ಕೇಂದ್ರ ಬಿಜೆಪಿಯಿಂದ ಪ್ರತಾಪ್‌ ಸಿಂಹ ರಕ್ಷಣೆ: ಗುಂಡೂರಾವ್‌ ಆಕ್ರೋಶ

| Published : Dec 19 2023, 01:45 AM IST

ಕೇಂದ್ರ ಬಿಜೆಪಿಯಿಂದ ಪ್ರತಾಪ್‌ ಸಿಂಹ ರಕ್ಷಣೆ: ಗುಂಡೂರಾವ್‌ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಅವರು ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡುವ ತಂತ್ರ ಎಂಬ ಲೇಹರ್ ಸಿಂಗ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ

ಕನ್ನಡಪ್ರಭ ವಾರ್ತೆ ಮಡಿಕೇರಿ/ಕುಶಾಲನಗರ

ಕೇಂದ್ರದಲ್ಲಿ ಬಿಜೆಪಿ ಇರುವುದರಿಂದ ಸಂಸದ ಪ್ರತಾಪ್‌ಸಿಂಹ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ.ಕೊಡಗಿನ ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡುವ ತಂತ್ರ ಎಂಬ ಲೇಹರ್ ಸಿಂಗ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.ಲೇಹರ್ ಸಿಂಗ್ ಅವರು ಸ್ವಲ್ಪ ಜವಾಬ್ದಾರಿಯುತವಾಗಿ ಮಾತನಾಡಬೇಕು. ರಾಜ್ಯಸಭೆಗೆ ಕಳುಹಿಸಿರುವುದು ಹುಚ್ಚು ಹುಚ್ಚಾಗಿ ಮಾಡನಾಡಲು ಅಲ್ಲ. ಪ್ರತಾಪ್ ಸಿಂಹ ಜಾಗದಲ್ಲಿ ಕಾಂಗ್ರೆಸ್ ಸಂಸದ ಇದ್ದಿದ್ದರೆ ಉಚ್ಛಾಟಿಸುತ್ತಿದ್ದರು ಎಂದು ಆರೋಗ್ಯ ಸಚಿವರು ಕಿಡಿಕಾರಿದರು.

ಸಂಸತ್‍ನಲ್ಲಿ ಸ್ಮೋಕ್ ಬಾಂಬ್‍ನ ಬಗ್ಗೆ ತನಿಖೆಗೆ ಒಳಪಡಿಸುತ್ತಿದ್ದರು. ದೇಶಾದ್ಯಂತ ಪ್ರತಿಭಟನೆ ಮಾಡಿಬಿಡುತ್ತಿದ್ದರು. ಆದರೆ ಇದೀಗ ಬಿಜೆಪಿಯವರೇ ಇರುವುದರಿಂದ ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ಪ್ರತಾಪ್ ಸಿಂಹ ಅವರ ರಕ್ಷಣೆ ಮಾಡಲು ಬಿಜೆಪಿ ನಿಂತುಕೊಂಡಿದೆ. ಕಾಂಗ್ರೆಸ್‍ನವರ ಶಿಫಾರಸಿನಲ್ಲಿ ಹೋಗ್ತಿದ್ರೆ ಪ್ರತಾಪ್ ಸಿಂಹ ಹೇಗೆ ಮಾತಾಡ್ತಿದ್ರು? ಅವರು ಹೇಗೆ ಮಾತಾಡ್ತಿದ್ರೋ ಅದನ್ನೇ ಅವರ ಮೇಲೆ ನಾವು ಮಾತಾಡುತ್ತಿದ್ದೀವಿ. ಇದು ಗಂಭೀರ ಪ್ರಕರಣ, ಪ್ರತಾಪ್ ಸಿಂಹ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಲೇಹರ್ ಸಿಂಗ್, ಸಿ.ಟಿ. ರವಿ ಇಂತಹ ಹೇಳಿಕೆ ಕೊಡ್ಕೊಂಡೇ ರಾಜಕಾರಣ ಮಾಡೋದು ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಪ್ರಧಾನಿಯೇ ಗಂಭೀರ ಎಂದ ಮೇಲೆ ಯಾಕೆ ಕ್ರಮ ತೆಗೆದುಕೊಳ್ತಿಲ್ಲ? ಈ ವಿಚಾರದ ಬಗ್ಗೆ ಹೋರಾಟ ಮಾಡಿದರೆ ಕಾಂಗ್ರೆಸ್ ಎಂಪಿಗಳನ್ನು ಸಸ್ಪೆಂಡ್ ಮಾಡ್ತಾರೆ. ಆದರೆ ಅದಕ್ಕೆ ಕಾರಣಕರ್ತರಾದವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಸಚಿವ ದಿನೇಶ್ ಗುಂಡೂರಾವ್, ಲೆಹರ್ ಸಿಂಗ್ ಬರದ ಬಗ್ಗೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಬಗ್ಗೆ ಮಾತಾಡಲ್ಲ. ಅವರ ಮಾತುಗಳನ್ನು ಸಾಮಾನ್ಯ ಜ್ಞಾನ ಇರುವ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು.''''ಈ ಸರ್ಕಾರ 5 ವರ್ಷ ಇರಲ್ಲ'''' ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು,

ಕುಮಾರಸ್ವಾಮಿನೇ 5 ವರ್ಷ ಇರುತ್ತಾರೋ ಇಲ್ವೋ ಯಾರಿಗೆ ಗೊತ್ತು ಸ್ವಾಮಿ ಎಂದು ಲೇವಡಿ ಮಾಡಿದರು.

ನಮಗೆ ಬಹುಮತ ಬಂದಿದೆ ನಾವು ಅಧಿಕಾರ ಮಾಡುತ್ತೇವೆ. ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರಾಗಿ ಒಳ್ಳೆಯ ಕೆಲಸ ಮಾಡಲಿ. ಅದು ಬಿಟ್ಟು ಯಾರು ಇರುತ್ತಾರೆ, ಯಾರು ಇರಲ್ಲ ಅನ್ನೋದು ಜನ ತೀರ್ಮಾನ ಮಾಡುತ್ತಾರೆ ಎಂದರು.

* ಭ್ರೂಣಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮಮಂಡ್ಯದ ಭ್ರೂಣಹತ್ಯೆ ಮತ್ತು ರಾಜ್ಯದಲ್ಲಿನ ನಕಲಿ ಕ್ಲಿನಿಕ್‌ಗಳ ವಿಚಾರದ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭ್ರೂಣಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಈಗಾಗಲೇ ಹಲವರ ಬಂಧನವಾಗಿದೆ. ಈ ಬಗ್ಗೆ ಕಾನೂನು ಬದಲಾವಣೆ ತರಲು ಚರ್ಚೆ ನಡೆಸಲಾಗುತ್ತಿದೆ ಎಂದರು.

ಹೊಸಕೋಟೆಯಲ್ಲೂ ಆಸ್ಪತ್ರೆ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ. ಭ್ರೂಣಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ. ನಕಲಿ ವೈದ್ಯರು, ನಕಲಿ ಕ್ಲಿನಿಕ್ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಿದರು.* 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯರಾಜ್ಯದಲ್ಲಿ ಕೊರೋನಾ ರೂಪಾಂತರಿ ಬಗ್ಗೆ ಯಾರಿಗೂ ಆತಂಕ ಬೇಡ. ಯಾವ ಕ್ರಮ ತೆಗೆದುಕೊಳ್ಳಬೇಕೆಂದು ಚರ್ಚಿಸಿದ್ದೇವೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ಜೊತೆ ಕೂಡ ಚರ್ಚೆಯಾಗಿದೆ. ಹೆಚ್ಚು ಟೆಸ್ಟಿಂಗ್ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಸಮಸ್ಯೆ ಇರುವವರು ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶೀತ, ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರಾಜ್ಯದ ಎಲ್ಲ ಆಸ್ಪತ್ರೆಗಳನ್ನು ಸನ್ನದ್ಧವಾಗಿರಲು ಸೂಚಿಸಲಾಗಿದೆ. ಅಗತ್ಯವಿರುವ ಬೆಡ್, ಪಿಪಿಇ ಕಿಟ್, ಆಕ್ಸಿಜನ್ ಸಿದ್ಧಮಾಡಲಾಗಿದೆ. ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಶೀತ, ಜ್ವರ, ಕೆಮ್ಮು ಇರುವವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೆಚ್ಚು ಪಾಸಿಟಿವ್ ಬಂದರೆ ಮಾತ್ರ ನಿರ್ಬಂಧ ಮಾಡಬಹುದು. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.