ಸೈಬರ್‌ ಕ್ರೈಂ ಹೆಚ್ಚುತ್ತಿರುವ ಪ್ರಕರಣ: ಜಾಗೃತರಾಗಲು ಎಸ್ಪಿ ಡಾ. ವಿಕ್ರಂ ಅಮಟೆ ಕರೆ

| Published : Jun 22 2024, 12:45 AM IST

ಸೈಬರ್‌ ಕ್ರೈಂ ಹೆಚ್ಚುತ್ತಿರುವ ಪ್ರಕರಣ: ಜಾಗೃತರಾಗಲು ಎಸ್ಪಿ ಡಾ. ವಿಕ್ರಂ ಅಮಟೆ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವರ್ಷದಲ್ಲಿ ಈವರೆಗೆ 31 ಪ್ರಕರಣಗಳು ದಾಖಲಾಗಿವೆ, ಜನರು ಸುಮಾರು ₹ 2.45 ಕೋಟಿ ಕಳೆದುಕೊಂಡಿದ್ದಾರೆ. ಈ ರೀತಿ ವಂಚನೆಗೆ ಒಳಗಾಗುತ್ತಿರುವವರ ಪೈಕಿ ವಿದ್ಯಾವಂತರೆ ಹೆಚ್ಚು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ಯಾರಿಗೂ ಬ್ಯಾಂಕ್‌ ಖಾತೆ ಮಾಹಿತಿ ಕೊಡಬೇಡಿ । ಸಂಶಯ ಬಂದರೆ 1930 ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ । ಡಿಜಿಟಲ್‌ ಆರೆಸ್ಟ್‌ ಹೊಸ ಕ್ರೈಂ, ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಸಂವಾದ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವರ್ಷದಲ್ಲಿ ಈವರೆಗೆ 31 ಪ್ರಕರಣಗಳು ದಾಖಲಾಗಿವೆ, ಜನರು ಸುಮಾರು ₹ 2.45 ಕೋಟಿ ಕಳೆದುಕೊಂಡಿದ್ದಾರೆ. ಈ ರೀತಿ ವಂಚನೆಗೆ ಒಳಗಾಗುತ್ತಿರುವವರ ಪೈಕಿ ವಿದ್ಯಾವಂತರೆ ಹೆಚ್ಚು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ಶುಕ್ರವಾರ ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ ಅವರು ಸೈಬರ್‌ ಕ್ರೈಂ ಕುರಿತು ಮಾತನಾಡಿದರು. ಸೈಬರ್‌ ಕ್ರೈಂಗೆ ವೈಟ್ ಕಾಲರ್‌ ಕ್ರೈಂ ಎನ್ನುತ್ತಾರೆ. ಈ ದಂಧೆ ಮೊದಲು ಆರಂಭವಾಗಿದ್ದು 2010ರಲ್ಲಿ, ಇದಕ್ಕೆ ಕಡಿವಾಣ ಹಾಕಲು 2008ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಜಾರಿಗೆ ಬಂದಿತು. ಆದರೆ, ಆನ್‌ ಲೈನ್‌ ನಲ್ಲಿ ವಂಚನೆ ಮಾಡುವವರು ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿಯುತ್ತಿದ್ದಾರೆ ಎಂದರು.

ಮೊದ ಮೊದಲು ಕೆಲಸ (ಜಾಬ್‌) ಕೊಡಿಸುತ್ತೇನೆಂದು ಹೇಳಿ ವಂಚಿಸಲು ಆರಂಭಿಸಿದರು. ನಂತರದಲ್ಲಿ ಪೋನ್‌ ಮಾಡಿ ನಿಮಗೆ ಲೋನ್‌ ಆಫರ್‌ ಬಂದಿದೆ. ಬ್ಯಾಂಕ್‌ ಹಾಗೂ ಆಧಾರ ಕಾರ್ಡ್‌ ಮಾಹಿತಿ ಕೊಡಿ ಎಂದು ವಂಚಿಸಲು ಆರಂಭಿಸಿ ದರು. ಇದೀಗ ಸ್ಟಾಕ್‌ ಎಕ್ಸ್ಚೇಂಜ್‌, ಡಿಜಿಟಲ್‌ ಆರೆಸ್ಟ್‌, ಆನ್‌ಲೈನ್‌ ಟ್ರೆಡಿಂಗ್‌ ವಂಚನೆ ಶುರುವಾಗಿದೆ ಎಂದ ಅವರು, ಈವರೆಗೆ ₹ 2.45 ಕೋಟಿ ವಂಚನೆ ಪೈಕಿ ₹10 ಲಕ್ಷ ಸೀಜ್‌ ಮಾಡಲಾಗಿದೆ ಎಂದು ಹೇಳಿದರು.

ಹಲವೆಡೆ ಈ ರೀತಿ ವಂಚನೆ ಪ್ರಕರಣಗಳು ನಡೆಯುತ್ತಿವೆ. ಮಾಧ್ಯಮದಲ್ಲೂ ಸುದ್ದಿಯಾಗುತ್ತಿವೆ, ಆದರೂ ಜನರು ವಂಚನೆಗೆ ಒಳಗಾಗುತ್ತಿದ್ದಾರೆ. ಆನ್‌ ಲೈನ್‌ನಲ್ಲಿ ವ್ಯವಹಾರ ಮಾಡುವವರ ಪೈಕಿ ಶೇ. 90 ರಷ್ಟು ಜನರು ವಂಚಕ ರಾಗಿರುತ್ತಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಹೊಸ ತಲೆಮಾರು ಅಪಾಯ ಎದುರಿಸಲಿದೆ. ಹಾಗಾಗಿ ಅನಾಮಧೇಯ ಪೋನ್‌ ಕರೆಗಳಿಗೆ ಯಾರೂ ಸ್ಪಂದಿಸಬಾರದು. ಯಾವುದೇ ಬ್ಯಾಂಕಿನವರು ಪೋನ್‌ ಮಾಡಿ ನಿಮಗೆ ಮಾಹಿತಿ ಕೇಳುವುದಿಲ್ಲ. ಆ ರೀತಿಯಲ್ಲಿ ಮಾಹಿತಿ ಕೇಳಿದರೆಂದರೆ ಅವರು ವಂಚಕರೆಂದು ಎಚ್ಚರ ವಹಿಸಬೇಕು. ಆಗ ಕೂಡಲೇ 1930 ಸಂಖ್ಯೆಗೆ ಕರೆ ಮಾಡಬೇಕು ಎಂದು ಹೇಳಿದರು.

ಬ್ಯಾಂಕ್‌ ಅಕೌಂಟ್‌ ನಂಬರ್‌, ಆಧಾರ್‌ ನಂಬರ್‌ ಕೇಳಿ ನಂತರ ಓಟಿಪಿ ಪಡೆದು ವಂಚಿಸುವವರ ಸಂಖ್ಯೆ ಕಡಿಮೆಯಾಗಿದೆ. ಕಾರಣ, ಈ ಬಗ್ಗೆ ಜನರು ಜಾಗೃತಗೊಂಡಿದ್ದರೆಂಬುದನ್ನು ಅರಿತು ವಂಚಕರು ಬೇರೆ ಮಾರ್ಗ ಕಂಡುಕೊಂಡಿದ್ದಾರೆ. ಡಿಜಿಟಲ್‌ ಆರೆಸ್ಟ್‌ ವಂಚನೆಯಲ್ಲಿ ಬ್ಯಾಂಕ್‌ ಅಧಿಕಾರಿಯೋರ್ವರು ಹಣ ಕಳೆದುಕೊಂಡಿದ್ದಾರೆ ಎಂದರು.

ಸೈಬರ್‌ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರ ಸೈಬರ್‌ ಕ್ರೈಂ ಪೊಲೀಸ್‌ ಠಾಣೆ ತೆರೆದಿದೆ. ಅಲ್ಲಿಗೆ ಸದ್ಯ ಇನ್ಸ್‌ಸ್ಪೆಕ್ಟರ್‌ ಹಾಗೂ ಇತರೆ ಸಿಬ್ಬಂದಿ ಇದ್ದಾರೆ. ಈ ಠಾಣೆಯನ್ನು ಮೇಲ್ದರ್ಜೆಗೇರಿಸಿ ಡಿವೈಎಸ್ಪಿ ನಿಯೋಜನೆ ಮಾಡುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಈ ರೀತಿ ಅಪರಾಧಗಳನ್ನು ತನಿಖೆ ನಡೆಸಲು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಯೋಬ್ಬರನ್ನು ಪ್ರತಿ ಜಿಲ್ಲೆಗೆ ನಿಯೋಜನೆ ಮಾಡುವ ಪ್ರಕ್ರಿಯೆ ಮುಂದುವರಿದಿದೆ ಎಂದು ಹೇಳಿದರು.

ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ. ರಾಜೇಶ್‌ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ಸೈಬರ್‌ ಕ್ರೈಂ ಠಾಣೆ ಇನ್ಸ್‌ಸ್ಪೆಕ್ಟರ್‌ ಗವಿರಾಜ್‌ ಸಂವಾದದಲ್ಲಿ ಪಾಲ್ಗೊಂಡಿದ್ದರು. ಕ್ಲಬ್‌ನ ಮಾಜಿ ಅಧ್ಯಕ್ಷ ಸುರೇಶ್‌ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆರ್‌. ತಾರಾನಾಥ್‌ ವಂದಿಸಿದರು.---- ಬಾಕ್ಸ್‌ ---ಸ್ಟಾಕ್‌ ಎಕ್ಸ್ ಚೇಂಜ್‌ - ಈ ದಂಧೆಯಲ್ಲಿ ವಂಚಕರು ಕಡಿಮೆ ಹಣ ಹೂಡುವಂತೆ ಮನವೊಲಿಸಿ ನಂತರ ಅವರ ಸ್ನೇಹ ಸಂಪಾದನೆ ಮಾಡಿ ಬಳಿಕ ಲಕ್ಷಾಂತರ ರು. ವಂಚಿಸುತ್ತಾರೆ. ಅಂದರೆ, ಯಾವುದೇ ಪ್ರಾಡೆಕ್ಟ್‌ ಮೇಲೆ ಹಣ ಹೂಡಿದರೆ ಇಂತಿಷ್ಟು ಲಾಭ ಬರುತ್ತದೆ ಎಂಬ ಆಸೆ ಹುಟ್ಟಿಸುತ್ತಾರೆ.

--ಡಿಜಿಟಲ್‌ ಅರೆಸ್ಟ್‌- ಇದೀಗ ಚಾಲ್ತಿಯಲ್ಲಿರುವ ವಂಚನೆ ಪ್ರಕರಣ ಇದಾಗಿದೆ. ಅನಾಮಧೇಯ ವ್ಯಕ್ತಿಯೋರ್ವರು ಮೊಬೈಲ್‌ಗೆ ಕಾಲ್ ಮಾಡಿ, ಮುಂಬೈನ ಸೈಬರ್‌ ಕ್ರೈಂ ಠಾಣೆಯಿಂದ ಕರೆ ಮಾಡ್ತಾ ಇರೋದು, ನೀವೋಂದು ಫ್ರಾಡ್‌ ಮಾಡಿದ್ದೀರಾ, ನಿಮ್ಮ ಮೇಲೆ ನಮ್ಮ ಠಾಣೆಯಲ್ಲಿ ಎಫ್‌ಐಆರ್‌ ಆಗಿದೆ, ನಿಮ್ಮನ್ನು ಅರೆಸ್ಟ್‌ ಮಾಡ್ತಿವಿ ಎಂದು ಹೇಳುವ ಜತೆಗೆ ವಾಟ್ಸ್‌ಆಫ್‌ ಕಾಲ್‌ ಮಾಡಿ, ಅದಕ್ಕೆ ಪೂರಕವಾದ ನಕಲಿ ದಾಖಲೆ ತೋರಿಸಿ ನಂಬುವ ರೀತಿ ವರ್ತಿಸುತ್ತಾರೆ. ಜತೆಗೆ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬಾರದೆಂದು ಹೇಳಿ ಕಾಲ್‌ ಕಟ್‌ ಮಾಡ್ತಾರೆ. ಕೆಲ ಸಮಯದ ನಂತರ ನಿಮ್ಮನ್ನು ಅರೆಸ್ಟ್‌ ಮಾಡಬಾರದು. ಈ ಕೇಸ್‌ನಿಂದ ಬಚಾವ್‌ ಮಾಡಲು ಹಣ ಕೇಳುತ್ತಾರೆ.

ನಾವೇನು ಮಾಡಬೇಕು:

- ವಂಚನೆ ಆಗ್ತಾ ಇರೋದು ಗಮನಕ್ಕೆ ಬಂದ ಕೂಡಲೇ 1930 ಟೋಲ್‌ ಫ್ರೀಗೆ ಕಾಲ್‌ ಮಾಡಿ ಮಾಹಿತಿ ನೀಡಬೇಕು. ಈ ಮಾಹಿತಿ ಬರುತ್ತಿದ್ದಂತೆ ಸೈಬರ್‌ ಕ್ರೈಂ ಸಿಬ್ಬಂದಿ ನಿಮ್ಮಿಂದ ಹಣ ಹೋಗಿರುವ ಬ್ಯಾಂಕ್‌ ಖಾತೆ ಬ್ಲಾಕ್‌ ಮಾಡುವ ಜತೆಗೆ ಯಾವ ಖಾತೆಗೆ ಹೋಗಿದೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡಲಿದ್ದಾರೆ. ನಂತರ ಲಿಖಿತವಾಗಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಬೇಕು. ಇನ್ನಷ್ಟು ಮಾಹಿತಿ ಬೇಕಾಗಿದ್ದರೆ ಚಿಕ್ಕಮಗಳೂರು ಸೈಬರ್‌ ಕ್ರೈಂ ಇನ್ಸ್‌ಸ್ಪೆಕ್ಟರ್‌ ಅವರ ಮೊಬೈಲ್‌ ಸಂಖ್ಯೆ 948080 5108 ಗೆ ಕರೆ ಮಾಡಬಹುದು.

ಪೋಟೋ ಫೈಲ್‌ ನೇಮ್‌ 21 ಕೆಸಿಕೆಎಂ 4ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಎಸ್ಪಿ ಡಾ. ವಿಕ್ರಂ ಅಮಟೆ ಅವರು ಮಾತನಾಡಿದರು. ಎಎಸ್ಪಿ ಕೃಷ್ಣಮೂರ್ತಿ, ಸೈಬರ್‌ ಕ್ರೈಂ ಇನ್ಸ್‌ಸ್ಪೆಕ್ಟರ್‌ ಗವಿರಾಜ್‌, ಕ್ಲಬ್‌ ಅಧ್ಯಕ್ಷ ಪಿ. ರಾಜೇಶ್‌, ಪ್ರಧಾನ ಕಾರ್ಯದರ್ಶಿ ಆರ್‌. ತಾರಾನಾಥ್‌ ಇದ್ದರು.

----------------------