ದೇಜಗೌ ಸರಳ ಆಲೋಚನೆ ವಿದ್ಯಾರ್ಥಿಗಳಿಗೆ ದಾರಿದೀಪ

| Published : Jul 07 2025, 11:48 PM IST

ದೇಜಗೌ ಸರಳ ಆಲೋಚನೆ ವಿದ್ಯಾರ್ಥಿಗಳಿಗೆ ದಾರಿದೀಪ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು: ದೇಜಗೌ ಅವರ ಸರಳ ಆಲೋಚನೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಿತ್ತು ಎಂದು ಮಹಾರಾಜ ಕಾಲೇಜು ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಎಚ್‌.ಆರ್‌. ಚೇತನಾ ಅಭಿಪ್ರಾಯಪಟ್ಟರು.

ಮೈಸೂರು: ದೇಜಗೌ ಅವರ ಸರಳ ಆಲೋಚನೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಿತ್ತು ಎಂದು ಮಹಾರಾಜ ಕಾಲೇಜು ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಎಚ್‌.ಆರ್‌. ಚೇತನಾ ಅಭಿಪ್ರಾಯಪಟ್ಟರು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮತ್ತು ಶ್ರೀ ಕುವೆಂಪು ವಿದ್ಯಾ ಪರಿಷತ್ತು ನೌಕರ ವರ್ಗದ ವತಿಯಿಂದ ಸೋಮವಾರ ಆಯೋಜಿಸಿದ್ದ ನಾಡೋಜ ಪ್ರೊ. ದೇಜಗೌ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ತಂದುಕೊಡಲು ಉಪವಾಸ ಸತ್ಯಾಗ್ರಹ ನಡೆಸಿದ ಧೀಮಂತ ವ್ಯಕ್ತಿ ದೇಜಗೌ. ಅವರು ಕುವೆಂಪು ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದರು. ಆದರೆ, ಅವರಿಗೆ ಕುವೆಂಪು ಅವರಂತೆ ಜಾತಿ ಬಂಧನ ಬಿಟ್ಟು ಬರಲು ಸಾಧ್ಯವಾಗಿರಲಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಬರಹದಲ್ಲಿ ಅವರು ತೊಡಗಿಸಿಕೊಂಡಿದ್ದಾಗಿ ಅವರು ಹೇಳಿದರು.ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಥಮ ನಿರ್ದೇಶಕರಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದನ್ನು ನಾವಿಲ್ಲಿ ಸ್ಮರಿಸಬೇಕು, ಕನ್ನಡದ ಬಗ್ಗೆ ವೀರ ನಿಷ್ಠೆ ಇತ್ತೇ ಹೊರತು ಅಂಧಾಭಿಮಾನ ಹೊಂದಿರಲಿಲ್ಲ ಎಂದು ಅವರು ತಿಳಿಸಿದರು.ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ ನ ರಾಮಣ್ಣ ಮಾತನಾಡಿ, ದೇಜಗೌ ಕನ್ನಡ ಅಧ್ಯಯನ ಕ್ಷೇತ್ರದಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಎಲ್ಲಾ ಇಲಾಖೆಗಳಂತೆ ಸಾಮಾನ್ಯವಾಗಿತ್ತು. ಅವರು ನಿರ್ದೇಶಕರಾದ ಬಳಿಕ ಬೋಧನಾಂಗ ಮತ್ತು ಸಂಶೋಧನಾಂಗ ಮಾತ್ರ ಇತ್ತು. ನಂತರ ಹೊಸ ವಿಭಾಗ ಆರಂಭಿಸಿದರು. ಕನ್ನಡದ ವಿಶ್ವಕೋಶದ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾಗಿ ಅವರು ಹೇಳಿದರು.ಕುವೆಂಪು ಅವರ ಮಾನಸ ಪುತ್ರರೆಂದೆ ಹೆಸರು ಪಡೆದು ಅವರ ಹೆಸರಿನಲ್ಲಿಯೇ ಜಯಲಕ್ಷ್ಮೀಪುರಂನಲ್ಲಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ್ದ ದೇಜಗೌ ಅವರಿಗೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ, ಗೌರವಗಳೂ ಅರಸಿ ಬಂದಿದ್ದವು. ಹಳ್ಳಿಯಲ್ಲಿ ಜನಿಸಿದರೂ ಸಾಹಿತ್ಯ ವಲಯದಲ್ಲಿ ದೇಜಗೌ ಉತ್ತುಂಗಕ್ಕೇರಿದ್ದಾಗಿ ಅವರು ಹೇಳಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಗಟ್ಟಿ ನೆಲೆ ಕಲ್ಪಿಸಿ, ವಿಶ್ವಕೋಶ ರಚನೆಯಲ್ಲೂ ವಿಶೇಷ ಆಸಕ್ತಿ ಹೊಂದಿದ್ದರು. ಕನ್ನಡದ ವಿಷಯ ಬಂದಾಗ ಸದಾ ಮುಂಚೂಣಿಯಲ್ಲಿ ನಿಂತು ತಮ್ಮ ಖಚಿತ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ವಿಶೇಷ ವ್ಯಕ್ತಿಯಾಗಿದ್ದಾಗಿ ಅವರು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಚಿಂತಕ ಡಾ.ಡಿ.ಕೆ. ರಾಜೇಂದ್ರ, ಸಿ.ವೈ. ಪಾರ್ಥಸಾರಥಿ, ಕ್ಯಾತನಹಳ್ಳಿ ರಾಮಣ್ಣ, ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಜೆ. ಶಿಶೀಧರಪ್ರಸಾದ್‌, ಪ್ರೊ. ಪದ್ಮಾಶೇಖರ್‌ ಇದ್ದರು.