ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮುಂಗಾರು ಮಳೆ ಜೊತೆ ಬರುವ ಕಾರಹುಣ್ಣಿಮೆ ಹಬ್ಬ ಶುಕ್ರವಾರ ಹಾೂ ಶನಿವಾರದ 2 ದಿನಗಳ ಕಾಲ ನಡೆಯುತ್ತಿರೋದರಿಂದ ಜಿಲ್ಲೆಯಲ್ಲಿ ರೈತರು ಸಂತಸದಲ್ಲಿದ್ದಾರೆ. ಮೊದಲ್ಸಾ ಮುಂಗಾರು ಮಳೆಯೂ ವೈನಾಗಿ ಸುರಿಯುತ್ತಿದೆ. ಹೀಗಾಗಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ರೈತರು ಕಾರ ಹುಣ್ಣಿಮೆ ಸಂಭ್ರಮಿಸುತ್ತಿದ್ದಾರೆ.ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕಾರಹುಣ್ಣಿಮೆಯ ಸಂಭ್ರಮವೋ ಸಂಭ್ರಮ. ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡಿದ ರೈತರು ದಣಿದ ಎತ್ತುಗಳಿಗೆ ವಿಶ್ರಾಂತಿ ನೀಡುತ್ತಾನೆ. ಮುಂಗಾರು ಮಳೆ ಆರಂಭದಲ್ಲಿ ಕಾರಹುಣ್ಣಿಮೆ ದಿನ ಎತ್ತುಗಳ ಯೋಗಕ್ಷೇಮ ಗಮನಿಸುತ್ತಾರೆ.
ನೇಗಿಲ ಯೋಗಿ, ನಾಡಿಗೆ, ದೇಶಕ್ಕೆ ಅನ್ನದಾತ, ಆರ್ಥಿಕತೆ ಬೆನ್ನೆಲಬು ರೈತನಾದರೆ, ರೈತನಿಗೆ ಬೆನ್ನೆಲಬು ಅನ್ನದಾತ ಎತ್ತುಗಳು. ಎತ್ತುಗಳ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸುವ ಹಬ್ಬ ಕಾರ ಹುಣ್ಣಿಮೆ ಹಬ್ಬ. ಕೃಷಿಯಲ್ಲಿ ಯಂತ್ರ ಬಳಕೆ ಯಾಂತ್ರಿಕವಾಗಿ ನಡೆಯುತ್ತಿದ್ದರೂ ಕೃಷಿಕಾಯಕದಲ್ಲಿ ಎತ್ತುಗಳೇ ಕೇಂದ್ರ ಬಿಂದು. ಆದ್ದರಿಂದ ರೈತರು ಎತ್ತುಗಳು ಪೂಜ್ಯಭಾವದಿಂದ ಕಾಣುತ್ತಾರೆ.ರೈತನು ತನ್ನ ಮನೆಯಲ್ಲಿ ಕೃಷಿ ಮತ್ತು ಕೃಷಿ ಅವಲಂಬಿತ ಕಾಯಕಗಳು, ಚಟುವಟಿಕೆಗಳು ನಿರಂತರವಾಗಿ ನಡೆಯಲೆಂಬ ಆಶಯದಿಂದ ಸಡಗರದಿಂದ ಆಚರಿಸುವ ಹಬ್ಬ ಕಾರಹುಣ್ಣಿಮೆ.
ಎತ್ತುಗಳಿಗೆ ಮೈ ತೊಳೆಯುತ್ತಾರೆ. ಕಾರಹುಣ್ಣಿಮೆ ದಿನ ಅರುಣೋದಯದ ಸೂರ್ಯರಶ್ಮಿ ಭೂಮಿಗೆ ತಲುಪವ ಹೊತ್ತಿಗೆ ಎತ್ತುಗಳ ಕೋಡಿಗೆ ಬಣ್ಣಹಚ್ಚಿ, ಕುತ್ತಿಗೆಗೆ ಗೆಜ್ಜೆಗಂಟೆಗಳ ಸರ, ಕಟ್ಟುತ್ತಾರೆ. ಮೈತುಂಬ ಬಣ್ಣದ ಚಿತ್ತಾರ ಬಿಡಿಸುತ್ತಾರೆ. ಅಥವಾ ಚೆಂದದ ಸೀರೆ ಹೊದಿಸುತ್ತಾರೆ. ರೈತಮಹಿಳೆಯರು ಋತುಮಾನಕ್ಕೆ ತಕ್ಕಂತೆ ಹೋಳಿಗೆ, ಆಮ್ರ (ಕಟ್ಟಿನ ಸಾರು), ಕಡುಬು, ನುಚ್ಚು, ಜೋಳದ ಬಾನ, ಅಗಸಿ ಹಿಂಡಿ, ಮೊಸರನ್ನ, ಹಪ್ಪಳ ಸಂಡಿಗೆ ಸೇರಿದಂತೆ ಹಲವಾರು ವೈವಿದ್ಯಮಯ ಖಾದ್ಯಗಳನ್ನು ರುಚಿರುಚಿಯಾಗಿ ಸಿದ್ಧಪಡಿಸುತ್ತಾರೆ.ಎತ್ತುಗಳನ್ನು ಪೂಜಿಸಿ ನೈವೆದ್ಯ ಅರ್ಪಿಸುತ್ತಾರೆ. ಊರ ದೇವರಿಗೆ ಎಡೆ ಕಳಿಸುತ್ತಾರೆ. ಪರಿವಾರದವರು ಒಟ್ಟಿಗೆ ಭೋಜನಮಾಡಿ ಊರಬೀದಿಯಲ್ಲಿ ಎತ್ತುಗಳ ಮೆರವಣ ಗೆ ಮಾಡುತ್ತಾರೆ. ದೇವಸ್ಥಾನದ ಬಯಲಲ್ಲಿ ಅಥವಾ ಗ್ರಾಮದ ದ್ವಾರಬಾಗಿಲ (ಅಗಸಿಯ)ಲ್ಲಿ ಕರಿ (ಎತ್ತುಗಳ ಓಟದ ಸ್ಪರ್ದೆ) ಹರಿಯುತ್ತಾರೆ. ಪ್ರಥಮಸ್ಥಾನ ಗಳಿಸಿದ ಜೊಡೆತ್ತುಗಳಿಗೆ ಬಹುಮಾನ ನೀಡಿ ಸತ್ಕರಿಸುತ್ತಾರೆ. ಬಿಳಿ ಎತ್ತಿನ ಜೋಡಿ ಗೆದ್ದರೆ ಹಿಂಗಾರು ಬೆಳೆ ಮತ್ತು ಬಣ್ಣದೆತ್ತು ಜೋಡಿ ಗೆದ್ದರೆ ಮುಂಗಾರು ಬೆಳೆ ಚೆನ್ನಾಗಿರುತ್ತದೆಂಬ ಭಾವನೆ ರೈತರಲ್ಲಿದೆ.