ಸಾರಾಂಶ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಶಿಗ್ಗಾಂವಿ-ಸವಣೂರು ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ-ಗದಗ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಹಿನ್ನಲೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು ಟಿಕೆಟ್ ಪಡೆಯಲು ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ನಡೆದಿದೆ. ಇದರ ಮಧ್ಯೆ ಮಾಜಿ ಸಚಿವ, ಧಾರವಾಡ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಹೆಸರು ಸಹ ಕೇಳಿ ಬರುತ್ತಿದೆ.
ಈ ಕುರಿತು ಅಖಂಡ ಧಾರವಾಡ ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದ್ದು ಶಿಗ್ಗಾಂವಿ ಕ್ಷೇತ್ರದಿಂದ ಶಿವಲೀಲಾ ಸ್ಪರ್ಧಿಸಲಿ ಎಂಬ ಬೇಡಿಕೆಯನ್ನು ವಿನಯ್ ಬೆಂಬಲಿಗರು ಇಟ್ಟಿದ್ದು, ಇದಕ್ಕೆ ಬೇಕಾದ ಲಾಬಿಯೂ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.ಚುನಾವಣೆ ಘೋಷಣೆ ಆಗಿಲ್ಲ:ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿಲ್ಲ. ಆಗಲೇ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ. ಬೊಮ್ಮಾಯಿ ವಿರುದ್ಧ 3 ಬಾರಿ ಕಣಕ್ಕಿಳಿದು ಸೋತಿರುವ ಅಜ್ಜಂಪೀರ ಖಾದ್ರಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಇವರ ಬೆಂಬಲಿಗರು ಇವರಿಗೆ ಟಿಕೆಟ್ ನೀಡಬೇಕೆಂದು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇನ್ನು ಹಿಂದೆ ಬೊಮ್ಮಾಯಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಕಾಂಗ್ರೆಸ್‌ನಲ್ಲಿದ್ದಾರೆ. ಅವರು ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೇ, ಕಳೆದ ಬಾರಿ ಸೋತಿರುವ ಪಠಾಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ ಸೇರಿದಂತೆ ಹಲವರು ಟಿಕೆಟ್ ಕೇಳುತ್ತಿದ್ದಾರೆ. ಈ ಎಲ್ಲದರ ನಡುವೆ ಶಿವಲೀಲಾ ಕುಲಕರ್ಣಿ ಹೆಸರು ಕೇಳಿ ಬರುತ್ತಿದೆ.
ಪತಿ ಗೆಲ್ಲಿಸಿದ್ದ ಪತ್ನಿ:ಧಾರವಾಡ ಜಿಲ್ಲೆಗೆ ವಿನಯ ಕುಲಕರ್ಣಿ ಅವರಿಗೆ ಪ್ರವೇಶವಿಲ್ಲ. ಹೀಗಿದ್ದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಪಕ್ಷದಲ್ಲಿ ಯಾವುದೇ ಸ್ಥಾನವಿಲ್ಲದೆ ಇದ್ದರೂ ತಾವೇ ಚುನಾವಣೆ ಜವಾಬ್ದಾರಿ ತೆಗೆದುಕೊಂಡು ಪ್ರಚಾರ ನಡೆಸಿ ಪತಿ ಗೆಲ್ಲಿಸಿಕೊಂಡು ಬಂದ ಹಿರಿಮೆ ಶಿವಲೀಲಾ ಅವರದ್ದು. ಇವರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಕೊನೆ ಕ್ಷಣದವರೆಗೂ ಇವರ ಹೆಸರು ಕೂಡ ಇತ್ತು. ಕೊನೆಗೆ ಅಹಿಂದಕ್ಕೆ ಮಣಿ ಹಾಕಿದ ಕಾಂಗ್ರೆಸ್ ವಿನೋದ ಅಸೂಟಿ ಅವರನ್ನು ಕಣಕ್ಕಿಳಿಸಿತ್ತು.
ಶಿವಲೀಲಾ ಏಕೆ?:ವಿನಯ್‌ಗೆ ಧಾರವಾಡ ಜಿಲ್ಲೆಗೆ ಪ್ರವೇಶವಿಲ್ಲ. ಆದರೆ ಶಿಗ್ಗಾಂವಿ ಕ್ಷೇತ್ರಕ್ಕೆ ತೆರಳಲು ಸಮಸ್ಯೆಯಿಲ್ಲ. ಅವರು ಮ್ಯಾನೇಜ್ ಮಾಡಿ ಪತ್ನಿಯನ್ನು ಗೆಲ್ಲಿಸಿಕೊಂಡು ಬರಬಲ್ಲರು. ಜತೆಗೆ ಪ್ರಬಲ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಂ, ಕುರುಬ, ಲಿಂಗಾಯತ ಮತಗಳೇ ನಿರ್ಣಾಯಕ. ಅದರಲ್ಲೂ ಪಂಚಮಸಾಲಿ ಸಮಾಜಕ್ಕೆ ಸೇರಿದ ಮತಗಳ ಸಂಖ್ಯೆ ಹೆಚ್ಚಿವೆ. ಮುಸ್ಲಿಂ, ಕುರುಬ ಸಮಾಜದವರು ಕಾಂಗ್ರೆಸ್‌ಗೆ ಮತ ಚಲಾಯಿಸುತ್ತಾರೆ. ಪಂಚಮಸಾಲಿ ಸಮುದಾಯದವರಿಗೆ ಟಿಕೆಟ್ ನೀಡಿದರೆ ಮುಸ್ಲಿಂ ಕುರುಬ ಜತೆಗೆ ಲಿಂಗಾಯತ ಸಮುದಾಯದ ಮತಗಳು ಒಂದಿಷ್ಟು ಬರುತ್ತವೆ. ಹೀಗಾಗಿ ಗೆಲುವು ಸುಲಭ ಎಂಬ ಲೆಕ್ಕಾಚಾರವನ್ನು ಹೈಕಮಾಂಡ್ ಮುಂದೆ ಇಡಲಾಗುತ್ತಿದೆ.
ಹೊರಗಿನವರೆಂಬ ಆಕ್ಷೇಪ:ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತಾ ಬರುತ್ತಿದೆ. ಈ ಸಲ ಬದಲಿಸಿ ಲಿಂಗಾಯತ ಸಮುದಾಯಕ್ಕೆ ನೀಡುವ ಕುರಿತು ಕೆಪಿಸಿಸಿಯಲ್ಲಿ ಚರ್ಚೆ ನಡೆಯುತ್ತಿದೆಯಾದರೂ ಮುಸ್ಲಿಂ ಸಮುದಾಯವನ್ನು ಹೇಗೆ ಸಮಾಧಾನ ಮಾಡಬೇಕೆಂಬ ಯೋಚನೆಯನ್ನೂ ಹೈಕಮಾಂಡ್ ಮಾಡುತ್ತಿದೆ. ಜತೆಗೆ ಶಿವಲೀಲಾ ಕುಲಕರ್ಣಿ ಕ್ಷೇತ್ರದ ಹೊರಗಿನವರಾಗುತ್ತಾರೆ. ಅವರಿಗೇಕೆ ಟಿಕೆಟ್ ಎಂಬ ಆಕ್ಷೇಪ ಕೂಡ ಈಗಲೇ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಹಾಗೊಂದು ವೇಳೆ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡುವುದಿದ್ದರೆ ಕ್ಷೇತ್ರದಲ್ಲಿರುವ ಅದೇ ಸಮುದಾಯದವರಿಗೆ ಕೊಡಿ ಎಂಬ ಬೇಡಿಕೆಯನ್ನು ಕಾರ್ಯಕರ್ತರು ಮುಂದಿಡಲಿದ್ದಾರೆ. ಬೇವಿನಮರದ ಕೂಡ ಇದೇ ಸಮುದಾಯಕ್ಕೆ ಸೇರಿದವರು ಎಂಬುದನ್ನು ಮರೆಯುವಂತಿಲ್ಲ.
ಒಟ್ಟಿನಲ್ಲಿ ಶಿಗ್ಗಾಂವಿ-ಸವಣೂರು ಕ್ಷೇತ್ರದ ಟಿಕೆಟ್‌ಗಾಗಿ ಕೈಪಡೆಯಲ್ಲಿ ಭಾರೀ ಪೈಪೋಟಿ ನಡೆಯುತ್ತಿರುವ ಜತೆಗೆ ಮುಸ್ಲಿಂ ಸಮುದಾಯಕ್ಕೆ ಕೊಡಬೇಕೋ? ಲಿಂಗಾಯತ ಸಮುದಾಯಕ್ಕೆ ಕೊಡಬೇಕೋ ಎಂಬ ಜಿಜ್ಞಾಸೆ ಕೆಪಿಸಿಸಿಯಲ್ಲಿ ಉಂಟಾಗಿದೆ. ಏನೇ ಆದರೂ ಶಿಗ್ಗಾಂವಿ ಕ್ಷೇತ್ರಕ್ಕೆ ಇದೀಗ ಶಿವಲೀಲಾ ಕುಲಕರ್ಣಿ ರೇಸ್‌ನಲ್ಲಿರುವುದಂತೂ ಸತ್ಯ. ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಎಂಪಿ ಚುನಾವಣೆಯಲ್ಲಿ ಹೆಚ್ಚು ಮತಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಶಾಸಕರೂ ಇದ್ದರೂ ಬಿಜೆಪಿಯ ಪ್ರಹ್ಲಾದ ಜೋಶಿ ಅವರಿಗಿಂತ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಗೆ 8598 ಮತಗಳು ಹೆಚ್ಚು ಬಂದಿವೆ. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು ಮೂಡಿದೆ. ಉಪಚುನಾವಣೆಯಲ್ಲಿ ಹೇಗಾದರೂ ಗೆದ್ದು ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಬೇಕೆಂಬ ಇರಾದೆ ಕಾಂಗ್ರೆಸ್‌ನದ್ದು. ಹೀಗಾಗಿ ಅಳೆದು ತೂಗಿ ಗೆಲ್ಲುವ ಕುದುರೆಗೆ ಟಿಕೆಟ್ ಪಕ್ಕಾ ಮಾಡಲಿದೆ ಎಂಬುದು ಪಕ್ಷದ ಮುಖಂಡರ ಅಂಬೋಣ.