16ರಂದು ಕುಕ್ಕೆ ಸುಬ್ರಹ್ಮಣ್ಯನ ಉತ್ಸವಕ್ಕೆ ನೂತನ ಬೆಳ್ಳಿ ಪಲ್ಲಕಿ ಸಮರ್ಪಣೆ

| Published : Dec 12 2024, 12:33 AM IST

ಸಾರಾಂಶ

ಡಿ.೧೬ರಂದು ಕ್ಷೇತ್ರದ ಪ್ರಧಾನ ಅರ್ಚಕ ಸೀತರಾಮ ಯಡಪಡಿತ್ತಾಯರಿಂದ ನೂತನ ಪಲ್ಲಕಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ವಿಶೇಷ ಪೂಜೆ ನೆರವೇರಿ ದಾನಿಗಳಿಂದ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿದೆ. ಅದೇ ದಿನ ರಾತ್ರಿ ಸುಬ್ರಹ್ಮಣ್ಯ ದೇವರ ಹೊರಾಂಗಣ ಉತ್ಸವ ನೂತನ ಪಲ್ಲಕಿಯಲ್ಲಿ ನಡೆಯಲಿದೆ.

ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಡಿ.16ರಂದು ನೂತನ ಉತ್ಸವ ಪಲ್ಲಕಿ ಸಮರ್ಪಣೆಯಾಗಲಿದೆ. ಇನ್ನು ಮುಂದೆ ಹೊಸ ಬೆಳ್ಳಿಯ ಪಲ್ಲಕಿಯಲ್ಲಿ ಹೊರಾಂಗಣ ಹಾಗೂ ಇನ್ನಿತರ ಉತ್ಸವಗಳು ನಡೆಯಲಿವೆ.

ಸುಮಾರು ೧೭ ಲಕ್ಷ ೬೫ ಸಾವಿರದ ೨೦೦ ರುಪಾಯಿ ವೆಚ್ಚದಲ್ಲಿ ೧೮ ಕೆ.ಜಿ ಬೆಳ್ಳಿಯ ಕವಚದ ಪಲ್ಲಕಿ ನಿರ್ಮಾಣವಾಗಿದೆ. ಕಾರ್ಕಳದ ಬಜಗೋಳಿ ಶಿಲ್ಪಿ ಸುಧಾಕರ ಡೋಂಗ್ರೆ ಅವರ ನೇತೃತ್ವದ ತಂಡದಿಂದ ನೂತನ ಪಲ್ಲಕಿಯ ಕೆಲಸ ಕಾರ್ಯಗಳು ಪೂರ್ಣಗೊಂಡಿದೆ. ನೂತನ ಪಲ್ಲಕಿ ಡಿ.೧೫ರಂದು ಕುಕ್ಕೆ ಕ್ಷೇತ್ರಕ್ಕೆ ಪುರ ಪ್ರವೇಶ ಮಾಡಲಿದೆ. ಬಳಿಕ ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆಯಿಂದ ಈ ನೂತನ ಪಲ್ಲಕಿ ಮೆರವಣಿಗೆಯಲ್ಲಿ ದೇವಳಕ್ಕೆ ಪ್ರವೇಶಿಸಲಿದೆ. ಡಿ.೧೬ರಂದು ಕ್ಷೇತ್ರದ ಪ್ರಧಾನ ಅರ್ಚಕ ಸೀತರಾಮ ಯಡಪಡಿತ್ತಾಯರಿಂದ ನೂತನ ಪಲ್ಲಕಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ವಿಶೇಷ ಪೂಜೆ ನೆರವೇರಿ ದಾನಿಗಳಿಂದ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿದೆ. ಅದೇ ದಿನ ರಾತ್ರಿ ಸುಬ್ರಹ್ಮಣ್ಯ ದೇವರ ಹೊರಾಂಗಣ ಉತ್ಸವ ನೂತನ ಪಲ್ಲಕಿಯಲ್ಲಿ ನಡೆಯಲಿದೆ.

ಬಾಗಲಕೋಟೆ ನಿವಾಸಿ ನಾಗರಾಜ ಕುಲಕರ್ಣಿ ಹಾಗೂ ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್. ಗಲಗಲಿ ಜಮಖಂಡಿ ಪರಿವಾರದಿಂದ ಈ ಒಂದು ನೂತನ ಬೆಳ್ಳಿಯ ಪಲ್ಲಕಿ ಸಮರ್ಪಣೆಯಾಗಲಿದೆ. ನಾಗರಾಜ ಕುಲಕರ್ಣಿ ಪ್ರಸ್ತುತ ಸಿಂಗಾಪುರದಲ್ಲಿ ಉದ್ಯಮ ವ್ಯವಹಾರ ನಡೆಸುತ್ತಿದ್ದು ಸುಬ್ರಹ್ಮಣ್ಯ ದೇವರ ಪರಮ ಭಕ್ತರಾಗಿದ್ದಾರೆ. ಇವರ ಹರಕೆಯಂತೆ ಡಿ.೧೬ರಂದು ಬೆಳ್ಳಿಯ ಪಲ್ಲಕಿ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿದೆ.