ಸಾರಾಂಶ
ಎಎಪಿ ಹೆಗಲ ಮೇಲೆ ಬಂದೂಕು ಇರಿಸಿ ಬಿಜೆಪಿಯತ್ತ ಗುರಿ ಮಾಡಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೂ ಸಹ ದೆಹಲಿಯ ಪ್ರಬುದ್ಧ ಮತದಾರ ಶೂನ್ಯ ಸುತ್ತಿಸಿದ್ದಾನೆ. ಈ ಫಲಿತಾಂಶ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಮತ್ತಿತರ ಪಕ್ಷಗಳಿಗೆ ಮರುಕಳಿಸಲಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಹೇಳಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಎಎಪಿ ಹೆಗಲ ಮೇಲೆ ಬಂದೂಕು ಇರಿಸಿ ಬಿಜೆಪಿಯತ್ತ ಗುರಿ ಮಾಡಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೂ ಸಹ ದೆಹಲಿಯ ಪ್ರಬುದ್ಧ ಮತದಾರ ಶೂನ್ಯ ಸುತ್ತಿಸಿದ್ದಾನೆ. ಈ ಫಲಿತಾಂಶ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಮತ್ತಿತರ ಪಕ್ಷಗಳಿಗೆ ಮರುಕಳಿಸಲಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಹೇಳಿದರು.ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಜಯ ಸಾಧಿಸಿದ ಹಿನ್ನೆಲೆ ನಗರದ ಗಾಂಧಿ ವೃತ್ತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ ಬಳಿಕ ಅವರು ಮಾತನಾಡಿದರು.
ಭ್ರಷ್ಟಾಚಾರದ ವಿರುದ್ಧದ ಧ್ವನಿ ನಮ್ಮದು ಎಂದು ನಾಟಕ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ ಸ್ವತಃ ಕಂಡು ಕೇಳರಿಯದಷ್ಟು ಭ್ರಷ್ಟಾಚಾರವೆಸಗಿ ದೆಹಲಿ ಜನರ ಅವಕೃಪೆಗೆ ಒಳಗಾಯಿತು. ಬರಲಿರುವ ಜಿಪಂ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ. ಸಂಕಲ್ಪಕ್ಕೆ ತಕ್ಕಂತೆ ಶ್ರಮ ಹಾಕೋಣ.ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸುವ ಪಣ ತೋಡೋಣ ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಕಾಂಗ್ರೆಸ್ ಅದರ ಮಿತ್ರ ಪಕ್ಷಗಳಿಂದಲೇ ತಿರಸ್ಕಾರಕ್ಕೆ ಒಳಗಾಗಿದೆ. ದೆಹಲಿ ಚುನಾವಣೆ ಸೇರಿದಂತೆ ಇತ್ತೀಚೆಗೆ ನಡೆದ ಮಣಿಪುರ, ಮಹಾರಾಷ್ಟ ಚುನಾವಣೆಗಳು ಕಾಂಗ್ರೆಸ್ ಗೆ ಪಾಠ ಕಲಿಸಿವೆ. ಸತತವಾಗಿ ಮೂರು ಬಾರಿ ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್ ಪಕ್ಷ ಜನರ ಮನಸಿನಿಂದ ಮರೆಯಾಗುತ್ತಿದೆ. ಕಾಂಗ್ರೆಸ್‌ನ ಅಧಿ ನಾಯಕರು ಮತ್ತೊಮ್ಮೆ ತಮ್ಮ ಸಾಮರ್ಥ್ಯದ ಸದ್ಯದ ಸ್ಥಿತಿಯನ್ನು ಅವಲೋಕನ ಮಾಡಿಕೊಳ್ಳಬೇಕಾಗಿದೆ. ದೇಶದ ಜನರ ಭಾವನೆಗಳ ಎದುರು ನಿಂತರೆ ಇಂತಹ ಫಲಿತಾಂಶಗಳು ಮರುಕಳಿಸುತ್ತಲೇ ಇರುತ್ತವೆ ಎಂದರು.
ಬಿಜೆಪಿ ಮುಖಂಡರಾದ ದ್ಯಾಮೇಗೌಡ, ವಿಶ್ವನಾಥ್, ಕೇಶವಮೂರ್ತಿ, ಎ.ರಾಘವೇಂದ್ರ, ಎಂವಿ ಹರ್ಷ,ದಾಕ್ಷಾಯಿಣಿ, ಹಾಲಪ್ಪ, ವೆಂಕಟೇಶ್, ಕೃಷ್ಣಮೂರ್ತಿ,ವೇದಮೂರ್ತಿ, ಮಸ್ಕಲ್ ಶ್ರೀನಿವಾಸ್, ಶಂಕರ್ ಸಿಂಗ್, ನಾಗೇಂದ್ರ ಮುಂತಾದವರು ಹಾಜರಿದ್ದರು.