ದಂಪತಿ ಆತ್ಮಹತ್ಯೆಗೆ ಕಾರಣವಾದ ಯುವತಿ ಅಪಹರಣ ಪ್ರಕರಣ!

| Published : Dec 19 2023, 01:45 AM IST

ದಂಪತಿ ಆತ್ಮಹತ್ಯೆಗೆ ಕಾರಣವಾದ ಯುವತಿ ಅಪಹರಣ ಪ್ರಕರಣ!
Share this Article
  • FB
  • TW
  • Linkdin
  • Email

ಸಾರಾಂಶ

ಡಿ. 11ರಂದು ಲೀಲಾಧರ ಶೆಟ್ಟಿ ಅವರ ಮಗಳು ಮನೆ ಬಿಟ್ಟು ಹೋಗಿದ್ದು, 12ರಂದು ಅವರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಕಾಪು ಠಾಣೆಯಲ್ಲಿ ದೂರು ನೀಡಿದ್ದರು. ಆಕೆ ಬರೆದಿಟ್ಟಿದ್ದ ಪತ್ರದಿಂದ, ಮುಂದೆ ತಮಗೆ ಆಗಬಹುದಾದ ಅವಮಾನಕ್ಕೆ ಅಂಜಿದ ಲೀಲಾಧರ ಶೆಟ್ಟಿ ಮತ್ತು ಪತ್ನಿ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದು ಸಾವನ್ನಪ್ಪಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಕಾರಣವಾದ ಅಪ್ರಾಪ್ತ ವಯಸ್ಸಿನ ಸಾಕುಪುತ್ರಿಯ ನಾಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಅಕೆಯನ್ನು ರಕ್ಷಿಸಿದ್ದಾರೆ, ನಾಲ್ವರು ಯುವಕರನ್ನು ಬಂಧಿಸಿ, ಅವರ ಮೇಲೆ ಬಾಲಕಿಯ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ. ಗಿರೀಶ್ (20), ಜಯಂತ್ (23), ರೂಪೇಶ್ (22) ಹಾಗೂ ಮೊಹಮ್ಮದ್ ಅಜೀಜ್ (30) ಬಂಧಿತರು.

ಡಿ. 11ರಂದು ಲೀಲಾಧರ ಶೆಟ್ಟಿ ಅವರ ಮಗಳು ಮನೆ ಬಿಟ್ಟು ಹೋಗಿದ್ದು, 12ರಂದು ಅವರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಕಾಪು ಠಾಣೆಯಲ್ಲಿ ದೂರು ನೀಡಿದ್ದರು. ಆಕೆ ಬರೆದಿಟ್ಟಿದ್ದ ಪತ್ರದಿಂದ, ಮುಂದೆ ತಮಗೆ ಆಗಬಹುದಾದ ಅವಮಾನಕ್ಕೆ ಅಂಜಿದ ಲೀಲಾಧರ ಶೆಟ್ಟಿ ಮತ್ತು ಪತ್ನಿ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದು ಸಾವನ್ನಪ್ಪಿದ್ದರು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು 2 ತಂಡಗಳನ್ನು ರಚಿಸಿ ನಾಪತ್ತೆಯಾದ ಬಾಲಕಿಯ ಹುಡುಕಾಟಕ್ಕಿಳಿದಿದ್ದರು. ಇದೀಗ 6 ದಿನಗಳ ನಂತರ ಬಾಲಕಿ ಮತ್ತು ಆಕೆಯ ಜೊತೆಗಿದ್ದ ನಾಲ್ವರು ಯುವಕರನ್ನು ಕಾಸರಗೋಡಿನ ಕುಂಬ್ಳೆ ಸಮೀಪ ವಶಕ್ಕೆ ಪಡೆದಿದ್ದಾರೆ.

ಗಿರೀಶ್ ಜೊತೆ ಒಡನಾಟದಲ್ಲಿದ್ದ ಬಾಲಕಿ, ಆತನ ಜೊತೆ ಸ್ಕೂಟರ್ ನಲ್ಲಿ ಮಂಗಳೂರಿಗೆ ಹೋಗುತ್ತಿದ್ದಾಗ ಪಡುಬಿದ್ರಿಯಲ್ಲಿ ಸ್ಕೂಟರ್ ಹಾಳಾಯಿತು. ಆಗ ಸ್ನೇಹಿತರಾದ ರೂಪೇಶ್ ಮತ್ತು ಅಜೀಜ್ ಪಡುಬಿದ್ರಿಗೆ ಬಂದು ತಮ್ಮ ಸ್ಕೂಟರನ್ನು ಅವರಿಗೆ ನೀಡಿದ್ದರು. ಆದರೆ ರಾತ್ರಿಯಾದ ಕಾರಣ ನಾಲ್ಕೂ ಮಂದಿ ಪಡುಬಿದ್ರೆ ಬೀಚ್ ನಲ್ಲಿ ರಾತ್ರಿ ಕಳೆದಿದ್ದರು. ಮರುದಿನ ಇನ್ನೊಬ್ಬ ಗೆಳೆಯ ಜಯಂತ್ ಬಂದು ಸೇರಿಕೊಂಡಿದ್ದು, ಎಲ್ಲರೂ ಕುಂಬ್ಳೆಗೆ ಹೋಗಿ ತಲೆಮರೆಸಿಕೊಂಡಿದ್ದರು.

ಇದೀಗ ಅವರನ್ನು ಪತ್ತೆ ಮಾಡಿರುವ ಪೊಲೀಸರು ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ, ಫೋಕ್ಸೋ ಪ್ರಕರಣ ಮತ್ತು ಅಪಹರಣದ ಪ್ರಕರಣ ದಾಖಲಿಸಿದ್ದಾರೆ.

ಕಾಪು ವೃತ್ತನಿರೀಕ್ಷಕಿ ಜಯಶ್ರೀ ಮಾನೆ ಮತ್ತು ಎಸೈ ಅಬ್ದುಲ್ ಖಾದರ್ ತಂಡಗಳು ಈ ಯಶಸ್ವಿ ಕಾರ್ಯಾಚರಣೆ ನಡೆಸಿವೆ.