₹80 ಲಕ್ಷ ವೆಚ್ಚದ 6 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ವಾಹನ ಇದು.
ಹೊಸಪೇಟೆ: ಇಲ್ಲಿನ ಹೊಸಪೇಟೆ ಅಗ್ನಿಶಾಮಕ ಘಟಕದಲ್ಲಿ ಇನ್ನು ಎರಡು ಅಗ್ನಿಶಾಮಕ ವಾಹನಗಳು ಇರಬೇಕಾದ ಅಗತ್ಯ ಇದೆ. ಅದನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ಇಲ್ಲಿನ ಅಗ್ನಿಶಾಮಕ ಘಟಕಕ್ಕೆ ಹೊಸದಾಗಿ ಬಂದ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
₹80 ಲಕ್ಷ ವೆಚ್ಚದ 6 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ವಾಹನ ಇದು. ಇಲ್ಲಿಗೆ 16 ಸಾವಿರ ಲೀಟರ್ ನೀರು ಸಂಗ್ರಹಿಸುವ ₹1.5 ಕೋಟಿ ವೆಚ್ಚದ ಬೃಹತ್ ವಾಹನ ಸಹಿತ ಇನ್ನೊಂದು ವಾಹನದ ಅಗತ್ಯ ಇದೆ. ಇಲ್ಲಿನ 37 ಸಿಬ್ಬಂದಿಗೆ ವಸತಿ ವ್ಯವಸ್ಥೆಯೂ ಆಗಬೇಕು. ಅದೆಲ್ಲವನ್ನೂ ಡಿಎಂಎಫ್ ಮತ್ತು ಕೆಕೆಆರ್‌ಡಿಬಿ ಅನುದಾನದಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಹೊಸಪೇಟೆ ನಗರ ಸುತ್ತಮುತ್ತಲಲ್ಲೇ ಕಳೆದ ಮೂರು ತಿಂಗಳಲ್ಲಿ 87 ಅಗ್ನಿ ದುರಂತ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ 320ರಷ್ಟು ಪ್ರಕರಣಗಳ ಸಂಭವಿಸಿವೆ. ಇಲ್ಲಿನ ಕಚೇರಿಯನ್ನು ನವೀಕರಿಸಬೇಕಿದೆ. ಅಗ್ನಿಶಾಮಕ ವಾಹನ ಶೆಡ್ ಸಹ ಶಿಥಿಲಗೊಂಡಿದೆ. ಕೆಕೆಆರ್‌ಡಿಬಿಗೆ ಈ ಬಗ್ಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಲಾಗುವುದು. ಹಂತ ಹಂತವಾಗಿ ಈ ಎಲ್ಲ ಕಾಮಗಾರಿಗಳು ನಡೆಯಲಿವೆ ಎಂದು ಅವರು ಹೇಳಿದರು.
ಕೆಕೆಆರ್‌ಡಿಬಿ ಅನುದಾನ ಹೆಚ್ಚಳ ವಿಶ್ವಾಸ:ಗೋವಿಂದರಾವ್ ಆಯೋಗ ಇದೀಗ ವಿಜಯನಗರ ವಿಧಾನಸಭಾ ಕ್ಷೇತ್ರವನ್ನು ಅತಿ ಹಿಂದುಳಿದ ಕ್ಷೇತ್ರ ಎಂದು ಗುರುತಿಸಿದೆ. ಹೀಗಾಗಿ ಇನ್ನು ಮುಂದೆ ಕೆಕೆಆರ್‌ಡಿಬಿಯಿಂದ ಹಾಲಿ ₹7 ಕೋಟಿಯಿಂದ ₹30 ಕೋಟಿಯಷ್ಟು ಅನುದಾನ ಸಿಗುವ ವಿಶ್ವಾಸ ಇದೆ ಎಂದು ಶಾಸಕ ಗವಿಯಪ್ಪ ಹೇಳಿದರು.
ಮುಂದಿನ ತಿಂಗಳಲ್ಲೇ ನೂತನ ಜಿಲ್ಲಾಸ್ಪತ್ರೆ ಉದ್ಘಾಟನೆಗೆ ಸಿಎಂ ಬಳಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಲಾಗುವುದು. ಈಗಾಗಲೇ ಇಲ್ಲಿಗೆ 247 ಸಿಬ್ಬಂದಿ ನಿಯೋಜನೆಗೆ ಅನುಮತಿ ದೊರೆತಿದೆ. 100 ಹಾಸಿಗೆಗಳ ಹೃದಯ ಆರೈಕೆ ಕೇಂದ್ರ ಸ್ಥಾಪಿಸಲು ಜಯದೇವ ಆಸ್ಪತ್ರೆಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಹೊಸಪೇಟೆಗೆ ಕೇವಲ 10 ಕಿ.ಮೀ.ದೂರದಲ್ಲಿ ಇರುವ ಮಿನಿರಾಬಾದ್‌ನಲ್ಲಿ ಕ್ಯಾನ್ಸರ್ ಆರೈಕೆ ಕೇಂದ್ರವನ್ನು ರಾಜ್ಯ ಕೊಟ್ಟಿರುವುದು ಸಂತೋಷದ ಸಂಗತಿ ಎಂದರು.6 ತಿಂಗಳೊಳಗೆ ಸಕ್ಕರೆ ಕಾರ್ಖಾನೆ ಕುರಿತು ನಿರ್ಧಾರ:
ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಇದುವರೆಗೆ ನನಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಿಲ್ಲ. ನಿಜ, ಇನ್ನು ಮುಂದೆ ಇದಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ಉದ್ಯಮಿಗಳೊಂದಿಗೆ ಚರ್ಚಿಸುವೆ. ಇನ್ನು ಆರು ತಿಂಗಳೊಳಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವುದು ಖಂಡಿತ ಎಂದು ಶಾಸಕ ಗವಿಯಪ್ಪ ಹೇಳಿದರು.ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಾಲಿ ಪ್ರಮೋದ್ ಎಸ್. ಹೊಸಪೇಟೆ ಅಗ್ನಿಶಾಮಕ ಘಟಕದ ಕುಂದುಕೊರತೆಗಳ ಕುರಿತು ಶಾಸಕರಿಗೆ ಮನವರಿಕೆ ಮಾಡಿದರು.