ರೈತ ವಿರೋಧಿ ಬಿಜೆಪಿ ಸರ್ಕಾರ ಧಿಕ್ಕರಿಸಿ: ರಾಘವೇಂದ್ರ ಹಿಟ್ನಾಳ

| Published : May 04 2024, 12:33 AM IST

ಸಾರಾಂಶ

ರೈತರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ‌ ಮೋದಿ ಅವರು ಹತ್ತು ವರ್ಷ ಕಳೆದರೂ ರೈತರ ಯಾವುದೇ ಬೇಡಿಕೆ ಈಡೇರಿಸದೇ ವಂಚಿಸಿದ್ದಾರೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಆರೋಪಿಸಿದ್ದಾರೆ.

ಕೊಪ್ಪಳ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ರೈತ ವಿರೋಧಿಯಾಗಿದ್ದು, ಪ್ರಸಕ್ತ ಚುನಾವಣೆಯಲ್ಲಿ ತಿರಸ್ಕಾರ ಮಾಡುವಂತೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮನವಿ ಮಾಡಿದರು.

ನಗರದ ಬಿ.ಟಿ. ಪಾಟೀಲ್ ನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ‌ ಮೋದಿ ಅವರು ಹತ್ತು ವರ್ಷ ಕಳೆದರೂ ರೈತರ ಯಾವುದೇ ಬೇಡಿಕೆ ಈಡೇರಿಸದೇ ವಂಚಿಸಿದ್ದಾರೆ. ರೈತರ ಹಿತಕ್ಕಿಂತ ಕಾರ್ಪೊರೇಟ್ ಕಂಪನಿ ಮಾಲೀಕರ ಹಿತವೇ ಮುಖ್ಯವಾಗಿದೆ. ದೇಶಾದ್ಯಂತ ರೈತರು ಆರ್ಥಿಕ ಸಂಕಷ್ಟಕ್ಕೆ ತುತ್ತಾದರೂ ಸಾಲ ಮನ್ನಾ ಮಾಡದೇ, ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿಯವರಿಗೆ ಮಾನ-ಮರ್ಯಾದೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ಲೋಕಸಭಾ ವ್ಯಾಪ್ತಿಯ 8 ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜನರು ತೋರುವ ಪ್ರೀತಿ, ಅಭಿಮಾನ‌ ನೋಡಿದರೆ ನಮ್ಮ ಅಭ್ಯರ್ಥಿ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲ ಸಮುದಾಯದ ಮುಖಂಡರು, ಬೀದಿ ಬದಿ ವ್ಯಾಪಾರಸ್ಥರು ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್‌ನ ಜನಪರ ಕಾರ್ಯಕ್ರಮ ಮೆಚ್ಚಿ ನಿತ್ಯ ನೂರಾರು ಕಾರ್ಯಕರ್ತರು ಪಕ್ಷ ಸೇರ್ಪಡೆಗೊಳ್ಳುವ ಮೂಲಕ ನಮ್ಮ ಕೈ ಬಲಪಡಿಸುತ್ತಿದ್ದಾರೆ ಎಂದರು.

ಬೇಳೂರಿನ ದೊಡ್ಡನಿಂಗಜ್ಜ ತಳವಾರ, ಫಕೀರಗೌಡ ನಂದಿನಗೌಡ್ರ, ಕೊಟ್ರಪ್ಪ ಹಕಾರಿ, ಬಸವರಾಜ ಗೊಂದಿಹೊಸಳ್ಳಿ, ದೇವಪ್ಪ ವೆಂಕಟಾಪುರ, ಸಣ್ಣನಿಂಗಪ್ಪ ತಳವಾರ, ರಾಮಣ್ಣ ಚಲ್ಲಾ, ಗವಿಸಿದ್ದಪ್ಪ ತಳವಾರ, ಸಣ್ಣಮಲ್ಲಪ್ಪ ಗುಡ್ಲಾನೂರ, ಬೀರಪ್ಪ ಗುಡ್ಲಾನೂರ ಸೇರಿದಂತೆ ವಿವಿಧ ಗ್ರಾಮದ ಕಾರ್ಯಕರ್ತರು ಶಾಸಕ ಹಿಟ್ನಾಳ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು.

ಮಾಜಿ ಶಾಸಕ ಬಸವರಾಜ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಕಾಂಗ್ರೆಸ್ ಮುಖಂಡರಾದ ಅಂಜಪ್ಪ ಕುರುಬರ, ಗವಿಸಿದ್ದಪ್ಪ ಹಿಡಗಲ್, ಗಾಳೆಪ್ಪ ಸುಣಗಾರ, ಬಸವರಾಜ ಕೊಪ್ಪಳ ಉಪಸ್ಥಿತರಿದ್ದರು.