ವೇತನ ಪಾವತಿಗೆ ವಿಳಂಬ; ನೌಕರರ ಸಂಘ ಆರೋಪ

| Published : May 27 2024, 01:04 AM IST

ಸಾರಾಂಶ

ಸಕಾಲಕ್ಕೆ ವೇತನ ಕೈಸೇರದಿದ್ದರಿಂದ ನೌಕರರ ಕುಟುಂಬ ನಿರ್ವಹಣೆ, ವೈದ್ಯಕೀಯ ಹಾಗೂ ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ಬ್ಯಾಂಕ್‌ಗಳಿಂದ ಸಾಲ ಪಡೆಯುವ ಸ್ಥಿತಿ

ಕನ್ನಡಪ್ರಭ ವಾರ್ತೆ ಬೀದರ್‌

ಆರೋಗ್ಯ ಇಲಾಖೆ ಕೇಂದ್ರ ಪುರಸ್ಕೃತ ಯೋಜನೆಗಳ ನೌಕರರ ವೇತನ ಪಾವತಿಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘದ ಜಿಲ್ಲಾ ಘಟಕ ಆರೋಪಿಸಿದೆ.

ಈ ಕುರಿತು ಸಂಘದ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಮಾಳಗೆ ನೇತೃತ್ವದಲ್ಲಿ ನಗರದಲ್ಲಿ ಜಿಪಂ ಸಿಇಒ ಡಾ.ಗಿರೀಶ ಬದೋಲೆಗೆ ಮನವಿ ಪತ್ರ ಸಲ್ಲಿಸಿ, ಲೆಕ್ಕ ಶೀರ್ಷಿಕೆವಾರು ವೇತನ ಎರಡು ಹಾಗೂ ಮೂರು ತಿಂಗಳಿಗೊಮ್ಮೆ ಸಂದಾಯ ಮಾಡಲಾಗುತ್ತಿದೆ. ಅದನ್ನು ಕೂಡ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಇತರ ಅಧಿಕಾರಿಗಳ ಸಂಪರ್ಕಿಸಿದ ನಂತರವೇ ಬಿಡುಗಡೆ ಮಾಡಲಾಗುತ್ತಿದೆ ಎಂದು ದೂರಿದರು.

2024-25ನೇ ಸಾಲಿನ ಲೆಕ್ಕ ಶೀರ್ಷಿಕೆ ಅನುದಾನ ಬಿಡುಗಡೆಯಾಗಿದ್ದರೂ, ನೌಕರರ ಖಾತೆಗೆ ವೇತನ ಜಮೆ ಮಾಡಿಲ್ಲ. ಸಕಾಲಕ್ಕೆ ವೇತನ ಕೈಸೇರದಿದ್ದರಿಂದ ನೌಕರರ ಕುಟುಂಬ ನಿರ್ವಹಣೆ, ವೈದ್ಯಕೀಯ ಹಾಗೂ ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ಬ್ಯಾಂಕ್‌ಗಳಿಂದ ಸಾಲ ಪಡೆಯುವ ಸ್ಥಿತಿ ಇದೆ ಎಂದಿದ್ದಾರೆ.

ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ನೌಕರರ ಖಾತೆಗೆ ವೇತನ ಜಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಸುನೀಲಕುಮಾರ ಕಸ್ತೂರೆ, ಸ್ಟೆಲ್ಲಾರಾಣಿ, ರಾಜಕುಮಾರ ಬಿರಾದಾರ, ಪ್ರತಿಭಾ, ರವಿ ಕೊಳಾರ, ಅಲಿಮೊದ್ದಿನ್‌, ವಿದ್ಯಾಸಾಗರ, ಸಂಗಮೇಶ ರೆಡ್ಡಿ ಹಾಗೂ ಅನಿಲಕುಮಾರ ಇದ್ದರು.