ಕನ್ನಡಪ್ರಭ ವಾರ್ತೆ ಹಾಸನ
ದೌರ್ಜನ್ಯಕ್ಕೊಳಗಾದ ದಲಿತ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಧನ ಹಾಗೂ ಅಂತರ್ಜಾತಿ ವಿವಾಹಿತ ದಂಪತಿಗೆ ವಿತರಿಸಬೇಕಾದ ಪ್ರೋತ್ಸಾಹಧನವನ್ನು ನೋಡಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದ್ದು, ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಡಿಎಚ್‌ಎಸ್ ಜಿಲ್ಲಾ ಸಮಿತಿ ಮುಖಂಡ ಎಂ.ಜಿ. ಪೃಥ್ವಿ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಭಾರತ ಸಂವಿಧಾನವು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯನ್ನು ಪ್ರತಿಯೊಬ್ಬ ನಾಗರಿಕನಿಗೂ ಖಚಿತಪಡಿಸಿದ್ದರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಇನ್ನೂ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, ಕರ್ನಾಟಕದಲ್ಲೂ ವರ್ಷಕ್ಕೆ ೨ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು ೧೨೫ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ೫೨ ಸಂತ್ರಸ್ತರಿಗೆ ಹಾಗೂ ೨೨ ಪಿಂಚಣಿದಾರರಿಗೆ ಸೇರಿ ಒಟ್ಟು ₹೧.೨೩ ಕೋಟಿ ಪರಿಹಾರಧನ ಇನ್ನೂ ಬಿಡುಗಡೆಯಾಗಿಲ್ಲ. ದೌರ್ಜನ್ಯಕ್ಕೊಳಗಾದವರನ್ನು ಸರ್ಕಾರವೇ ಮತ್ತೊಮ್ಮೆ ಸಂಕಷ್ಟಕ್ಕೆ ತಳ್ಳಿದಂತಾಗಿದೆ ಎಂದು ಆರೋಪಿಸಿದರು.ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ವಿತರಣೆಯಲ್ಲೂ ಸರ್ಕಾರ ನಿರ್ಲಕ್ಷ್ಯ ತೋರಿದೆ. ಹಾಸನ ಜಿಲ್ಲೆಯಲ್ಲಿ ೨೦೨೪ರಿಂದ ಇದುವರೆಗೆ ೪೨೮ ಅಂತರ್ಜಾತಿ ವಿವಾಹ, ೩೩ ಒಳಪಂಗಡದ ವಿವಾಹ ಹಾಗೂ ೨ ವಿಧವಾ ಮರುವಿವಾಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಒಟ್ಟು ₹೧೧.೯೦ ಕೋಟಿ ಪ್ರೋತ್ಸಾಹಧನ ಬಾಕಿಯಿದೆ. ಅನುದಾನ ಕೊರತೆಯಿಂದ ಸಾವಿರಾರು ಫಲಾನುಭವಿಗಳು ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಾಕಿ ಇರುವ ಪರಿಹಾರ ಧನ ಹಾಗೂ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಯೋಜನೆಗಳಿಗೆ ಸಾಕಷ್ಟು ಅನುದಾನ ಮೀಸಲಿಡಬೇಕು. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ದಲಿತ ವಿರೋಧಿ ಧೋರಣೆ ವಿರುದ್ಧ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿ. ಎಚ್. ಎಸ್. ಮುಖಂಡರಾದ ಸಿ.ಕೆ. ಪ್ರಸನ್ನಕುಮಾರ್, ರಾಜು ಸಿಗರನಹಳ್ಳಿ, ಪ್ರಕಾಶ್, ಮೀನಾಕ್ಷಿ, ರಮೇಶ್ ಇತರರು ಇದ್ದರು.