ಫಾರಂ ನಂಬರ್ 3 ನೀಡುವಲ್ಲಿ ವಿಳಂಬವಾದರೆ ಪುರಸಭೆ ಮುತ್ತಿಗೆ

| Published : Mar 01 2024, 02:18 AM IST

ಫಾರಂ ನಂಬರ್ 3 ನೀಡುವಲ್ಲಿ ವಿಳಂಬವಾದರೆ ಪುರಸಭೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಫಾರಂ ನಂಬರ್ 3 ಹಾಗೂ ಮೋಟೇಶನ್ ಗಾಗಿ ಬಡ ಹಾಗೂ ಮಾಧ್ಯಮ ವರ್ಗದ ಎಷ್ಟೋ ಜನರು ಅರ್ಜಿ ಸಲ್ಲಿಸಿ 3 ತಿಂಗಳು ಕಳೆದರೂ ಅವರ ಕೆಲಸಗಳಾಗದಿರುವುದು ದುರಂತವೇ ಸರಿ.

ಕಂಪ್ಲಿ: ಜನರಿಗೆ ಫಾರಂ ನಂಬರ್ 3 ನೀಡುವಲ್ಲಿ ವಿಳಂಬವಾದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಕಂಪ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ(ಪಕ್ಷಾತೀತ) ಅಧ್ಯಕ್ಷ ಜಿ.ಜಿ. ಚಂದ್ರಣ್ಣ ತಿಳಿಸಿದರು.

ಪಟ್ಟಣದ ಪುರಸಭೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಾರಂ ನಂಬರ್ 3, ಮೋಟೆಶನ್, ತಿದ್ದುಪಡಿ ಸೇರಿದಂತೆ ಇತರೆ ಕೆಲಸ ಕಾರ್ಯಕ್ಕಾಗಿ ಸಾರ್ವಜನಿಕರು ಪುರಸಭೆಗೆ ತೆರಳಿದಾಗ ನಿಗದಿತ ಸಮಯಕ್ಕೆ ಅವರ ಕೆಲಸವನ್ನು ಮಾಡಿಕೊಡದೆ ಸುಖಾಸುಮ್ಮನೆ ಓಡಾಡಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವ ಕೆಲಸವನ್ನು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಡುತ್ತಿದ್ದಾರೆ. ಹಣ ನೀಡಿದವರಿಗೆ ದಾಖಲಾತಿಗಳು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸದೆ 5 ದಿನಗಳ ಒಳಗಾಗಿಯೇ ಫಾರಂ ನಂಬರ್ 3 ನೀಡುವ ಕೆಲಸವಾಗುತ್ತಿದೆ ಎಂದರು.

ಫಾರಂ ನಂಬರ್ 3 ಹಾಗೂ ಮೋಟೇಶನ್ ಗಾಗಿ ಬಡ ಹಾಗೂ ಮಾಧ್ಯಮ ವರ್ಗದ ಎಷ್ಟೋ ಜನರು ಅರ್ಜಿ ಸಲ್ಲಿಸಿ 3 ತಿಂಗಳು ಕಳೆದರೂ ಅವರ ಕೆಲಸಗಳಾಗದಿರುವುದು ದುರಂತವೇ ಸರಿ. ಈ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು. ಒಂದು ವೇಳೆ ವಿಳಂಬವಾದಲ್ಲಿ ಅಥವಾ ಹಣದ ಬೇಡಿಕೆ ಇಟ್ಟಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಆಕ್ರೋಶ ಹೊರಹಾಕಿದರು.

ಇಲ್ಲಿನ ಅಂಬೇಡ್ಕರ್ ವೃತ್ತದ ಬಳಿ ಬಸ್ ತಂಗುದಾಣದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು, ವಯೋವೃದ್ಧರು, ಗರ್ಭಿಣಿಯರು, ಮಹಿಳೆಯರು ಹಾಗೂ ಅಂಗವಿಕಲರು ಬಿಸಿಲಿನಲ್ಲಿ ನಿಂತೆ ಬಸ್‌ಗಾಗಿ ಕಾಯುವ ಪರಿಸ್ಥಿತಿ ಇದೆ. ಈ ಕುರಿತು ಪುರಸಭೆಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಬಸ್ ತಂಗುದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕರೆಕಲ್ ಮನೋಹರ್, ಬಿ. ನಾಗೇಂದ್ರ, ವಿ. ವೆಂಕಟರಮಣ, ಹನುಮಂತ, ಬಿ.ಕೆ. ವಿರೂಪಾಕ್ಷಿ, ಭಾವೈಕ್ಯ ವೆಂಕಟೇಶ್, ಬಾವಿಕಟ್ಟೆಯ ವೆಂಕಟೇಶ್ ಸೇರಿದಂತೆ ಇತರರಿದ್ದರು.