ಸುಳ್ಳು ಗ್ಯಾರಂಟಿಯಿಂದ ಚುನಾವಣೆಯಲ್ಲಿ ಸೋಲು: ಮಾಜಿ ಸಚಿವ ಶ್ರೀರಾಮುಲು

| Published : Mar 13 2024, 02:01 AM IST

ಸಾರಾಂಶ

ಇಡೀ ದೇಶದಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಪರ ಅಲೆ ಎದ್ದಿದೆ. ಸುಳ್ಳು ಗ್ಯಾರಂಟಿಗಳ ಭರವಸೆ ನೀಡಿ ಗೆದ್ದು ಬಂದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಜ್ಯ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡಿದರೂ, ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದರೂ ಆನಂದ ಸಿಂಗ್‌ ಅವರ ಪುತ್ರ ಸಿದ್ಧಾರ್ಥ ಸಿಂಗ್‌ ಹಾಗೂ ನಾನು ವಿಧಾನಸಭೆ ಚುನಾವಣೆಯಲ್ಲಿ ಸುಳ್ಳು ಗ್ಯಾರಂಟಿಗಳಿಂದ ಸೋಲನುಭವಿಸಿದೆವು. ಸೋಲಿನ ನೋವಿದೆ. ಗೆದ್ದು ಬಂದವರು ಈಗ ಅಭಿವೃದ್ಧಿ ಮಾಡುತ್ತಿಲ್ಲ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಮತ್ತೆ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಣೋಣ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದ ಪಟೇಲ್‌ ನಗರದಲ್ಲಿರುವ ಕಚೇರಿಯಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ ಹಾಗೂ ಜಿಲ್ಲಾ ಎಸ್ಟಿ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಡೀ ದೇಶದಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಪರ ಅಲೆ ಎದ್ದಿದೆ. ಸುಳ್ಳು ಗ್ಯಾರಂಟಿಗಳ ಭರವಸೆ ನೀಡಿ ಗೆದ್ದು ಬಂದವರಿಗೆ ತಕ್ಕ ಪಾಠ ಕಲಿಸಬೇಕು. ಹಾಗಾಗಿ ಈಗ ನಾವು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ವಾಲ್ಮೀಕಿ ಸಮಾಜದ ಏಳ್ಗೆಗೆ ಆನಂದ ಸಿಂಗ್‌ ಅವರು ಶ್ರಮಿಸಿದ್ದಾರೆ. ನಾನು ಕೂಡ ಮಾತು ಕೊಟ್ಟಂತೆ ನಡೆದುಕೊಂಡಿರುವೆ. ಹೊಸಪೇಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ ಶೇ.7ಕ್ಕೆ ಹಾಗೂ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದಿದ್ದೆ. ನುಡಿದಂತೆ ಬಸವರಾಜ ಬೊಮ್ಮಾಯಿ ಸರ್ಕಾರ ಹೆಚ್ಚಳ ಮಾಡಿದೆ. ಜನಸಂಖ್ಯೆ ಅನುಗುಣವಾಗಿ ಹೆಚ್ಚಳ ಮಾಡಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಎಸ್ಟಿ ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ವಿಧಾನಸೌಧದ ಎದುರು ನಿರ್ಮಾಣ ಮಾಡಿರುವುದನ್ನು ಹೊರತುಪಡಿಸಿದರೆ ಈ ಸಮಾಜಕ್ಕೆ ನಯಾ ಪೈಸೆ ಕೆಲಸ ಮಾಡಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ₹11,144 ಕೋಟಿಯನ್ನು ಗ್ಯಾರಂಟಿಗೆ ತೆಗೆದುಕೊಂಡಿದೆ. ಇದರಿಂದ ಈ ಸಮಾಜಗಳ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಡಲಿ ಏಟು ಬಿದ್ದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ನಾವು ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸೋಣ. ಸುಷ್ಮಾ ಸ್ವರಾಜ್‌ ಅವರು ಬಳ್ಳಾರಿಯಿಂದ ಸ್ಪರ್ಧೆ ಮಾಡಿದ ಬಳಿಕ ಬಳ್ಳಾರಿ ಬಿಜೆಪಿ ಭದ್ರಕೋಟೆಯಾಗಿದೆ. ಈ ಕೋಟೆಯನ್ನು ನಾವು ಕಾಯ್ದುಕೊಳ್ಳಬೇಕಿದೆ. ಕ್ಷೇತ್ರದಲ್ಲಿ ನಮ್ಮ ಶಾಸಕರು ಕಡಿಮೆ ಇರಬಹುದು. ಮೋದಿ ಅಲೆ, ಕಾರ್ಯಕರ್ತರ ಬಲ ನಮಗಿದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಜಯಗಳಿಸೋಣ ಎಂದರು.

ಸಂಸದ ವೈ. ದೇವೇಂದ್ರಪ್ಪ, ಎಂಎಲ್ಸಿ ಹೇಮಲತಾ ನಾಯಕ, ಪಕ್ಷದ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಜಿಲ್ಲಾಧ್ಯಕ್ಷ ಚನ್ನಬಸನಗೌಡ ಪಾಟೀಲ್‌, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ್‌ ಕಾಮಟಗಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಬಲ್ಲಾ ಹುಣಸಿ ರಾಮಣ್ಣ, ಶಂಕರ ಮೇಟಿ, ಗೋಸಲ ಭರಮಪ್ಪ, ಕಾಸಟ್ಟಿ ಉಮಾಪತಿ, ಸುಂಕಮ್ಮ, ಎ. ಲತಾ, ತಾರಿಹಳ್ಳಿ ಜಂಬುನಾಥ, ಸಂದೀಪ್‌ ಸಿಂಗ್‌, ದಯಾನಂದ್, ಸಾಲಿಸಿದ್ದಯ್ಯಸ್ವಾಮಿ, ರಾಘವೇಂದ್ರ ಮತ್ತಿತರರಿದ್ದರು. ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಎಂ.ಪಿ. ನಾಯ್ಕ, ಮುಖಂಡ ಸತ್ತೂರ್ ಹಾಲೇಶ್ ನೇತೃತ್ವದಲ್ಲಿ ಸುಮಾರು 25 ಜನ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು.