ಪ್ರಕೃತಿ ಜೊತೆಗಿನ ಹೊಂದಾಣಿಕೆಯಿಂದ ಉತ್ತಮ ಸಮಾಜ ಸೃಷ್ಟಿ:ರವೀಂದ್ರ ಭಟ್ಟ

| Published : May 10 2024, 01:32 AM IST

ಪ್ರಕೃತಿ ಜೊತೆಗಿನ ಹೊಂದಾಣಿಕೆಯಿಂದ ಉತ್ತಮ ಸಮಾಜ ಸೃಷ್ಟಿ:ರವೀಂದ್ರ ಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಕಾಡಿನ ಪ್ರಾಣಿಗಳು ಯಾವ ಸಮಯದಲ್ಲಿ ದಾಳಿ ಮಾಡುತ್ತದೆ ಎಂಬುದು ತಿಳಿಯುತ್ತದೆ. ಅದರೆ ನಾಡಿನಲ್ಲಿ ಯಾವ ಪ್ರಾಣಿ ಹೇಗೆ ದಾಳಿ ಮಾಡುತ್ತವೆ ಎಂಬು ತಿಳಿಯಲು ಸಾಧ್ಯವಿಲ್ಲ. ಈ ಹಿಂದೆ ನಮಗೆ ಆಹಾರವೇ ಔಷಧವಾಗಿತ್ತು. ಆದರೆ ಇಂದು ಏನಾದರೂ ಸೇವಿಸು, ಬೇಕಿದ್ದರೆ ಮಾತ್ರೆ ತೆಗೆದುಕೊಳ್ಳೋಣ ಎಂಬ ಮನೋಭಾವಕ್ಕೆ ಬಂದಿದ್ದೇವೆ

---

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಕೃತಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಉತ್ತಮ ಸಮಾಜ ಸೃಷ್ಟಿಯಾಗುತ್ತದೆ ಎಂಬುದನ್ನು ಉತ್ತಪ್ಪ ಅವರು ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ ಎಂದು ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹೇಳಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್ ಅಸೋಸಿಯೇಷನ್ ಆಯೋಜಿಸಿದ್ದ ಹಿರಿಯ ಪತ್ರಕರ್ತ ರಮೇಶ್ ಉತ್ತಪ್ಪ ಅವರ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಹಾರವೇ ಔಷಧವಾಗಿತ್ತು:ಕಾಡಿನ ಪ್ರಾಣಿಗಳು ಯಾವ ಸಮಯದಲ್ಲಿ ದಾಳಿ ಮಾಡುತ್ತದೆ ಎಂಬುದು ತಿಳಿಯುತ್ತದೆ. ಅದರೆ ನಾಡಿನಲ್ಲಿ ಯಾವ ಪ್ರಾಣಿ ಹೇಗೆ ದಾಳಿ ಮಾಡುತ್ತವೆ ಎಂಬು ತಿಳಿಯಲು ಸಾಧ್ಯವಿಲ್ಲ. ಈ ಹಿಂದೆ ನಮಗೆ ಆಹಾರವೇ ಔಷಧವಾಗಿತ್ತು. ಆದರೆ ಇಂದು ಏನಾದರೂ ಸೇವಿಸು, ಬೇಕಿದ್ದರೆ ಮಾತ್ರೆ ತೆಗೆದುಕೊಳ್ಳೋಣ ಎಂಬ ಮನೋಭಾವಕ್ಕೆ ಬಂದಿದ್ದೇವೆ ಎಂದರು.

ಕಾಡಿನ ಯಾವುದೇ ಪ್ರಾಣಿ ಬಲವಂತ ಮಾಡುವುದಿಲ್ಲ, ಜೊತೆಗೆ ರೆಕಾರ್ಡ್ ಕೂಡ ಮಾಡಿಕೊಳ್ಳುವುದಿಲ್ಲ. ಪ್ರಕೃತಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಉತ್ತಮ ಸಮಾಜ ಸೃಷ್ಟಿಯಾಗುತ್ತದೆ ಎಂಬುದನ್ನು ಉತ್ತಪ್ಪ ಅವರು ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ ಎಂದರು.

ನಾನು ಮೈಸೂರಿನಲ್ಲಿ ಪತ್ರಕರ್ತನಾಗಿ ಕೆಲಸ ಮಾಡುವಾಗ ಕಾಡಿನಲ್ಲಿರುವ ಜನರ ಬಗ್ಗೆ ಹೆಚ್ಚು ಬರೆದಿದ್ದೇನೆ. ಆದಿವಾಸಿಗಳ ಬಗ್ಗೆ ಕುತೂಹಲ ಉಂಟಾಗಿತ್ತು. ನಾವು ನಾಡಿನಲ್ಲಿ ಹೇಗೆ ಬದುಕಬೇಕು ಎಂಬುದು ತಿಳಿಸಿದ್ದು ಕಾಡು. ಕಾಡಿನಲ್ಲಿ ಹಗಲು ಹಗಲಾಗಿರುತ್ತದೆ ರಾತ್ರಿ ರಾತ್ತಿಯಾಗಿರುತ್ತದೆ. ಆದರೆ ನಾಡಿನಲ್ಲಿ ಇದನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಅಕ್ಷರ ಲೋಕಕ್ಕೆ ನಾಲ್ಕು ಕೃತಿಗಳನ್ನು ನೀಡಿದ ರಮೇಶ್ ಉತ್ತಪ್ಪ ಅವರನ್ನು ಅಭಿನಂದಿಸುತ್ತೇನೆ. ಏಕೆಂದರೆ ರಾಜಕಾರಣಿಗಳ ಬಗ್ಗೆ ಬರೆಯುವವರು ಸಾಕಷ್ಟು ಮಂದಿ ಇದ್ದಾರೆ. ಅದರೆ ವನ್ಯಜೀವಿಗಳ ಬಗ್ಗೆ ಬರೆಯುವವರು ಬೆರಳೆಣಿಕೆಯಷ್ಟು ಮಂದಿಮಾತ್ರ ಇದ್ದಾರೆ ಎಂದರು.

ಯಾವುದೇ ತಯಾರಿ ಬೇಡ:

ರಾಜಕೀಯ ನಾಯಕರು ಬರುವುದಾದರೆ ಮಧ್ಯರಾತ್ರಿವರೆಗೂ ಕಾದು ವರದಿ ಮಾಡುತ್ತಾರೆ. ಅದರೆ, ವನ್ಯಜೀವಿ ತಜ್ಞರು ಭೇಟಿ ನೀಡಿದರೆ, ಯಾರು ಹೋಗುವುದಿಲ್ಲ. ನೋಬಲ್ ಪುರಸ್ಕೃತ ವಿಲಯಂ ಗೋಲ್ಡಿಸ್ ಬಂದಾಗ ಒಬ್ಬ ಪತ್ರಕರ್ತರು ಬರಲಿಲ್ಲ. ರಾಜಕೀಯ ಮುಖಂಡರಿಗೆ ಪ್ರಶ್ನೆ ಮಾಡಲು ಯಾವುದೇ ತಯಾರಿ ಬೇಡ. ಎಂ.ಎಸ್. ಸ್ವಾಮಿನಾಥನ್ ಅಥವಾ ವಿಲಿಯಂ ಅವರೊಡನೆ ಮಾತನಾಡಬೇಕಾದರೆ ಅವರ ಕೃತಿ ಓದಿಕೊಳ್ಳಬೇಕಾಗುತ್ತದೆ. ಪತ್ರಕರ್ತನ ನಿಜವಾದ ಸಾಮರ್ಥ್ಯ ಇಂತಹ ಸಂದರ್ಭಗಳಲ್ಲಿ ತಿಳಿಯುತ್ತದೆ ಎಂದು ಅವರು ಹೇಳಿದರು.

ರಾಜಕೀಯ ರಾಜಕಾರಣದ ಬಗ್ಗೆ ಯಾವುದೇ ಅಧ್ಯಯಾನ ಇಲ್ಲದೆ ಬರೆಯಬಹುದು. ಅದರೆ, ಹುಲಿ ಸಂರಕ್ಷಣೆ ಏಕೆ ಅಗತ್ಯ ಎಂಬುದರ ಬಗ್ಗೆ ಬರೆಯಬೇಕಾದರೆ ಯಾರು ಬರೆಯುವುದಿಲ್ಲ. ಯಾವುದು ಆದ್ಯತೆ ಇಲ್ಲವೋ ಅದನ್ನು ಆದ್ಯತೆಯಾಗಿ ಮಾಡಿಕೊಂಡಿದ್ದಾರೆ. ಸಮಯವಿಲ್ದ ಓದುಗರಿಗೆ ಜಾಗವಿಲ್ಲದ ಪತ್ರಿಕೆಗೆ ಬರೆಯುತ್ತಿದ್ದೇವೆ. ಇದರ ಮಧ್ಯೆ ವನ್ಯಜೀವಿಗಳ ಬಗ್ಗೆ ಬರೆಯುವುದು ಬಹಳ ಮುಖ್ಯ. ಮುಖ್ಯಮಂತ್ರಿಗಳ ಹೇಳಿಕೆಯಷ್ಟೇ ಮುಖ್ಯವೋ ವನ್ಯಜೀವಿಗಳ ಆರ್ಥನಾದವೂ ಮುಖ್ಯ ಎಂದರು.

ರಾಜಕಾರಣಿಗಳ ಬಗ್ಗೆ ಬರೆಯವುದು ನಮ್ಮಕರ್ಮ. ವನ್ಯಜೀವಿಗಳ ಬಗ್ಗೆ ಓದಿದಾಗ ಈ ಕೃತಿಗಳು ಶಾಶ್ವತವಾಗಿ ಉಳಿಯುತ್ತದೆ. ವನ್ಯಜೀವಿಗಳ ಬಗ್ಗೆ ಬರೆಯುವವರಿಗೆ ಇತ್ತೀಚಿನ ದಿನಗಳಲ್ಲಿ ಅವಕಾಶ ನೀಡುತ್ತಿಲ್ಲ. ವನ್ಯಜೀವಿಗಳ ಬಗ್ಗೆ ಚಾನಲ್ ಮತ್ತು ಮ್ಯಾಗಜೀನ್ ಮಾಡಬಹುದು ಎಂದು ಈಗಾಗಲೇ ಸಾಬೀತಾಗಿದೆ ಎಂದು ಅವರು ಹೇಳಿದರು.

ಗ್ಲೋಬಲ್ ವಾರ್ಮಿಂಗ್ ಬಗ್ಗೆ ಈಗ ಕರ್ನಾಟಕದಲ್ಲಿ ಅನುಭವ ನೀಡಿದೆ. ಜಗತ್ತಿನ ಯಾವುದೇ ಮೂಲೆತಲ್ಲಿ ನಡೆಯವ ಘಟನೆ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಅಧ್ಯಯನ ಮಾಡುವವರಿಗೆ ಸಾಕಷ್ಟು ಅಂಶ ಸಿಗಲಿದೆ ಎಂದು ಅವರು ತಿಳಿಸಿದರು.

ಕಷ್ಟಕರ ಕ್ಷೇತ್ರ:

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಮಾಧ್ಯಮ ಕ್ಷೇತ್ರ ಎಂದರೆ ಕಷ್ಟಕರ ಕ್ಷೇತ್ರ ಎಂದು ನಾನು ತಿಳಿದಿದ್ದೇನೆ. ಮೂರು ಸಾಲುಗಳನ್ನು ಮೂರು ಪುಟಗಳು ಬರೆಯುವಷ್ಟು ಕ್ರಿಯಾಶೀಲವಾಗಿ ಬರೆಯುತ್ತಾರೆ. ದಿನ ಓದಿದರೆ, ಬರೆದರೆ ಬರವಣೆಗೆ ಶೈಲಿ ಹೆಚ್ಚುತ್ತದೆ. ನೂತನ ಶಿಕ್ಷಣ ನೀತಿಯಲ್ಲಿ ವಿಭಿನ್ನ ಆಲೋಚನೆ ಮೂಡುತ್ತದೆ. ತಾಳ್ಮೆ ಬೆಳೆಸಿಕೊಂಡರೆ ಸೃಜನ ಶೀಲರಾಗಿ ಗುಣಾತ್ಮಕ ಆಲೋಚನೆ ಹೆಚ್ಚುತ್ತದೆ. ಹೊಸ ಪದಗಳ ಪ್ರಯೋಗ ಮಾಡಬೇಕು. ಇದು ಇತ್ತೀಚಿನ ದಿನಗಳಲ್ಲಿ ಇದು ಕಡಿಮೆ ಆಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಐತಿಚಂಡ ರಮೇಶ್ ಉತ್ತಪ್ಪ ಅವರ ಕಾಡು ಹೇಳಿದ ಕಥೆ, ಹಾವು, ಆನೆ ಬದಲಾದ ವರ್ತನೆ ಮತ್ತು ಅರ್ಜುನ ಕೃತಿಗಳು ಬಿಡುಗಡೆಗೊಂಡಿತು.ವಿಜಯ ಕರ್ನಾಟಕ ದಿನಪತ್ರಿಕೆ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್. ಸಪ್ನ ಅಧ್ಯಕ್ಷತೆವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಡಾ.ಸಿ.ಕೆ. ಪುಟ್ಟಸ್ವಾಮಿ, ಡಾ. ಎನ್. ಮಮತಾ, ಕೃತಿಗಳ ಲೇಖಕ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ. ನಾಗೇಶ್ ಇದ್ದರು.

-- ಬಾಕ್ಸ್‌--

- ಕಾಡು ಪ್ರಾಣಿಗಳೂ ಕೂಡ ಮನುಷ್ಯರಂತೆಯೇ ಬದಲಾಗುತ್ತಿವೆ!-

ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಸಮೂಹ ಸಂಸ್ಥೆಯ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಈಗ ನಡೆದ ಚುನಾವಣಾ ವರದಿಯನ್ನು ಕಾಡಿನಲ್ಲಿ ನಡೆಸಿದ್ದರೆ ಹೇಗಿರುತ್ತಿತ್ತು ಎಂದು ಯೋಚಿಸಿದರೆ, ಸಂಖ್ಯೆಯಲ್ಲಿ ಹೆಚ್ಚಿರುವ ಮಂಗಗಳನ್ನು ನಾಯಕರಾಗಿ ಆಯ್ಕೆ ಮಾಡಲಾಗುತ್ತಿತ್ತು ಎನಿಸುತ್ತದೆ ಎಂದರು.

ನಾವು ವನ್ಯಜೀವಿಗಳ ಬಗ್ಗೆ ಯಾಕೆ ಆದ್ಯತೆ ನೀಡುತ್ತಿಲ್ಲ ಎಂದು ರಾಜಕಾರಣಿಗಳನ್ನು ಕೇಳಿದರೆ ಅವು ಓಟು ಹಾಕುವುದಿಲ್ಲ ಎಂಬ ಉತ್ತರ ಬರುತ್ತದೆ. ಮಾಧ್ಯಮಗಳು ಯಾಕೆ ಆದ್ಯತೆ ನೀಡುವುದಿಲ್ಲ ಎಂದರೆ ಅವು ಜಾಹೀರಾತು ಕೊಡುವುದಿಲ್ಲ, ಪತ್ರಿಕೆಯನ್ನೂ ಓದುವುದಿಲ್ಲ. ಹೋಗಲಿ ಸುದ್ದಿಗೋಷ್ಠಿಯನ್ನೂ ನಡೆಸುವುದಿಲ್ಲ ಎಂದರು.

ಮೈಸೂರು ಸುತ್ತಮುತ್ತಲ ಪ್ರದೇಶದಲ್ಲಿ ವನ್ಯಜೀವಿ ಪತ್ರಿಕೋದ್ಯಮಕ್ಕೆ ಸಾಕಷ್ಟು ಆಸಕ್ತಿ ಇದೆ. ಕೃಪಾಕರ - ಸೇನಾನಿ ಮುಂತಾದ ಅನೇಕ ಪ್ರಖ್ಯಾತ ಛಾಯಾಗ್ರಾಹಕರು ಇದ್ದಾರೆ. ಆದರೆ ಕನ್ನಡಪ್ರಭದಲ್ಲಿ ಸೇವ್ ವೈಲ್ಡ್ ಲೈಫ್‌ ಕಾರ್ಯಕ್ರಮ ತಂದೆವು. ಪ್ರಮುಖ ರಾಯಭಾರಿಯನ್ನು ನೇಮಿಸಿ ಕಾಡಿಗೆ ಕರೆದೊಯ್ದು, ಅಲ್ಲಿನ ಸಮಸ್ಯೆಗಳಿಗೆ ಸರ್ಕಾರದ ಮೂಲಕವೇ ಪರಿಹರಿಸಿಕೊಡಲಾಗುತ್ತಿದೆ. ಕಾಡು ಪ್ರಾಣಿಗಳೂ ಕೂಡ ಮನುಷ್ಯರಂತೆಯೇ ಬದಲಾಗುತ್ತಿವೆ. ಅವುಗಳೂ ಕೂಡ ಚಾಪೆ ಕೆಳಕೆ ನುಸುಳಲು ಆರಂಭಿಸಿವೆ ಎಂದರು.