ಸಾರಾಂಶ
ಗೋಕರ್ಣ: ಇಲ್ಲಿಗೆ ಭೇಟಿ ನೀಡುವ ವಿದೇಶ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದ್ದು, ಈ ವರ್ಷ ವಿದೇಶಿ ಪ್ರವಾಸಿಗರ ಆಗಮನದ ಸಮಯ ಬಂದರೂ ಬೆರಳೆಣಿಕೆಯಲ್ಲಿ ಬರುತ್ತಿದ್ದಾರೆ. ೧೯೮೪ರಲ್ಲಿ ಬೆರಳೆಣಿಕೆಯಲ್ಲಿ ಬರುತ್ತಿದ್ದ ಪ್ರವಾಸಿಗರು ೧೯೯೦ರ ದಶಕದಲ್ಲಿ ಇಲ್ಲಿನ ಕಡಲತೀರಗಳನ್ನು ಜಗತ್ತಿಗೆ ಪರಿಚಯಿಸಿ ಧಾರ್ಮಿಕ ತಾಣವನ್ನು ಪ್ರವಾಸಿ ತಾಣವಾಗಿ ಬದಲಾಗಲು ಕಾರಣರಾಗಿದ್ದ ವಿದೇಶಿಗರು ಇಂದು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿರಲು ಹಲವಾರು ಕಾರಣಗಳಿವೆ.
ಬಹುಮುಖ್ಯವಾಗಿ ದೇಶಿ ಪ್ರವಾಸಿಗರ ಅತಿರೇಕದ ಮೋಜು ಮಸ್ತಿಯೇ ಕಾರಣ ಎನ್ನಲಾಗುತ್ತಿದೆ. ಕೋವಿಡ್ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಕಾರ್ಮೋಡಗಳು ಇತ್ತೀಚಿನ ಕಾರಣಗಳಾಗಿದ್ದರೂ ಕೋವಿಡ್ ಮಹಾಮಾರಿ ಬರುವ ಮೊದಲೇ ವಿದೇಶಿ ಪ್ರವಾಸಿಗರು ಇಳಿಮುಖಗೊಂಡಿದ್ದಾರೆ. ಇನ್ನೂ ವೀಸಾ ನಿಯಮದಲ್ಲಿ ಬದಲಾವಣೆ, ಉಕ್ರೇನ್, ರಷ್ಯಾ , ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಕೂಡ ಪ್ರವಾಸೋದ್ಯಮದ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮೊದಲು ಹೇಗಿತ್ತು?: ಹಿಪ್ಪಿಗಳು ಎಂದೇ ಚಿರಪರಿಚಿತವಾಗಿ ಮೂರು ದಶಕಗಳ ಹಿಂದೆ ಇಲ್ಲಿಗೆ ಬರುತ್ತಿದ್ದ ವಿದೇಶಿ ಪ್ರವಾಸಗರು ಮೋಜು ಮಸ್ತಿಗಿಂತ ಹೆಚ್ಚು ಇಲ್ಲಿ ಧಾರ್ಮಿಕ ಆಚರಣೆ, ಜನರ ಸಂಪ್ರದಾಯವನ್ನು ತಿಳಿಯುವುದು, ಇಲ್ಲಿ ವಾಸವಿದ್ದಷ್ಟು ದಿನ ನಮ್ಮ ಆಹಾರ ಪದ್ಧತಿ, ಆಚಾರ- ವಿಚಾರ ಅಳವಡಿಸಿಕೊಂಡು ಮನೆಯ ಸಂಬಂಧಿಕರಂತೆ ಇರುತ್ತಿದ್ದರು. ಓಂ, ಕುಡ್ಲೆ, ಹಾಫ್‌ಮೂನ್, ಪ್ಯಾರಡೈಸ್ ಕಡಲತೀರದಲ್ಲಿ ಅಂದು ಕೃಷಿ ಭೂಮಿಯಿತ್ತು. ಹಲವು ಹಾಲಕ್ಕಿ ಒಕ್ಕಲಿಗ ಸಮುದಾಯದವರು ಗೇಣಿ ಪದ್ಧತಿಯಲ್ಲಿ ಭತ್ತ ಬೆಳೆಯುತ್ತಿದ್ದರೆ, ಇನ್ನೂ ಕೆಲವರು ಸ್ವಂತ ಜಮೀನು ಹೊಂದಿದ್ದು, ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುತ್ತಿದ್ದರು. ಭತ್ತದ ಕಟಾವು ಮುಗಿದ ಮೇಲೆ ಗದ್ದಯಲ್ಲಿ ತೆಂಗಿನ ಗರಿಯ ಪುಟ್ಟ ಗುಡಿಸಲು ನಿರ್ಮಿಸುತ್ತಿದ್ದರು. ಇದೇ ವಿದೇಶಿಗರ ವಾಸಸ್ಥಳವಾಗಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ಬಂದವರಲ್ಲಿ ಹಲವರು ಶಿವರಾತ್ರಿ ಮಹೋತ್ಸವ ಮುಗಿಸಿ ವಾಪಸ್ ತೆರಳಿದರೆ ಇನ್ನೂ ಕೆಲವರು ಮೇ ಮೊದಲವಾರ ಸ್ವದೇಶಕ್ಕೆ ತೆರಳುತ್ತಿದ್ದರು. ನಂತರ ಗೋಕರ್ಣದ ಪ್ರವಾಸಿ ಹಂಗಾಮ ಕೊನೆಗೊಂಡು, ಈ ಭಾಗದ ರೈತರ ಕೃಷಿ ಚಟುವಟಿಕೆ ಹಂಗಾಮ ಪ್ರಾರಂಭವಾಗುತ್ತಿತ್ತು. ಹೀಗೆ ಕೇವಲ ಆರು ತಿಂಗಳ ಪ್ರವಾಸೋದ್ಯಮವಾಗಿತ್ತು. ಆರು ತಿಂಗಳು ಮನೆಯವರಂತೆ ಉಳಿದ ವಿದೇಶಿಗರು ನಮ್ಮ ಹಬ್ಬದ ದಿನಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದರು.ಆದರೆ ಇಂದು ಈ ಎಲ್ಲ ಜಾಗಗಳು ಹೊರರಾಜ್ಯ, ಹೊರ ಜಿಲ್ಲೆಯವರ ಕೈಯಲ್ಲಿ ಬಂದು ರೆಸಾರ್ಟ್, ಹೋಟೆಲ್‌ಗಳಾಗಿ ಪರಿವರ್ತನೆಗೊಂಡಿದೆ. ತಮ್ಮ ಐಷಾರಾಮಿ ಜೀವನದಿಂದ ಹೊರಬಂದು ನೆಮ್ಮದಿಯಿಂದ ಕಾಲ ಕಳೆಯಲು ಬರುತ್ತಿದ್ದ ವಿದೇಶಿಗರು ಇಂದು ಮರೆಯಾಗುತ್ತಿದ್ದಾರೆ. ಇನ್ನು ಸ್ವಚ್ಛತೆಯ ಬಗ್ಗೆಯೂ ಕಾಳಜಿ ಹೊಂದಿದ್ದು, ಸ್ವಚ್ಛತಾ ಕಾರ್ಯದಲ್ಲೂ ತೊಡಗಿಕೊಳ್ಳುತ್ತಿದ್ದರು. ಮೂಲ ಹೆಸರು ನಾಪತ್ತೆ: ಇಲ್ಲಿನ ಓಂ ಬೀಚ್ಅನ್ನು ಮೊದಲು ದೋಣಿಬೈಲ್, ಕೂಜನಿ ಎಂದು ಕರೆಯಲಾಗುತ್ತಿತ್ತು, ಆದರೆ ಓಂ ಆಕಾರದಲ್ಲಿ ಕಡಲತೀರವಿದ್ದ ಕಾರಣ ವಿದೇಶಗರು ಓಂ ಬೀಚ್ ನಾಮಕರಣ ಮಾಡಿದರು. ಅರ್ಧ ಚಂದ್ರಾಕೃತಿಯಲ್ಲಿರುವ ಹುಳಸೆಬೇಲೆಯನ್ನು ಹಾಫ್‌ಮೂನ್ ಎಂದು ತಟ್ಟಬೇಲೆಯನ್ನು ಪ್ಯಾರಡೈಸ್ ಎಂದು ನಾಮಕರಣ ಮಾಡುವ ಮೂಲಕ ತಾವು ಭೇಟಿ ನೀಡಿದ ಸ್ಥಳದ ಗುರತನ್ನು ತಮ್ಮದೇ ರೀತಿಯಲ್ಲಿ ಗುರುತಿಸಿ ಜಗತ್ತಿಗೆ ಪರಿಚಯಿಸಿದ್ದರು. ಇಂದು ಕಂದಾಯ ಇಲಖೆ ದಾಖಲಾತಿಯಲ್ಲಿ ಮಾತ್ರ ಹಳೆಯ ಹೆಸರು ಕಾಣಸಿಗುತ್ತಿದ್ದು, ಮುಂದಿನ ದಿನದಲ್ಲಿ ವಿದೇಶಿಗರಂತೆ ಮೂಲ ಹೆಸರು ಕಳೆದು ಹೋಗಬಹುದು. ಯಾವ ಉದ್ಯಮಕ್ಕೆ ಹೊಡೆತ?: ಸಣ್ಣ ಹಿಡುವಳಿದಾರರು ತಮ್ಮ ಪುಟ್ಟ ಜಾಗದಲ್ಲಿ ಗುಡಿಸಲು ನೀಡುತ್ತಿದ್ದರು. ಆದರೆ ಇವರ ಮನೆಯ ಸುತ್ತ ದೊಡ್ಡ ರೆಸಾರ್ಟ್ ತಲೆ ಎತ್ತಿದ್ದ ಕಾರಣ ಇವರು ಜಾಗವನ್ನು ಬೇರೆಯವರಿಗೆ ನೀಡುವ ಪರಿಸ್ಥಿತಿ ಬಂದಿದೆ. ವಿವಿಧ ಹಣ್ಣುಗಳು, ಎಳನೀರು(ತಾಜಾ ಸಿಯಾಳ) ಕಡಲತೀರದಲ್ಲಿ ಮಾರಾಟವಾಗುತ್ತಿತ್ತು. ಇದನ್ನು ನಂಬಿದ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲವಾಗಿದೆ. ಇನ್ನೂ ಪೇಟೆಯಲ್ಲಿ ಆರ್ಯುವೇದಿಕ್, ಸಾವಯವ ಸ್ಥಳೀಯ ಉತ್ಪನ್ನ, ಬಟ್ಟೆ ವ್ಯಾಪಾರಿಗಳಿಗೆ ನಷ್ಟು ಉಂಟುಮಾಡಿದೆ.
ಗೋಕರ್ಣಕ್ಕೆ ವಿದೇಶಿಗರ ಭೇಟಿಯ ವಿವರ೨೦೧೪-೨೦೧೫-೩೦೧೫
೨೦೧೫-೨೦೧೬-೨೮೫೬೨೦೧೬-೨೦೧೭-೨೫೯೯
೨೦೧೭-೨೦೧೮-೨೨೦೦೨೦೧೮-೨೦೧೯-೧೦೧೧
೨೦೧೯-೨೦೨೦-೫೨೮೨೦೨೦-೨೦೨೧-೦೨೦೨೧-೨೦೨೨-೧೧೦೦
೨೦೨೩-೧೮೦೦