ಉಡುಪಿ ಜಿಲ್ಲೆಯಲ್ಲಿ ಮಳೆ ಇಳಿಕೆ, ಆರೆಂಜ್ ಅಲರ್ಟ್‌

| Published : Jun 30 2024, 12:46 AM IST

ಸಾರಾಂಶ

ಹವಾಮಾನ ಇಲಾಖೆ ಇನ್ನೂ 2 - 3 ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆರೆಂಟ್ ಅಲರ್ಟ್‌ನ್ನು ಮುಂದುವರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಶನಿವಾರವೂ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿತ್ತು, ಆದರೆ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಹವಾಮಾನ ಇಲಾಖೆ ಇನ್ನೂ 2 - 3 ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆರೆಂಟ್ ಅಲರ್ಟ್‌ನ್ನು ಮುಂದುವರಿಸಲಾಗಿದೆ.

ಶುಕ್ರವಾರ ರಾತ್ರಿಯ ಮಳೆಗೆ ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮದ ಸುಂದರ ಪೂಜಾರಿ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು 25,000 ರು., ತೆಂಕನಿಡಿಯೂರು ಗ್ರಾಮದ ವೈಲೆಟ್ ವಾಜ್ಅವರ ಮನೆಗೆ ಮರ ಬಿದ್ದು 20,000 ರು, ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಮೂಡುಬೆಟ್ಟು ಸುಶೀಲಾ ಆಚಾರಿ ಅವರ ಗುಡಿಸಲಿಗೆ ಮರ ಬಿದ್ದು 40,000 ರು., ಕಾಪು ತಾಲೂಕಿನ ಪಡು ಗ್ರಾಮದ ಜಾವೇದ್ ಅವರ ಮನೆಯ ಮೇಲೆ ಹಲಸಿನ ಮರ ಬಿದ್ದು 80,000 ರು., ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದ ರಮೇಶ್ ಆಚಾರ್ಯ ಅವರ ಮನೆಗೆ 30,000 ರು. ನಷ್ಟವಾಗಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕನಕ ಕುಲಾಲ್ತಿ ಅವರ ಅಡಕೆ ತೋಟಕ್ಕೆ ಸಿಡಿಲು ಬಡಿದು ಅನೇಕ ಮರಗಳು ನಾಶವಾಗಿದ್ದು ಸುಮಾರು 50,000 ರು. ನಷ್ಟವನ್ನು ಅಂದಾಜಿಸಲಾಗಿದೆ. ಶುಕ್ರವಾರ ವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 35.9 ಮಿ.ಮೀ. ಮಳೆ ದಾಖಲಾಗಿದೆ. ತಾಲೂಕುವಾರು ಕಾರ್ಕಳ 32.30, ಕುಂದಾಪುರ 51.70, ಉಡುಪಿ 28.80, ಬೈಂದೂರು 35.60, ಬ್ರಹ್ಮಾವರ 34.60, ಕಾಪು 23.50, ಹೆಬ್ರಿ 44.80 ಮಿ.ಮೀ. ಮಳೆ ಸುರಿದಿದೆ.