಹಾಗೂ ನಿಷ್ಠುರವಾದದ್ದು. ಜೀವನ ಪ್ರೀತಿ ಹಾಗೂ ಮನುಷ್ಯ ಪ್ರೇಮ ತೋರಿಸುವುದರಲ್ಲಿ ಅವರದು ಎತ್ತಿದ ಕೈ ಎಂದರು.

ಅವರ ಜೀವನದ ಉದ್ದಕ್ಕೂ ಪ್ರಜಾಸತ್ತಾತ್ಮಕ ರೀತಿಯಲ್ಲೆ ಬದುಕು ನಡೆಸಿದವರು. ವ್ಯಕ್ತಿ ವ್ಯಕ್ತಿಗಳ ಭಿನ್ನಾಭಿಪ್ರಾಯಗಳ ನಡುವೆ ಮನುಷ್ಯ ಸಂಬಂಧ ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಕಲಿಸಿಕೊಟ್ಟವರು. ಹಾಗೆಯೇ ಮನುಷ್ಯನಾಗಿ ಒಳ್ಳೆಯವನಾಗಿರುವುದೇ ಎಲ್ಲಾ ಸಾಧನೆಗಿಂತ ಶ್ರೇಷ್ಠ ಎಂಬ ಧೋರಣೆ ಪ್ರೊ.ಜಿ.ಎಚ್. ನಾಯಕರದು ಎಂದರು.

ಜಿ.ಪಿ. ಬಸವರಾಜು ಅವರು ಮಾತನಾಡಿ, ನಾಯಕರಿಗೆ ಇಡೀ ಕನ್ನಡ ಸಾಹಿತ್ಯದ ಎಲ್ಲಾ ಪ್ರಧಾನ ಸಾಹಿತಿಗಳ ಬಗ್ಗೆ ತಿಳಿದಿತ್ತು. ಒಂದು ಕೃತಿ ಓದುವಾಗ ಯಾವ ಪೂರ್ವಾಗ್ರಹವಿಲ್ಲದೆ ತಿಳಿ ಮನಸ್ಸಿನಿಂದ ಓದಿ ಅಲ್ಲಿ ತಮ್ಮ ನಿಲುವನ್ನು ಸ್ಪಷ್ಟವಾಗಿ ಅಲ್ಲದೇ ತಮಗೆ ಸತ್ಯ ಎಂದು ಕಂಡಿದ್ದನ್ನು ನಿಷ್ಕಾರಣವಾಗಿ ಹೇಳಬೇಕು. ಇದಕ್ಕೆ ನಿದರ್ಶನ ಪ್ರೊ.ಜಿ.ಎಚ್. ನಾಯಕರು.

ಕುವೆಂಪು ಅವರ ಕೆಲವು ಮಿತಿಗಳನ್ನು ಕುರಿತು ಅತಿ ಗಟ್ಟಿಯಾಗಿ ನಿಂತು ಸತ್ಯ ಹೇಳುತ್ತಿದ್ದುದ್ದು. ರನ್ನನ ಬಗೆಗಿನ ವಿಮರ್ಶೆ ಮಾಡಿ, ಅವರ ಗುರುಗಳಾದ ಬಿಎಂಶ್ರೀ, ತೀ.ನಂ.ಶ್ರೀ ಮೊದಲಾದವರನ್ನು ವಿರೋಧ ಕಟ್ಟಿಕೊಂಡದ್ದು ಉಂಟು ಅಂದರೆ ಅವರ ಮಿತಿಗಳನ್ನು ಅತ್ಯಂತ ಸತ್ಯ ಹಾಗೂ ದಿಟ್ಟತನದಿಂದ ಗುರುತಿಸಿದವರು. ನಾಯಕರು ಅಂದರೆ ಅವರ ಸಾಹಿತ್ಯ ವಿಮರ್ಶೆ ಮತ್ತು ಬದುಕು ಎರಡು ಒಂದೇ ಆಗಿತ್ತು ಎಂದು ಅವರು ವಿವರಿಸಿದರು.

ಚಿಂತನ ಚಿತ್ತಾರದ ಸಂಚಾಲಕ ನಿಂಗರಾಜು ಚಿತ್ತಣ್ಣನವರ್ ಆಶಯ ನುಡಿಗಳನ್ನಾಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೊ.ಜಿ.ಎಚ್. ನಾಯಕರ ಕುಟುಂಬ ತಮ್ಮ ವಿದ್ಯಾರ್ಥಿಗಳಿಗೆ ನೈತಿಕ ಪಾಠವನ್ನು ಬದುಕಿ ತೋರಿಸಿಕೊಟ್ಟವರು. ಸಾಹಿತ್ಯ ಬೇರೆ ಅಲ್ಲ, ಬದುಕು ಬೇರೆ ಅಲ್ಲ ಎಂದು ಬಾಳಿದವರು. ಸದಾ ಎಚ್ಚರ, ಕಾಳಜಿ, ಪ್ರಾಮಾಣಿಕತನ, ನೇರ ನಿಷ್ಠುವಾದ ವ್ಯಕ್ತಿತ್ವ. ಅದು ಅವರ ಬದುಕಿನಿಂದ ಬಂದದ್ದು. ಆದ್ದರಿಂದ ವಿದ್ಯಾರ್ಥಿಗಳು ಒಳ್ಳೆಯ ತನವನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಸ್ವಾಗತಿಸಿದರು. ಈ ವೇಳೆ ಜಿ.ಎಚ್. ನಾಯಕರ ಪುತ್ರಿ ಕೀರ್ತಿನಾಯಕ ಮತ್ತು ಅಳಿಯ ಮದನ್ ನಾಯಕ ಇದ್ದರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ವಿನೋದಮ್ಮ ವಂದಿಸಿದರು. ಕಿರಣ್ ಕುಮಾರ್ ನಿರೂಪಿಸಿದರು. ಎಂ. ನಾಗೇಶ, ಮನೋಜ್ ಕುಮಾರ್, ಪ್ರೊ. ಜಿ.ಎಚ್. ನಾಯಕರ ಶಿಷ್ಯರು, ಅಭಿಮಾನಿ ಬಳಗ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿಗಳು ಇದ್ದರು.