ಸಾರಾಂಶ
ಉಡಸಲಮ್ಮ, ನೇರಲ ಮರದಮ್ಮ, ಇತರ ದೇವರ ಸಮಾರಂಭ । ಆದಿಚುಂಚನಗಿರಿಯ ಶಂಭುನಾಥ ಸ್ವಾಮಿ ನೇತೃತ್ವ
ಕನ್ನಡಪ್ರಭ ವಾರ್ತೆ ಹಾಸನನಗರದ ಚನ್ನಪಟ್ಟಣದಲ್ಲಿರುವ ಬೊಮ್ಮನಾಯಕನಹಳ್ಳಿ, ದೇವಮ್ಮ ಬಡಾವಣೆಯಲ್ಲಿ ಶ್ರೀ ಉಡಸಲಮ್ಮ, ಶ್ರೀ ನೇರಲ ಮರದಮ್ಮ, ಶ್ರೀ ಕರೀಬೀರೇಶ್ವರ, ಶ್ರೀ ಮಲ್ಲೇಶ್ವರ ನೂತನ ದೇವಾಲಯ, ಶಿಲಾ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಶ ಪ್ರತಿಷ್ಠಾಪನೆ ಮಹೋತ್ಸವವು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶ ಶಂಭುನಾಥ ಸ್ವಾಮೀಜಿ ಹಾಗೂ ಇನ್ನಿತರ ಮಠದ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶುಕ್ರವಾರ ಯಶಸ್ವಿಯಾಗಿ ಜರುಗಿತು.
ನಂತರ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶ ಶಂಭುನಾಥ ಸ್ವಾಮೀಜಿ ಮಾಧ್ಯಮದೊಂದಿಗೆ ಮಾತನಾಡಿ, ‘ಕಳೆದ ಎರಡು ದಿನಗಳಿಂದ ವಿವಿಧ ಪೂಜಾ ಕಾರ್ಯಗಳು ನೆರವೇರಿದ್ದು, ಇದೊಂದು ಪವಿತ್ರವಾದ ಧಾರ್ಮಿಕ ಕಾರ್ಯಕ್ರಮವಾಗಿದೆ. ಈ ಗ್ರಾಮದಲ್ಲಿ ನಡೆಯುತ್ತಿರುವ ಪವಿತ್ರವಾದ ಅಮ್ಮನ ಜೀಣೋದ್ಧಾರ, ಸಣ್ಣಮೂರ್ತಿ ರೂಪದಲ್ಲಿ ಇದ್ದ ಅಮ್ಮನನ್ನು ಅಚ್ಚುಕಟ್ಟಾದ ಶಾಸ್ತ್ರೋತ್ತವಾಗಿ ವೇದಶಾಸ್ತ್ರದ ಪ್ರಕಾರವಾಗಿ ಗ್ರಾಮದ ಎಲ್ಲರೂ ಸೇರಿ ದೇವಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಬೆಳಗಿನಿಂದ ಕಳಸ ಉತ್ಸವ, ದೇವರಿಗೆ ಅಭಿಷೇಕ, ಶ್ರೀ ಚಂಡಿಕಾಹೋಮ ನಾನಾ ಪೂಜಾ ಕಾರ್ಯಗಳನ್ನು ನೆರವೇರಿಸಲಾಗಿದೆ’ ಎಂದು ತಿಳಸಿದರು.ಇಡೀ ಅಖಿಲ ಬ್ರಹ್ಮಾಂಡಕ್ಕೆ ತಾಯಿ ಸ್ವರೂಪಿಣಿಯಾದಂತಹ ಮಾತೃ ಸ್ವರೂಪಿ ಶಕ್ತಿ ದೇವತೆ. ಪವಿತ್ರವಾದ ತಾಯಿ ಸ್ವರೂಪಿ ಅಮ್ಮನವರಾಗಿದ್ದಾರೆ. ಇಂದು ಮನುಷ್ಯನಿಗೆ ಧಾರ್ಮಿಕ ಆಸಕ್ತಿ ಬೇಕಾಗಿದೆ. ಯಾವ ರೀತಿ ಅನುಕೂಲ ಬೇಕೋ ಭಗವಂತ ಎಲ್ಲಾ ರೀತಿ ಭೂಲೋಕದಲ್ಲಿ ಸೃಷ್ಟಿ ಮಾಡಿದ್ದು, ಸಾರ್ಥಕವಾದಂತಹ ಬದುಕು ನಡೆಸಬೇಕಾಗಿದೆ. ಶತ ಕೋಟಿ ಜನ್ಮದ ನಂತರ ಮನುಷ್ಯ ಜನ್ಮ ತಾಳಿದ್ದು, ಇಂತಹ ಪುಣ್ಯ ಕಾರ್ಯವನ್ನು ಮಾಡಿ ಬದುಕು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಎಚ್.ಪಿ.ಸ್ವರೂಪ್ ಮಾಧ್ಯಮದೊಂದಿಗೆ ಮಾತನಾಡಿ, ಚನ್ನಪಟ್ಟಣದಲ್ಲಿರುವ ಬೊಮ್ಮನಾಯಕನಹಳ್ಳಿ, ದೇವಮ್ಮ ಬಡಾವಣೆಯಲ್ಲಿ ಶ್ರೀ ಉಡಸಲಮ್ಮ, ಶ್ರೀ ನೇರಲಮರದಮ್ಮ, ಶ್ರೀ ಕರೀಬೀರೇಶ್ವರ, ಶ್ರೀ ಮಲ್ಲೇಶ್ವರ ನೂತನ ದೇವಾಲಯ, ಶಿಲಾ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾ ಪ್ರತಿಷ್ಠಾಪನೆ ಮಹೋತ್ಸವ ವಿಜೃಂಭಣೆಯಿಂದ ಮೂರು ದೇವಸ್ಥಾನದಲ್ಲಿ ನಡೆಯುತ್ತಿದೆ. ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ದೇವರ ವಿಗ್ರಹ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಇಡೀ ಗ್ರಾಮಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.ಪ್ರಧಾನ ಅರ್ಚಕ ಮಲ್ಲೇಶಪ್ಪ ಮಾತನಾಡಿ, ಪೂಜಾ ಕಾರ್ಯಗಳನ್ನು ವಿಜೃಂಭಣೆಯಿಂದ ನಡೆಸಲು ಇಲ್ಲಿನ ಸುತ್ತಮುತ್ತಲ ಮತ್ತು ಊರಿನ ಗ್ರಾಮಸ್ಥರು, ಪ್ರಮುಖರು, ವಿವಿಧ ರಾಜಕಾರಣಿಗಳು, ಎಲ್ಲಾ ಸೇರಿ ತುಂಬ ಸಹಕಾರ ಕೊಟ್ಟಿದ್ದು, ಅದರಲ್ಲೂ ಪ್ರೀತಂಗೌಡ ಬಹಳಷ್ಟು ಸಹಾಯ ಮಾಡಿದ್ದಾರೆ. ಈಗಿನ ಶಾಸಕರು ಕೂಡ ಸಹಾಯ ಮಾಡಿದ್ದಾರೆ. ಇದು ನಾನೂರು ವರ್ಷಗಳ ಹಿಂದಿನ ದೇವಸ್ಥಾನ. ಕೆರೆಯಲ್ಲಿ ನೀರು ನಿಲ್ಲದೆ ಒಡೆದು ಹೋಗುತ್ತಿತ್ತು. ಆದ್ದರಿಂದಲೇ ಕೆರೆ ಏರಿ ಮೇಲೆ ದೇವಸ್ಥಾನ ಕಟ್ಟಿಸಲಾಗಿದೆ. ಬಹಳ ಶಕ್ತಿ ದೇವರು. ಸರ್ಕಾರದಿಂದಲೂ ಕೂಡ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು.