ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡುವ ಕುರಿತಂತೆ ಹೊಸದಾಗಿ ಹೊರಾಂಗಣ ಜಾಹೀರಾತು ಪ್ರದರ್ಶನ ನೀತಿ ರೂಪಿಸುತ್ತಿರುವ ಬಿಬಿಎಂಪಿ, ಅದಕ್ಕಾಗಿ ದೆಹಲಿ ಜಾಹೀರಾತು ನೀತಿ ಮಾದರಿಯನ್ನು ಅನುಸರಿಸಲು ಮುಂದಾಗಿದೆ.ಮಿತಿಮೀರಿದ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿ, ಅನಧಿಕೃತ ಹೋರ್ಡಿಂಗ್ಸ್‌ಗಳಿಗೆ ಕಡಿವಾಣ ಹಾಕುವ ಸಲುವಾಗಿ 2018ರಲ್ಲಿ ಬಿಬಿಎಂಪಿ ಒಂದು ವರ್ಷಗಳವರೆಗೆ ಹೊರಾಂಗಣ ಜಾಹೀರಾತು ಪ್ರದರ್ಶನ ನಿಷೇಧಿಸಿತ್ತು. ಅದಕ್ಕೂ ಮುನ್ನ ಹೈಕೋರ್ಟ್ ಅನಧಿಕೃತ ಜಾಹೀರಾತಿಗೆ ಕಡಿವಾಣ ಹಾಕದ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ಜಾಹೀರಾತು ಅಕ್ರಮ ತಡೆಗೆ ಸೂಕ್ತ ನೀತಿ ರೂಪಿಸುವಂತೆಯೂ ಸೂಚಿಸಿತ್ತು.
ಆ ಹಿನ್ನೆಲೆಯಲ್ಲಿ ಕಳೆದ ಕೆಲವರ್ಷಗಳಿಂದ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ. ಇದೀಗ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ದೆಹಲಿಯಲ್ಲಿನ ಹೊರಾಂಗಣ ಜಾಹೀರಾತು ಪ್ರದರ್ಶನ ನೀತಿಯನ್ನು ಮುಂದಿಟ್ಟುಕೊಂಡು, ಬೆಂಗಳೂರಿಗೆ ಹೊಸ ನೀತಿಯನ್ನು ರೂಪಿಸುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಅದು ಅಂತಿಮಗೊಳ್ಳಲಿದ್ದು, ಅದಾದ ನಂತರ ಸರ್ಕಾರಕ್ಕೆ ಕಳುಹಿಸಿ ಅಲ್ಲಿಂದ ಅನುಮೋದನೆ ಪಡೆಯಲಾಗುತ್ತದೆ. ಅದಾದ ನಂತರ ಹೈಕೋರ್ಟ್‌ಗೆ ಸಲ್ಲಿಸಿ ಹೊಸ ನೀತಿಯನ್ನು ಅಂತಿಮಗೊಳಿಸಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ.ಪಿಪಿಪಿ-ಸರ್ಕಾರಿ ಜಾಹೀರಾತುಗಳಿಗೆ ಅವಕಾಶ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರ ಮತ್ತು ಬಿಬಿಎಂಪಿ ಒಡೆತನಕ್ಕೆ ಸೇರಿದ ಸುಮಾರು 600ರಿಂದ 700 ಹೋರ್ಡಿಂಗ್ಸ್‌ಗಳಿವೆ. ಅವುಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಜಾಹೀರಾತು ಪ್ರದರ್ಶನಕ್ಕೆ ಅನುಮತಿಸಲಾಗುತ್ತಿದೆ. ಅದರ ಜತೆಗೆ ಬಿಬಿಎಂಪಿ ಅನುಮತಿಸಿದ ಜಾಹೀರಾತುಗಳ ಪ್ರದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಹಾಗೆಯೇ, ಸಾರ್ವಜನಿಕ-ಸರ್ಕಾರಿ ಸಹಭಾಗಿತ್ವದ ಅಡಿಯಲ್ಲಿ ನಿರ್ಮಿಸಲಾದ ಶೌಚಾಲಯ, ಪಾದಚಾರಿ ಮೇಲ್ಸೇತುವೆ, ಬಸ್ ಶೆಲ್ಟರ್‌ಗಳಲ್ಲಿಯೂ ಜಾಹೀರಾತು ಪ್ರದರ್ಶಿಸಬಹುದಾಗಿದೆ. ಅದನ್ನು ಹೊರತುಪಡಿಸಿ ಫ್ಲೆಕ್ಸ್, ಬ್ಯಾನರ್ ಸೇರಿದಂತೆ ದೊಡ್ಡ ಮಟ್ಟದ ಹೋರ್ಡಿಂಗ್ಸ್ ಹಾಕುವುದು ಅಕ್ರಮವಾಗಿದೆ.ಪಾಲಿಕೆಗೆ ಆದಾಯ ಖೋತಾ:
2018ರಿಂದ ಬಿಬಿಎಂಪಿಗೆ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡುವ ಮೂಲಕ ಬರುತ್ತಿದ್ದ ಆದಾಯ ಖೋತಾ ಆಗಿದೆ. 2018-19ರಲ್ಲಿ ಬಿಬಿಎಂಪಿ ₹330 ಕೋಟಿ ಆದಾಯದ ನಿರೀಕ್ಷೆ ಹೊಂದಿತ್ತು. ಆದರೆ, ಜಾಹೀರಾತು ಪ್ರದರ್ಶನ ನಿಷೇಧಿಸಿದ ಕಾರಣ ಆ ಆದಾಯ ಖೋತಾ ಆಗುವಂತಾಗಿತ್ತು. ಅದಾದ ನಂತರ 5 ವರ್ಷವೂ ಜಾಹೀರಾತು ಆದಾಯ ಬರದ ಕಾರಣ, ಬಿಬಿಎಂಪಿ ಸುಮಾರು ₹2 ಸಾವಿರ ಕೋಟಿಗೂ ಹೆಚ್ಚಿನ ಆದಾಯ ನಷ್ಟವಾಗಿದೆ. ಇದೀಗ ಹೊಸ ನೀತಿ ಜಾರಿಗೆ ತಂದು ಅಧಿಕೃತವಾಗಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡುವ ಮೂಲಕ ವಾರ್ಷಿಕ ₹400 ಕೋಟಿಯಿಂದ ₹500 ಕೋಟಿ ಆದಾಯ ಪಡೆಯುವ ನಿರೀಕ್ಷೆ ಹೊಂದಲಾಗಿದೆ.---
ದೆಹಲಿ ಜಾಹೀರಾತು ನೀತಿಯಲ್ಲೇನಿದೆ?ದೆಹಲಿ ಮಹಾನಗರದಲ್ಲಿಯೂ ಜಾಹೀರಾತು ಹಾವಳಿ ಹೆಚ್ಚಾದ ಕಾರಣ 2017ರಲ್ಲಿ ಹೊಸ ಜಾಹೀರಾತು ನೀತಿ ರೂಪಿಸಲಾಗಿತ್ತು. ಅದರಲ್ಲಿ ಇರುವ ಪ್ರಮುಖಾಂಶಗಳು.
1.ವಾಹನ ಸವಾರರನ್ನು ಆಕರ್ಷಿಸುವ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶವಿಲ್ಲ. ಅದರಲ್ಲೂ ಹೆದ್ದಾರಿ, ಪ್ರಮುಖ ರಸ್ತೆಗಳಲ್ಲಿ ಜಾಹೀರಾತು ಅಳವಡಿಸುವಂತಿಲ್ಲ.2.ವಸತಿ ಕಟ್ಟಡಗಳ ಮೇಲ್ಭಾಗದಲ್ಲಿ, ಮೇಲ್ಸೇತುವೆಗಳ ಪ್ಯಾನಲ್‌ಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ, ಪಾರಂಪರಿಕ ತಾಣಗಳಲ್ಲಿ, ರುದ್ರಭೂಮಿಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿಸುವುದಿಲ್ಲ.
3.ಜಾಹೀರಾತು ಅಳವಡಿಸಿದ ಮೊಬೈಲ್ ವ್ಯಾನ್‌ಗಳ ಓಡಾಟವನ್ನೂ ನಿಷೇಧಿಸಲಾಗಿದೆ.4. ಕೈಗಾರಿಕೆ, ವಾಣಿಜ್ಯ ಪ್ರದೇಶಗಳು, ಮೇಲ್ಸೇತುವೆಗಳ ಕಂಬಗಳು, ಮೆಟ್ರೋ, ಬಸ್‌ಗಳು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಜಾಹೀರಾತು ಪ್ರದರ್ಶಿಸಬಹುದಾಗಿದೆ.
5.ದೊಡ್ಡ ಮಟ್ಟದ ಜಾಹೀರಾತುಗಳಿಂದ ಸಣ್ಣ ಪ್ರಮಾಣದ ಜಾಹೀರಾತು ಪ್ರದರ್ಶನಕ್ಕೂ ಸ್ಥಳೀಯ ಮಹಾನಗರ ಪಾಲಿಕೆ ಅನುಮತಿ ಪಡೆಯಲೇಬೇಕಿದೆ. ಉದಾಹರಣೆಗೆ ದೊಡ್ಡ ಹೋರ್ಡಿಂಗ್‌ಗಳ ಅಳವಡಿಕೆಗೂ ಮುನ್ನ ಮಹಾನಗರ ಪಾಲಿಕೆ ಆಯುಕ್ತರ ಅನುಮತಿ ಪಡೆಯಬೇಕು.6. ಪಾರ್ಕಿಂಗ್ ಟಿಕೆಟ್ ಸೇರಿದಂತೆ ಇನ್ನಿತರ ಟಿಕೆಟ್‌ಗಳಲ್ಲಿ ಜಾಹೀರಾತು ಹಾಕಿಸಲೂ ಆಯುಕ್ತರ ಅನುಮತಿ ಕಡ್ಡಾಯವಾಗಿದೆ.
--ಚಿತ್ರ: ಆ್ಯಡ್