ನಿವೇಶನ ಹಂಚಿಕೆ ವಿಳಂಬ, ಜೂನ್‌ 24ರಂದು ಪುರಸಭೆಗೆ ಮುತ್ತಿಗೆ

| Published : Jun 13 2024, 12:49 AM IST

ಸಾರಾಂಶ

ಬಡ ಫಲಾನುಭವಿಗಳಿಂದ ತಲಾ ರು.30 ಸಾವಿರ ಕಟ್ಟಿಸಿಕೊಂಡು ವಸತಿ ರಹಿತ ಬಡವರಿಗೆ ಆಶ್ರಯ ಯೋಜನೆಯಡಿ ಕಟ್ಟಡ ಸಹಿತ ನಿವೇಶನ ನೀಡಬೇಕಾಗಿದ್ದ ಪುರಸಭೆ ಆಡಳಿತ ಮಂಡಳಿ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ, ಇಂತಹ ಬೇಜವಾಬ್ದಾರಿ ವರ್ತನೆ ಖಂಡಿಸಿ ಜೂ. 24ರಂದು ಪುರಸಭೆ ಕಾರ್ಯಾಲಯಕ್ಕೆ ಫಲಾನುಭವಿಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ನ್ಯಾಯವಾದಿ ಸುರೇಶ ಛಲವಾದಿ ಎಚ್ಚರಿಸಿದರು.

ಬ್ಯಾಡಗಿ: ಬಡ ಫಲಾನುಭವಿಗಳಿಂದ ತಲಾ ರು.30 ಸಾವಿರ ಕಟ್ಟಿಸಿಕೊಂಡು ವಸತಿ ರಹಿತ ಬಡವರಿಗೆ ಆಶ್ರಯ ಯೋಜನೆಯಡಿ ಕಟ್ಟಡ ಸಹಿತ ನಿವೇಶನ ನೀಡಬೇಕಾಗಿದ್ದ ಪುರಸಭೆ ಆಡಳಿತ ಮಂಡಳಿ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ, ಇಂತಹ ಬೇಜವಾಬ್ದಾರಿ ವರ್ತನೆ ಖಂಡಿಸಿ ಜೂ. 24ರಂದು ಪುರಸಭೆ ಕಾರ್ಯಾಲಯಕ್ಕೆ ಫಲಾನುಭವಿಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ನ್ಯಾಯವಾದಿ ಸುರೇಶ ಛಲವಾದಿ ಎಚ್ಚರಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಪ್ಲಸ್ ಮಾದರಿಯಲ್ಲಿ ಬಡವರಿಗೆ ಹಂಚಿಕೆ ಮಾಡಲು ನಿರ್ಧರಿಸಿ ಪುರಸಭೆ ಒಟ್ಟು 10 ಎಕರೆಯನ್ನು 2017ರಲ್ಲಿ ಜಾಗ ಖರೀದಿಸಿತ್ತು. ಆದರೆ ಪಟ್ಟಣದಲ್ಲಿನ ಬಡವರಿಗೆ ಹಂಚಿಕೆ ಮಾಡಲು ಖರೀದಿ ಮಾಡಲಾದ ಇಂದಿಗೂ ಹಂಚಿಕೆಯಾಗದೇ ಉಳಿದಿದೆ. ಇದಕ್ಕೆ ಜನಪ್ರತಿನಿಧಿಗಳು, ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣವೆಂದು ಆರೋಪಿಸಿದರು.

ಬಡ್ಡಿ ಹಣ ಬಡವರಿಗೆ ಕೊಡಿ: ನಿವೇಶನ ರಹಿತರಿಗೆ ಮನೆ ನೀಡುವುದಾಗಿ ಈಗಾಗಲೇ 500ಕ್ಕೂ ಹೆಚ್ಚು ಫಲಾನುಭವಿಗಳಿಂದ ತಲಾ 30 ಸಾವಿರ ವಂತಿಕೆ ಹಣ ಭರಣ ಮಾಡಿಕೊಳ್ಳಲಾಗಿದೆ. ಈ ಹಣವೇ ಒಟ್ಟು 1.74 ಕೋಟಿಯಾಗಿದೆ. ಇದನ್ನು ಬ್ಯಾಂಕ್‌ನಲ್ಲಿ ಇಟ್ಟು 2 ವರ್ಷ ಕಳೆಯುತ್ತಾ ಬಂದಿದೆ, ಇಲ್ಲಿಯವರೆಗೆ ಅದಕ್ಕೆ ಬಂದ ಬಡ್ಡಿಯೆಷ್ಟು? ಮತ್ತು ವಂತಿಕೆ ಹಣ ಭರಣ ಮಾಡಿಕೊಳ್ಳಲು ರಾಜೀವ ಗಾಂಧಿ ವಸತಿ ನಿಗಮ ಲಿಖಿತ ಆದೇಶ ನೀಡಿದ್ದಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಲಂಚದ ಆರೋಪ: ಮನೆಯಿಲ್ಲದ ಅರ್ಹ ಬಡವರು 30 ಸಾವಿರ ಹಣ ಹೊಂದಿಸಲಾಗದೇ ನಿವೇಶನವು ಇಲ್ಲದೇ ಉಳಿದಿದ್ದಾರೆ. ಇದರಿಂದ ಉಳ್ಳವರೇ 30 ಸಾವಿರ ಭರಣ ಮಾಡಿ ಮತ್ತೆ ಮನೆ ಪಡೆದುಕೊಳ್ಳಲು ಮುಂದಾಗಿದ್ದಾರೆ, ಅಲ್ಲದೇ ನಿವೇಶನ ಕೊಡಿಸುವುದಾಗಿ 50 ಸಾವಿರದಿಂದ 1 ಲಕ್ಷದವರೆಗೆ ಬಡವರಿಂದ ಹಣವನ್ನು ಅನಧಿಕೃತವಾಗಿ ಪೀಕಲಾಗಿದೆ. ಕೂಡಲೇ ನಿಯಮಾನುಸಾರ ಆಯ್ಕೆಯಾದ ಅರ್ಹ ಫಲಾನುಭವಿಗಳ ಪಟ್ಟಿ ಸಾರ್ವಜನಿಕವಾಗಿ ಪ್ರಕಟಿಸಿ, ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಹೋರಾಟ ನಿರಂತರವಾಗಿ ಸಾಗಲಿದೆ ಎಂದರು.

ಸಮಸ್ಯೆ ಜೀವಂತವಾಗಿದ್ದಲ್ಲಿ ಲಾಭ: ಪಾಡುರಂಗ ಸುತಾರ ಮಾತನಾಡಿ, ಹತ್ತು ವರ್ಷ ಕಳೆಯುತ್ತಾ ಬಂದಿದ್ದರೂ ಸಹ ನಿವೇಶನ ಹಂಚಿಕೆ ಮಾತ್ರ ಮರೀಚಿಕೆಯಾಗಿದೆ, ಚುನಾವಣೆ ಸಮಯದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ ಚುನಾಯಿತರಾಗಿ ಮುಂದಿನ 5 ವರ್ಷ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ರೀತಿ ವರ್ತನೆ ಮಾಡುವ ಜನಪ್ರತಿನಿಧಿಗಳಿಗೆ ಇಂತಹ ಸಮಸ್ಯೆ ಜೀವಂತವಾಗಿದ್ದರೇ ಮಾತ್ರ ಲಾಭ ಆದ್ದರಿಂದ ಯಾರೊಬ್ಬರೂ ಈ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ ಎಂದು ದೂರಿದರು.

ಫರೀದಾಬಾನು ನದೀಮುಲ್ಲಾ ಮಾತನಾಡಿ, ನಿವೇಶನ ಹಂಚಿಕೆ ಮಾಡುವಂತೆ ಪುರಸಭೆ ಎದುರು ಧರಣಿ ಸತ್ಯಾಗ್ರಹ ನಡೆಸಿದ್ದಲ್ಲದೇ ಜಿಲ್ಲಾಧಿಕಾರಿಗಳಿಂದ ಹಿಡಿದು ರಾಜ್ಯಪಾಲರವರೆಗೂ ಮನವಿ ಸಲ್ಲಿಸಲಾಗಿದೆ. ಪಟ್ಟಣದಲ್ಲಿ ಕಳೆದ 10 ವರ್ಷಗಳಿಂದ ಭುಗಿಲೆದ್ದಿರುವ ಸಮಸ್ಯೆ ಜಿಲ್ಲಾಧಿಕಾರಿಗಳೇ ನಿಮ್ಮ ಗಮನಕ್ಕೆ ಬಂದಿಲ್ಲವೇ? ಎಂದು ಪ್ರಶ್ನಿಸಿದ ಅವರು, ನಿಮಗೂ ಕೂಡಾ ಬಡವರ ಬಗ್ಗೆ ಕಾಳಜಿಯಿದ್ದರೇ ಇಷ್ಟೆಲ್ಲ ಹೋರಾಟ ಮಾಡಿದರೂ ಸಹ ಜನರ ಸಮಸ್ಯೆ ಗಮನಕ್ಕೆ ಬಂದಿಲ್ಲವೇ ಕೂಡಲೇ ಪಟ್ಟಣಕ್ಕೆ ಬಂದು ಸಮಸ್ಯೆ ಪರಿಹರಿಸಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಿವೇಶನ ವಂಚಿತ ನೀಲಪ್ಪ ಮುದುಕಮ್ಮನವರ, ಗಿರಿಜವ್ವ ಗುಮ್ಮನಹಳ್ಳಿ, ಪಾರವ್ವ ಕವಡಿಕೇರಿ, ಶಾಂತವ್ವ ಕುಸಗೂರ, ಪರ್ವೀನಬಾನು ಗದಗ, ಪ್ರೇಮ ದೊಡ್ಡಮನಿ ಶಾಂತವ್ವ ಕನ್ನಮ್ಮವನವರ ಸೇರಿದಂತೆ ಹಲವು ಉಪಸ್ಥಿತರಿದ್ದರು.