ಸಾರಾಂಶ
ನಮ್ಮ ಅಜ್ಜಂದಿರ ಕಾಲದಿಂದಲೂ ಕಂಬಳಿ ನೇಯ್ದು ಮಾರಾಟ ಮಾಡುವುದು ನಮ್ಮ ವೃತ್ತಿ. ದೇವರಿಗೆ ಕಂಬಳಿ ಅರ್ಪಿಸಿದರೆ ಉತ್ತಮ. ನಾನು ರಾಮನ ಭಕ್ತ. ಜ. 22ರಂದು ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಮ ಮಂದಿರಕ್ಕೆ ಮುಟ್ಟಲಿ ಎಂದು ಕಂಬಳಿ ಅರ್ಪಿಸಿದ್ದೇನೆ. ಮನಸ್ಸಿಗೆ ನೆಮ್ಮದಿ, ಸಂತೋಷ ಹಾಗೂ ಸಮಾಧಾನ ತಂದಿ
ಧಾರವಾಡ: ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಕಡೆಗಳಿಂದ ಬಗೆ ಬಗೆಯ ದೇಣಿಗೆಗಳನ್ನು ಭಕ್ತರು ಅಯೋಧ್ಯೆಗೆ ಕಳಿಸುತ್ತಿದ್ದಾರೆ. ಇದೀಗ ಧಾರವಾಡದಿಂದ ಜೋಡಿ ಕಂಬಳಿಗಳು ರಾಮ ಲಲ್ಲಾನ ಪೂಜೆಗೆ ಹೋಗುತ್ತಿವೆ.
ಇಲ್ಲಿಯ ಸಮೀಪದ ಕಮಲಾಪೂರ ಬಡಾವಣೆಯ ಸುಭಾಸ ಬಸಪ್ಪ ರಾಯಪ್ಪನವರ ಎಂಬುವರೇ ಈ ಕಂಬಳಿ ಸಮರ್ಪಿಸಿದ ಶ್ರೀರಾಮ ಭಕ್ತ. ಸುಭಾಸ ಅವರಿಗೆ ರಾಮಮಂದಿರ ನಿರ್ಮಾಣವಾಗುತ್ತಿರುವುದು ಅತೀವ ಸಂತಸ ತಂದಿದ್ದು, ತಮ್ಮ ವೃತ್ತಿಯ ಮೂಲಕವೇ ನೆಚ್ಚಿನ ಶ್ರೀರಾಮಚಂದ್ರನಿಗೆ ಕಂಬಳಿ ಸಮರ್ಪಿಸಲಯ ನಿರ್ಧರಿಸಿದ್ದಾರೆ.ಕಂಬಳಿ ಅರ್ಪಿಸುವ ವಿಚಾರವಾಗಿ ಆರ್‌ಎಸ್ಸೆಸ್ ಮುಖಂಡ ಎಸ್.ಆರ್.ರಾಮನಗೌಡರ ಹಾಗೂ ಮಾಜಿ ಮಹಾಪೌರ ಈರೇಶ ಅಂಚಟಗೇರಿ ಅವರನ್ನು ಸುಭಾಸ ಸಂಪರ್ಕಿಸಿದರು. ಬಳಿಕ ಸುಭಾಸ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಬಳಿ ಕರೆದೊಯ್ದರು. ಪ್ರಲ್ಹಾದ ಜೋಶಿ ಅವರು ಈ ಕಂಬಳಿಗಳನ್ನು ಅಯೋಧ್ಯೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಕಂಬಳಿ ವಿಶೇಷ: 110 ಇಂಚು ಉದ್ದ ಮತ್ತು 54 ಇಂಚು ಅಗಲ ಇರುವ ಈ ಕಂಬಳಿಗಳನ್ನು ಸಣ್ಣ ಕುರಿಗಳ ಕೂದಲಿನಿಂದ ತಯಾರಿಸಲಾಗಿದೆ. ಎರಡು ಉತ್ತಮ ಗುಣಮಟ್ಟದ ಕಂಬಳಿ ಆರಿಸಿದ ಬಳಿಕ ಅದರ ಅಂಚಿಗೆ ಹಳದಿ ಮತ್ತು ಕೆಂಪು ಬಣ್ಣದ ದಾರದಿಂದ ಕರಿ ಕಟ್ಟಲಾಗಿದೆ. ಕರಿಯನ್ನು ಸ್ವತಃ ಸುಭಾಸ್ ಅವರೇ ಕಟ್ಟಿದ್ದಾರೆ.ಉತ್ತರ ಕರ್ನಾಟಕ ಭಾಗದಲ್ಲಿ ಈ ರೀತಿ ಕಂಬಳಿಗಳನ್ನು ದೇವರಿಗೆ ಅರ್ಪಿಸುವ ಸಂಪ್ರದಾಯವಿದೆ. ಅಲ್ಲದೇ ದೇವರ ಗದ್ದುಗೆ ಮೇಲೆ ಕೂಡ ಈ ಕಂಬಳಿ ಹಾಸಲಾಗುತ್ತದೆ. ಇಂತಹ ಕಂಬಳಿ ಮೇಲೆ ಕುಳಿತು ಶುಭ ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಕಂಬಳಿ ಅಂದರೆ ಭಕ್ತಿಯ ಸಂಕೇತವು ಹೌದು. ಹೀಗಾಗಿ ತನ್ನ ನೆಚ್ಚಿನ ದೇವರಿಗೆ ಕಂಬಳಿ ಸಮರ್ಪಿಸಿದ್ದಾರೆ ಸುಭಾಸ್.
ನಮ್ಮ ಅಜ್ಜಂದಿರ ಕಾಲದಿಂದಲೂ ಕಂಬಳಿ ನೇಯ್ದು ಮಾರಾಟ ಮಾಡುವುದು ನಮ್ಮ ವೃತ್ತಿ. ದೇವರಿಗೆ ಕಂಬಳಿ ಅರ್ಪಿಸಿದರೆ ಉತ್ತಮ. ನಾನು ರಾಮನ ಭಕ್ತ. ಜ. 22ರಂದು ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಮ ಮಂದಿರಕ್ಕೆ ಮುಟ್ಟಲಿ ಎಂದು ಕಂಬಳಿ ಅರ್ಪಿಸಿದ್ದೇನೆ. ಮನಸ್ಸಿಗೆ ನೆಮ್ಮದಿ, ಸಂತೋಷ ಹಾಗೂ ಸಮಾಧಾನ ತಂದಿದೆ ಎಂದು ಕಂಬಳಿ ನೇಕಾರ ಸುಭಾಸ ರಾಯಪ್ಪನರ ತಿಳಿಸಿದ್ದಾರೆ.