ಗೃಹ ಸಚಿವರಿಂದಲೇ ಆರೋಪಿ ಶಾಸಕರ ರಕ್ಷಣೆ

| Published : Aug 14 2024, 12:45 AM IST

ಸಾರಾಂಶ

Defending the accused MLAs from the Home Minister himself

-ಪಿಎಸ್ಐ ಪರಶುರಾಮ ಸಾವು ಪ್ರಕರಣದ ಆರೋಪಿಗಳ ರಕ್ಷಣೆ: ಆರೋಪ

- ಗೃಹ ಸಚಿವರ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ ಕನ್ನಡಪ್ರಭ ವಾರ್ತೆ ಶಹಾಪುರ

ಪಿಎಸ್ಐ ಪರಶುರಾಮ ಅವರ ಸಾವಿನ ಆರೋಪ ಶಾಸಕರ ಮೇಲೆ ಇದ್ದು, ಸೂಕ್ತ ತನಿಖೆ ಆಗಬೇಕು, ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆ ಆಗಬೇಕು. ಆರೋಪಿಗಳಿಗೆ ರಕ್ಷಣೆ ನೀಡಿರುವ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.ನಗರದ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಅವರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ನಿಂದನೆ ಆರೋಪ ಹೊತ್ತಿರುವ ಅವರನ್ನು ಪೊಲೀಸರು ಇನ್ನು ಯಾಕೆ ಬಂಧಿಸಲಿಲ್ಲ. ಪೊಲೀಸರು ಹೇಳುವ ಪ್ರಕಾರ ಅವರು ತಲೆಮರಿಸಿಕೊಂಡಿದ್ದಾರೆ. ಆದರೆ, ಅವರು ಗೃಹ ಸಚಿವ ಜಿ. ಪರಮೇಶ್ವರ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕರು ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಲು ಬಂದಿದ್ದರೂ ಎಂದು ಹೇಳುವುದಕ್ಕೆ ಇವರಿಗೆ ನಾಚಿಕೆ ಬರುವುದಿಲ್ಲವೇ. ಅವರಲ್ಲಿ ಏನಾದರೂ ನೈತಿಕತೆ ಇದ್ದರೆ ಕೂಡಲೇ ಅವರನ್ನು ಅದೇ ಸಮಯದಲ್ಲಿ ಬಂಧಿಸಲು ಸೂಚನೆ ನೀಡಬಹುದಾಗಿತ್ತು. ಅದು ಬಿಟ್ಟು ತನ್ನದೆಯಾದ ಇಲಾಖೆ ನಿಷ್ಠಾವಂತ ಅಧಿಕಾರಿಯ ಸಾವಿಗೆ ಕಾರಣರಾದವರಿಗೆ ರಕ್ಷಣೆ ನೀಡುವುದು ಕಾಂಗ್ರೆಸ್ ಸಿದ್ಧಾಂತ ಎಂದು ತೋರುತ್ತದೆಯೆಂದು ಕಾಂಗ್ರೆಸ್ ಹಾಗೂ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.ಸಚಿವ ದರ್ಶನಾಪುರ ಅವರಿಗೆ ಸೌಜನ್ಯತೆ ಇಲ್ಲ. ತನ್ನದೇ ಉಸ್ತುವಾರಿಯಲ್ಲಿರುವ ಜಿಲ್ಲೆಯಲ್ಲಿ ಪಿಎಸ್ಐ ಪರಶುರಾಮ ಅವರ ಸಾವಿನ ತನಿಖೆ ಬಗ್ಗೆ ಪರಶುರಾಮ ಕುಟುಂಬ, ದಲಿತ ಸಂಘಟನೆಗಳು, ಇತರೆ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸಿದರು. ಪಿಎಸ್ಐ ಕುಟುಂಬಕ್ಕೆ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯ ಸಚಿವ ದರ್ಶನಾಪುರ್ ತೋರಲಿಲ್ಲ. ಹಾಗಾದರೆ, ಇವರ ಸೌಜನ್ಯತೆ ಯಾರ ಮೇಲೆ? ಎಂದು ಅವರು ಪ್ರಶ್ನಿಸಿದರು.ಕೆಲವು ತಿಂಗಳ ಹಿಂದೆ ಸಚಿವರ ತವರು ಕ್ಷೇತ್ರದಲ್ಲಿ 6077 ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣ ಸೇರಿದಂತೆ ಹಲವು ಬಾರಿ ಅಕ್ರಮ ಅಕ್ಕಿ ಸಾಗಾಣಿಕೆ ರಾಜರೋಷವಾಗಿ ನಡೆಯುತ್ತಿವೆ. ಇಲ್ಲಿಯವರೆಗೆ ಪೊಲೀಸರು ಒಂದೇ ಒಂದು ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸದಿರುವುದನ್ನು ನೋಡಿದರೆ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ಕೈವಾಡವಿರುವ ಬಗ್ಗೆ ಬಲವಾದ ಅನುಮಾನ ಮೂಡುತ್ತಿವೆ. ಅಷ್ಟೇ ಅಲ್ಲದೆ ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಈ ಅಕ್ರಮ ಮರಳುಗಾರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ರಕ್ತ ಸಂಬಂಧಿಗಳು ಹಾಗೂ ಅವರ ಆಪ್ತ ಬಳಗದಲ್ಲಿರುವವರೆ ಇದರಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಚಿವ ದರ್ಶನಾಪುರ ಅಧಿಕಾರದಿಂದ ಕೆಳಗಿಳಿಯದ ಹೊರತು ಜಿಲ್ಲೆ ಹಾಗೂ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಯಾಳಗಿ, ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತ್ತಿ ಕಟ್ಟಿಗಿ, ಪರಶುರಾಮ ಕುರುಕುಂದಿ, ತಿರುಪತಿ, ಮಹೇಶ್ ರೆಡ್ಡಿ, ತಿರುಪತಿ ಸೇರಿ, ಬಸವರಾಜು ವಿಭೂತಿಹಳ್ಳಿ, ಗುರುಕಾಮಾ, ಬಿಜೆಪಿ ಮುಖಂಡರು ಇದ್ದರು.

----

13ವೈಡಿಆರ್14: ಶಹಾಪುರ ನಗರದ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಅವರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣ ಸ್ವಾಮಿ ಅವರು ಮಾತನಾಡಿದರು.