ಚನ್ನಗಿರಿ: ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ಬಳಿಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಾಡ ಬಂದೂಕು ಉಪಯೋಗಿಸಿ ಎರಡು ಜಿಂಕೆಗಳನ್ನು ಕೊಂದು ಮಾಂಸವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಬಂಧಿಸಿದ್ದಾರೆ. ಆರೋಪಿಯಿಂದ ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಸಂಚಾರಿ ದಳದ ಅಧಿಕಾರಿ ಮಸ್ತಾನ್ ತಿಳಿಸಿದ್ದಾರೆ.
ತಾಲೂಕಿನ ಮಲ್ಲಿಗೆರೆ ಗ್ರಾಮದ ವಾಸಿ ದಿವಾಕರ ನಾಯ್ಕ (28) ಬಂಧಿತ ಅರೋಪಿ. ಸೋಮವಾರ ಬೆಳಗಿನ ಜಾವ ಅರಣ್ಯ ಪ್ರದೇಶಕ್ಕೆ ಹೋಗಿ ನಾಡ ಬಂದೂಕಿನಿಂದ ಜಿಂಕೆಗಳ ಬೇಟೆಯಾಡಿದ್ದಾನೆ. 2 ಜಿಂಕೆಗಳ ಕೊಂದು ತಂದು ಕತ್ತರಿಸಿ ಮಾಂಸ ವನ್ನು ಮಾರಾಟ ಮಾಡುತ್ತಿದ್ದನು. ಈ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಜಿಂಕೆ ಮಾಂಸವನ್ನು ನ್ಯಾಯಾಲಯದ ಆದೇಶದಂತೆ ಸುಟ್ಟು ಹಾಕಲಾಯಿತು.ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ.ರವೀಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ತಗ್ಗಿನ ಮನೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಚನ್ನಗಿರಿ ಸಂಚಾರಿ ದಳ ಅರಣ್ಯಾಧಿಕಾರಿ ಮಸ್ತಾನ್, ಡಿಆರ್‌ಎಫ್‌ಒ ಶೇಖರ್ ಚಾಗ್ಲೇ, ವಿ.ಎಸ್.ಮನೋಹರ್, ಶಿವಕುಮಾರ್, ಅರಣ್ಯ ರಕ್ಷಕರಾದ ಶಿವರಾಜ್ ತಮ್ಮಡಗಿ, ಮೆಹಬೂಬ್ ಸುಭಾನ್, ದೇವಪ್ಪ, ದೇವರಾಜ್ ಚಾಲಕರಾದ ಫ್ರಾನ್ಸಿಸ್, ದೇವಪ್ಪ ಇನ್ನಿತರರು ಇದ್ದರು.
- - --28ಕೆಸಿಎನ್ಜಿ3:
ಜಿಂಕೆಗಳ ಮಾಂಸ ಮಾರುತ್ತಿದ್ದ ಆರೋಪಿಯನ್ನು ಬಂಧಿಸಿದ ಅಧಿಕಾರಿಗಳು-ಸಿಬ್ಬಂದಿ ತಂಡ.