ಪ್ರಸಕ್ತ ಸಮಾಜದಲ್ಲಿ ಮೌಲ್ಯ ಪ್ರಜ್ಞೆ ಕುಸಿಯುತ್ತಿದೆ: ಸಾಹಿತಿ ರೂಪಾ ಹಾಸನ

| Published : Aug 29 2024, 12:46 AM IST

ಸಾರಾಂಶ

ಪ್ರಸಕ್ತ ಸಮಾಜದಲ್ಲಿ ಮೌಲ್ಯ ಪ್ರಜ್ಞೆ ಕುಸಿಯುತ್ತಿದ್ದು, ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ-ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ, ಸಾಹಿತಿ ಹಾಗೂ ಹೋರಾಟಗಾರರಾದ ರೂಪ ಹಾಸನ ಬೇಸರ ವ್ಯಕ್ತಪಡಿಸಿದರು. ಹಾಸನದಲ್ಲಿ ಆಶಾ ಕಾರ್ಯಕರ್ತೆಯರ ಹಾಸನ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಹಾಸನ ಆಶಾ ಕಾರ್ಯಕರ್ತೆಯರ ಪ್ರಥಮ ಜಿಲ್ಲಾ ಸಮ್ಮೇಳನ

ಕನ್ನಡಪ್ರಭ ವಾರ್ತೆ ಹಾಸನ

ಪ್ರಸಕ್ತ ಸಮಾಜದಲ್ಲಿ ಮೌಲ್ಯ ಪ್ರಜ್ಞೆ ಕುಸಿಯುತ್ತಿದ್ದು, ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ-ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ, ಸಾಹಿತಿ ಹಾಗೂ ಹೋರಾಟಗಾರರಾದ ರೂಪ ಹಾಸನ ಬೇಸರ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಆಶಾ ಕಾರ್ಯಕರ್ತೆಯರ ಹಾಸನ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಇಂಥ ಪರಿಸ್ಥಿತಿಯನ್ನು ಬದಲಾಯಿಸಲು ಅಗತ್ಯವಿರುವ ಹೋರಾಟ ಕಟ್ಟಲು ಸಜ್ಜಾಗಿ ನಿಲ್ಲಬೇಕೆಂದು ಕರೆ ನೀಡಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಆಶಾ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಿಸಲ್ಪಟ್ಟ ಆಶಾ ಕಾರ್ಯಕರ್ತೆಯರು ಆರೋಗ್ಯ ಕ್ಷೇತ್ರದ ಅತ್ಯಂತ ಕೆಳ ಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾಮಾಜಿಕ ಸ್ವಾಸ್ಥ್ಯಕ್ಕೆ ಅಪಾರ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರನ್ನು ನಮ್ಮ ದೇಶದ ಆರೋಗ್ಯ ಸ್ತಂಭ ಎಂದರೆ ತಪ್ಪಾಗಲಾರದು. ಕೊರೋನಾ ಕಾಲಘಟ್ಟದಲ್ಲಿ ಅವರ ಅನುಪಮ ಸೇವೆಯನ್ನು ಗುರುತಿಸಿ ನಮ್ಮ ಸರ್ಕಾರಗಳು ಕೊರೋನಾ ವಾರಿಯರ್ಸ್ ಎಂದು ಗುರುತಿಸಿದರೆ ವಿಶ್ವ ಆರೋಗ್ಯ ಸಂಸ್ಥೆಯು ‘ಜಾಗತಿಕ ಆರೋಗ್ಯ ನಾಯಕ’ರೆಂದು ಶ್ಲಾಘಿಸಿತು ಎಂದು ಹೇಳಿದರು.

ಇಷ್ಟೆಲ್ಲಾ ಪ್ರಶಂಸೆಗಳ ಸುರಿಮಳೆ ಇದ್ದರೂ ಅವರ ಜೀವನವು ಸುಗಮವಾದದ್ದಲ್ಲ. ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯಂತಹ ಸರ್ಕಾರಿ ಇಲಾಖೆಯಡಿ ಕೆಲಸ ಮಾಡುತ್ತಿದ್ದರೂ ಸರ್ಕಾರಿ ನೌಕರರಲ್ಲ. ಕನಿಷ್ಠ ವೇತನ ಮೊದಲೇ ಇಲ್ಲ. ಜೀವನಯೋಗ್ಯ ವೇತನ ನೀಡಿ ಗೌರವಯುತವಾಗಿ ಬದುಕುವಂತೆ ಏರ್ಪಾಡು ಮಾಡುವ ಆಲೋಚನೆಯೂ ಸರ್ಕಾರಕ್ಕೆ ಇಲ್ಲ. ಗೌರವಧನದ ಹೆಸರಿನಲ್ಲಿ ಅಗೌರವ ತೋರುತ್ತಿರುವ ಸರ್ಕಾರ ಬಡ ಹೆಣ್ಣುಮಕ್ಕಳ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಆರೋಗ್ಯ ಇಲಾಖೆ ಇನ್ನಾದರೂ ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿ ಕಾಂಪೊನೆಂಟ್ ಮಾದರಿಯಲ್ಲಿ ಪ್ರೋತ್ಸಾಹಧನ ನೀಡುವ ಮಾದರಿಯನ್ನು ತಕ್ಷಣವೇ ನಿಲ್ಲಿಸಬೇಕು. ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಎಐಯುಟಿಯುಸಿ ಮುಖಂಡರಾದ ಜಿ.ಹನುಮೇಶ್, ‘ಸರ್ಕಾರ ಮತ್ತು ಆರೋಗ್ಯ ಇಲಾಖೆಯನ್ನು ಪದೇ ಪದೇ ಎಚ್ಚರಿಸುತ್ತ ಆಶಾ ಕಾರ್ಯಕರ್ತೆಯರನ್ನು ಸಂಘಟಿಸಿ ಅವರ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ರಾಜ್ಯ ಮಟ್ಟದ ಸಮ್ಮೇಳನವನ್ನು ಸೆ.13-14 ರಂದು ಕಲಬುರಗಿಯಲ್ಲಿ ಸಂಘಟಿಸುತ್ತಿದೆ ಎಂದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ್ ಸಮ್ಮೇಳನಕ್ಕೆ ಶುಭ ಹಾರೈಸಿದರು.

ಸಮ್ಮೇಳನದ ಕೊನೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಚುನಾಯಿಸಲಾಯಿತು. ಹಾಸನ ನೂತನ ಜಿಲ್ಲಾ ಸಮಿತಿ: ಗೌರವಾಧ್ಯಕ್ಷ-ಜಿ. ಹನುಮೇಶ್, ಅಧ್ಯಕ್ಷೆ- ಪುಷ್ಪಲತಾ ಚನ್ನರಾಯಪಟ್ಟಣ, ಉಪಾಧ್ಯಕ್ಷರು- ಮಮತಾ ಹಾಸನ, ಗೌರಮ್ಮ ಸಕಲೇಶಪುರ, ಗೀತಾ ಹೊಳೆನರಸೀಪುರ, ಶಿವಮ್ಮ ಆಲೂರು, ತಾಹೀರಾ ಬೇಲೂರು, ಕುಮಾರಿ ಅರಸೀಕೆರೆ, ಮಂಜುಳಾ ಅರಕಲಗೂಡು, ಕಾರ್ಯದರ್ಶಿ-ಲಕ್ಷ್ಮಿ ಆಲೂರು, ಜಂಟಿ ಕಾರ್ಯದರ್ಶಿಗಳು-ಶೈಲಜಾ ಅರಸೀಕೆರೆ, ರೆಹಮತ್ ಹಾಸನ, ಕೋಮಲ ಚನ್ನರಾಯಪಟ್ಟಣ, ಶ್ವೇತ ಬೇಲೂರು, ಶಶಿಕಲಾ ಸಕಲೇಶಪುರ, ಮೇಘನಾ ಅರ್ಬನ್, ಲಲಿತಾ ಹೊಳೆನರಸೀಪುರ, ಕಾರ್ಯಕಾರಿ ಸಮಿತಿ ಸದಸ್ಯರು- 33 ಜನ. ಒಟ್ಟು 48 ಸದಸ್ಯರ ನೂತನ ಜಿಲ್ಲಾ ಸಮಿತಿ ರಚನೆಯಾಯಿತು.