ಸಾರಾಂಶ
ಬ್ರಾಹ್ಮಣರ ಸ್ಥಿತಿಗತಿ, ಕೃಷಿ ಮತ್ತು ಯುವಕರಿಗೆ ಉದ್ಯೋಗ ಮತ್ತು ನಮ್ಮ ಪರಂಪರೆ ಉಳಿಸಿಕೊಳ್ಳುವ ಕುರಿತು ಚಿಂತನೆಗಳು ತೀರಾ ಅಗತ್ಯವಾಗಿದೆ
ಯಲ್ಲಾಪುರ:
ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಜ. ೨೮ರಂದು ೨೧ನೇ ಶತಮಾನದಲ್ಲಿ ಬ್ರಾಹ್ಮಣರು ಎದುರಿಸಬಹುದಾದ ಸವಾಲುಗಳು ಮತ್ತು ಸಂಘಟನೆಗಳ ಕುರಿತಂತೆ ಸಮಾವೇಶ ಜರುಗಲಿದೆ. ಈ ಹಿನ್ನಲೆ ಪಟ್ಟಣದ ಸಂಸ್ಕೃತಿ ನಿವಾಸದಲ್ಲಿ ಜಿಲ್ಲೆಯ ಪ್ರಮುಖರ ಉಪಸ್ಥಿತಿಯಲ್ಲಿ ರಾಜ್ಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.ಶಶಿಭೂಷಣ ಹೆಗಡೆ ಮಾತನಾಡಿ, ಸಮಾಜ ತೀವ್ರ ಬದಲಾವಣೆಯತ್ತ ಸಾಗಿದೆ ಮತ್ತು ಯುವ ಜನಾಂಗ ಹಳ್ಳಿಯಿಂದ ಪಟ್ಟಣದತ್ತ ವಲಸೆ ಹೋಗುತ್ತಿದೆ. ಸಮಾಜಕ್ಕಿರುವ ಹತ್ತಾರು ಸವಾಲುಗಳ ಚರ್ಚೆಯನ್ನು ತನ್ಮೂಲಕ ಸಂಘಟನೆಯನ್ನು ತೀವ್ರಗೊಳಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಮಿತಿ ಮಾರ್ಗದರ್ಶನದಲ್ಲಿ ಈ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು. ಇಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆ, ಸಲಹೆ ಮತ್ತು ಭವಿಷ್ಯದಲ್ಲಿ ನಾವು ಹೇಗೆ ಸಾಗಬೇಕೆಂಬುದರ ಕುರಿತು ಹಲವರು ಸಲಹೆ-ಸೂಚನೆ ನೀಡಿದರು.ಕೆನರಾ ಹೆಲ್ತ್ ಕೇರ್ ಮತ್ತು ಎಕ್ಸ್‌ಲೆನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಜಿ. ಹೆಗಡೆ ಕುಮಟಾ ಸಂಘಟನೆಯ ಅಗತ್ಯತೆ, ಅನಿವಾರ್ಯತೆಯ ಕುರಿತು ಪ್ರಸ್ತಾಪಿಸಿದರು. ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜಿಲ್ಲೆಯ ಬ್ರಾಹ್ಮಣರ ಸ್ಥಿತಿಗತಿ, ಕೃಷಿ ಮತ್ತು ಯುವಕರಿಗೆ ಉದ್ಯೋಗ ಮತ್ತು ನಮ್ಮ ಪರಂಪರೆ ಉಳಿಸಿಕೊಳ್ಳುವ ಕುರಿತು ಚಿಂತನೆಗಳು ತೀರಾ ಅಗತ್ಯವಾಗಿದೆ. ಆದ್ದರಿಂದ ಇಂತಹ ಹಲವಾರು ವಿಷಯಗಳನ್ನು ಚರ್ಚಿಸಲು ಇಂತಹ ಸಂಘಟನೆಗಳು ಅನಿವಾರ್ಯವಾಗಿದೆ ಎಂದರು.ಜಿಲ್ಲಾ ಸಂಚಾಲಕಿ ನಿರ್ಮಲಾ ಹೆಗಡೆ ಕರ್ಕಿ ಮಾತನಾಡಿ, ಬೆಂಗಳೂರಿನಲ್ಲಿ ಜ. ೬,7ರಂದು ರಾಜ್ಯಮಟ್ಟದ ಮಹಿಳಾ ಸಮಾವೇಶ ನಡೆಯಲಿದೆ. ಇದಕ್ಕೆ ಜಿಲ್ಲೆಯಿಂದ ಸಾವಿರ ಸಂಖ್ಯೆಯಲ್ಲಿ ಬ್ರಾಹ್ಮಣ ಮಹಿಳೆಯರು ಪಾಲ್ಗೊಂಡು ಈ ಸಮಾವೇಶ ಯಶಸ್ವಿಗೊಳಿಸಲು ಸಹಕರಿಸಬೇಕೆಂದು ವಿನಂತಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ರಾಯ್ಸದ, ರಾಜ್ಯ ಪ್ರತಿನಿಧಿಗಳಾದ ಪ್ರಸಾದ ಹೆಗಡೆ, ನಾರಾಯಣ ಹೆಗಡೆ ಕರಿಕಲ್ಲು, ಕೆ.ಎಸ್. ಭಟ್ಟ, ವೈದಿಕ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಗಣಪತಿ ಭಟ್ಟ ಕೋಲಿಬೇಣ, ಶ್ರೀರಂಗ ಕಟ್ಟಿ, ಶ್ರೀಪಾದ ಭಟ್ಟ, ತಾಲೂಕಾ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ ಮತ್ತು ಜಿಲ್ಲೆಯ ಹಲವು ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು.