ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಚನ್ನೀಪುರ ಗ್ರಾಮದಲ್ಲಿ ಮಹದೇಶ್ವರ ಸೇವಾ ಟ್ರಸ್ಟ್ ವತಿಯಿಂದ, ನೂತನವಾಗಿ ನಿರ್ಮಿಸಲಾಗಿರುವ ಮಹದೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಕಳಸಾರೋಹಣ ಶ್ರದ್ಧಾ, ಭಕ್ತಿ ಮತ್ತು ವಿಜೃಂಭಣೆಯಿಂದ ನೆರವೇರಿತು.ಫೆ.13 ರಂದು ಗುರುವಾರ ಬೆಳಗ್ಗೆಯಿಂದ ಗಣಪತಿ ಕಳಸ, ನಂದಿ, ಪ್ರಧಾನ ದೇವತೆಗಳ ಕಳಸ ಪೂಜೆ, ನವಗ್ರಹ ಮೃತ್ಯುಂಜಯ ದಶ ದಿಕ್ಕು ಪಾಲಕರ ಕಳಸ, ಸಪ್ತ ಸಭೆ ಇತ್ಯಾದಿ ದೇವತೆಗಳ ಕಳಸ ಪೂಜೆ ಹಾಗೂ ರುದ್ರ ಹೋಮ, ನವಗ್ರಹ ಹೋಮ, ದುರ್ಗಾ ಹೋಮ, ಮೃತ್ಯುಂಜಯ ಹೋಮ, ಪ್ರಧಾನ ದೇವತೆಗಳಿಗೆ ಹೋಮ ಹಾಗೂ ಪೂರ್ಣಾಹುತಿ ಹಾಗೂ ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಸಂಜೆ ಶುಭ ಲಗ್ನದಲ್ಲಿ ಬಸವೇಶ್ವರ ಹಾಗೂ ನಂದಿ ಧ್ವಜ, ವಾದ್ಯ, ಪೂಜಾ ಕುಣಿತ ಮತ್ತು ವೀರಗಾಸೆ ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳ ಜೊತೆಯಲ್ಲಿ ಮಹದೇಶ್ವರ ಸ್ವಾಮಿಗೆ ಹಾಲರವಿ ಸೇವೆ ನಡೆಯಿತು.ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠ ಪೀಠಾದ್ಯಕ್ಷರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಡಿ.ಹಲಸಹಳ್ಳಿ ಗವಿಮಠದ ಪೀಠಾಧ್ಯಕ್ಷರಾದ ಷಡಕ್ಷರ ಸ್ವಾಮೀಜಿ ಅವರ ನೇತೃತ್ವದಲ್ಲಿ ಫೆ.14 ರಂದು ಮುಂಜಾನೆ 4 ಗಂಟೆಯಿಂದ ಶುಭ ಬ್ರಾಹ್ಮೀ ಮುಹೂರ್ತದಲ್ಲಿ ಶಿಲಾ ಪ್ರತಿಷ್ಠಾಪನೆ, ಶ್ರೀ ಮಹದೇಶ್ವರ ಸ್ವಾಮಿ ಪ್ರತಿಷ್ಠಾಪನೆ, ನಂದಿ ಮುನೇಶ್ವರ ಮತ್ತು ಗರುಡಗಂಭ, ನವಗ್ರಹ, ನಾಗರಕಲ್ಲು, ಗಣಪತಿ, ಸುಬ್ರಹ್ಮಣ್ಯ, ಕಳಸ ಸ್ಥಾಪನೆ ಅಭಿಷೇಕ, ಕಲಾಕರ್ಷಣೆ, ವಿಶೇಷ ಅಲಂಕಾರ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಹೊನ್ನಾಯಕನಹಳ್ಳಿ ಬಸಪ್ಪ, ಬಸವನಪುರ ಬಸಪ್ಪ, ಚನ್ನೀಪುರ ಬಸಪ್ಪ, ಅಗಸನಪುರ ಬಸಪ್ಪ, ಕೋಡಿಪುರ ಬಸಪ್ಪ, ಅಂತರವಳ್ಳಿ ಸಿದ್ಧೇಶ್ವರ ಸ್ವಾಮಿ, ಬಸಪ್ಪ ದೇವರ ಮೆರವಣಿಗೆ ಹಾಗೂ ದೇವರ ಪೂಜಾ ಉತ್ಸವ ನಡೆಯಿತು. ದೇವಾಲಯ ಮತ್ತು ಗ್ರಾಮದ ರಸ್ತೆಯುದ್ದಕ್ಕೂ ಅಳವಡಿಸಿದ್ದ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯಿತು. ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.ಹುಲ್ಲಹಳ್ಳಿ, ಕೋಡಿಪುರ, ಬಸವನಪುರ, ಹುಲ್ಲಾಗಾಲ, ಮೈಸೂರು, ಮಂಡ್ಯ, ಗುಂಡಾಪುರ, ಏಳಗಹಳ್ಳಿ, ಕಂಚನಹಳ್ಳಿ ಕರಲಕಟ್ಟೆ, ದಡಮಹಳ್ಳಿ, ಶಾನುಭೋಗನಹಳ್ಳಿ, ಕೆಂಪಯ್ಯನದೊಡ್ಡಿ, ಶೆಟ್ಟಿಕೆರೆ ದೊಡ್ಡಿ, ಚೊಟ್ಟನಹಳ್ಳಿ, ಗ್ರಾಮ ದೇವತೆಪುರ, ಕನಕಪುರ, ನಲ್ಲಹಳ್ಳಿ, ಚನ್ನೀಪುರದೊಡ್ಡಿ, ಬಾಣಗಹಳ್ಳಿ, ಮಡಹಳ್ಳಿದೊಡ್ಡಿ, ಸಂಬೇಗೌಡನದೊಡ್ಡಿ, ಬಾಳೆಪುರದೊಡ್ಡಿ ಸೇರಿ ವಿವಿಧ ಗ್ರಾಮಗಳ ಒಕ್ಕಲಿನ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹದೇಶ್ವರ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಯಜಮಾನರು, ನಾಡಗೌಡರು, ಮುಖಂಡರು ಸೇರಿ ಸಾವಿರಾರು ಭಕ್ತಾದಿಗಳು ಹಾಜರಿದ್ದರು.