ಜನಕಲ್ಯಾಣ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ ಸ್ಮಾರಕ ಭವನದ ಲೋಕಾರ್ಪಣೆ ಸಮಾರಂಭವು ಜೂ. 21 ರಂದು ಬೆಳಗ್ಗೆ 11 ಗಂಟೆಗೆ ನಗರದ ನ್ಯೂ ಗುಡ್ಶೆಡ್ ರಸ್ತೆಯಲ್ಲಿರುವ ಸಂಘ ಸದನದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜನಕಲ್ಯಾಣ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ ಸ್ಮಾರಕ ಭವನದ ಲೋಕಾರ್ಪಣೆ ಸಮಾರಂಭವು ಜೂ. 21 ರಂದು ಬೆಳಗ್ಗೆ 11 ಗಂಟೆಗೆ ನಗರದ ನ್ಯೂ ಗುಡ್ಶೆಡ್ ರಸ್ತೆಯಲ್ಲಿರುವ ಸಂಘ ಸದನದಲ್ಲಿ ನಡೆಯಲಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ನೂತನ ಸ್ಮಾರಕ ಭವನವನ್ನು ಲೋಕಾರ್ಪಣೆ ಮಾಡಲಿದ್ದು, ಬೆಳಗಾವಿಯ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕ ಜೀವನದಲ್ಲಿ ರಾಷ್ಟ್ರೀಯ ಚಿಂತನೆ, ಸಂಘಟನಾ ನಿಷ್ಠೆ ಹಾಗೂ ಸಮಾಜಸೇವೆಯ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದ ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ ಅವರ ಸ್ಮರಣಾರ್ಥ ಈ ಭವನವನ್ನು ನಿರ್ಮಿಸಲಾಗಿದ್ದು, ಸಾಮಾಜಿಕ ಹಾಗೂ ರಾಷ್ಟ್ರೀಯ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಗಣ್ಯರು, ಸಂಘದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಆಮಂತ್ರಿತರು ಕಾರ್ಯಕ್ರಮ ಆರಂಭಕ್ಕೂ ಹತ್ತು ನಿಮಿಷ ಮುಂಚಿತವಾಗಿ ಸ್ಥಳದಲ್ಲಿ ಉಪಸ್ಥಿತರಿರಬೇಕು ಎಂದು ಜನಕಲ್ಯಾಣ ಟ್ರಸ್ಟ್‌ನ ನಿರ್ವಾಹಕ ವಿಶ್ವಸ್ತ ಅರವಿಂದರಾವ್ ದೇಶಪಾಂಡೆ ಮನವಿ ಮಾಡಿದ್ದಾರೆ.ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ:
1920ರ ಜೂನ್ 23ರಂದು ಗದಗ ಜಿಲ್ಲೆಯ ನರಗುಂದದಲ್ಲಿ ಜನಿಸಿದ ಜಗನ್ನಾಥರಾವ್ ಜೋಶಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿ, ಭಾರತೀಯ ಜನಸಂಘ ಹಾಗೂ ಬಳಿಕ ಭಾರತೀಯ ಜನತಾ ಪಕ್ಷದ ಪ್ರಮುಖ ಸಂಘಟಕರಾಗಿ ಗುರುತಿಸಿಕೊಂಡಿದ್ದರು. ಪ್ರಖರ ವಾಗ್ಮಿತ್ವ, ಸರಳ ಜೀವನ, ತ್ಯಾಗ ಮತ್ತು ಸಂಘಟನಾ ಸಾಮರ್ಥ್ಯದಿಂದ ಅವರು ಕರ್ನಾಟಕ ಕೇಸರಿ ಎಂದೇ ಜನಪ್ರಿಯರಾಗಿದ್ದರು. ಗೋವಾ ವಿಮೋಚನಾ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು, ಸಾವಿರಾರು ಕಾರ್ಯಕರ್ತರನ್ನು ಸಂಘಟಿಸಿ ಹೋರಾಟಕ್ಕೆ ನಾಯಕತ್ವ ನೀಡಿದ್ದರು. ಅವರು ಭೋಪಾಲ್ ಮತ್ತು ಶಾಜಾಪುರ ಲೋಕಸಭಾ ಕ್ಷೇತ್ರಗಳಿಂದ ಸಂಸದರಾಗಿ ಆಯ್ಕೆಯಾಗಿದ್ದಲ್ಲದೆ, ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಕರ್ನಾಟಕದಲ್ಲಿ ಜನಸಂಘ ಮತ್ತು ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿಬೆಳೆಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದ್ದು, ಅವರ ರಾಷ್ಟ್ರನಿಷ್ಠೆ ಮತ್ತು ಆದರ್ಶಮಯ ಸಾರ್ವಜನಿಕ ಜೀವನದ ಸ್ಮರಣಾರ್ಥ ಬೆಳಗಾವಿಯಲ್ಲಿ ಈ ಸ್ಮಾರಕ ಭವನ ನಿರ್ಮಿಸಲಾಗಿದೆ.