ಸಾರಾಂಶ
ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಸರ್ಕಾರದ ಯೋಜನೆಗಳನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಫಲಾನುಭವಿಗಳಿಗೆ ತಲುಪಿಸುವುದು ಅವರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಪ್ರತಿ ಅರ್ಜಿಯ ಹಿಂದೆ ಒಬ್ಬ ವ್ಯಕ್ತಿ ಅಥವಾ ಕುಟುಂಬಧ ಭವಿಷ್ಯವಿರುತ್ತದೆ ಇದನ್ನು ಅರಿತು ಅಧಿಕಾರಿಗಳು ಬಂದ ಅರ್ಜಿಗಳ ಬಗ್ಗೆ ಸಕಾಲದಲ್ಲಿ ಪರಿಶೀಲಿಸಿ ಸೂಕ್ತ ಕ್ರಮವಹಿಸಬೇಕು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳ ಪರಿಹಾರೋಪಾಯಗಳ ಬಗ್ಗೆ ಅಧಿಕಾರಿಗಳೊಂದಿಗೆ ವಿಚಾರಣೆ ಸಭೆಯಲ್ಲಿ ಅವರು ಮಾತನಾಡಿದರು.
ಯಾರೂ ಕೂಡ ಇಲಾಖೆಗೆ ಸರ್ವಾಧಿಕಾರಿಗಳಲ್ಲ, ಬಹುತೇಕ ದೂರು ಅರ್ಜಿಗಳು ಕಂದಾಯ ಇಲಾಖೆಗೆ ಸೀಮಿತವಾಗಿದ್ದು, ಸಾರ್ವಜನಿಕರನ್ನು ವಿನಾ ಕಾರಣ ಆಲೆದಾಡಿಸದೇ ಅವರಿಗೆ ಹಿಂಬರಹ ಕೊಟ್ಟು ಕಳುಹಿಸಿ ತಹಸೀಲ್ದಾರ್ ಮತ್ತು ಉಪವಿಬಾಗಾಧಿಕಾರಿಗಳ ಕಚೇರಿಗಳ ಘನತೆಯನ್ನು ಕಾಪಾಡಿಕೊಳ್ಳುವಂತೆ ಹೇಳಿದರು.ತಾಲೂಕಿನ ಸಾಸ್ವೇಹಳ್ಳಿ ಹೋಬಳಿ ಹುರಳಹಳ್ಳಿ ಗ್ರಾಮದಲ್ಲಿ 33 ಎಕರೆ 33 ಗುಂಟೆ ಸರ್ಕಾರಿ ಗೋಮಾಳವಿದ್ದು, ಈ ಪೈಕಿ ಈ ಹಿಂದೆ 22 ಎಕರೆ 30 ಗುಂಟೆ ಪ್ರದೇಶವನ್ನು ಬಗರ್ ಹುಕುಂ ಸಮಿತಿಯಲ್ಲಿ 16 ಜನರಿಗೆ ಮಂಜೂರು ಮಾಡಿ ಅದೇಶ ಪತ್ರಗಳ ನೀಡಿದ್ದು, ಇದರಲ್ಲಿ ಕೆಲವರಿಗೆ ಮಾತ್ರ ಪಹಣೆ ಮತ್ತು ಮ್ಯುಟೇಷನ್ ದಾಖಲೆ ನೀಡಲಾಗಿದೆ. ಆದರೆ ಕೆಲವರಿಗೆ ಇಲ್ಲಿಯವರೆ ನೀಡಿಲ್ಲ ಎಂದು ಹುರಳಹಳ್ಳಿ ಗ್ರಾಮದ ಎಚ್.ನರಸಿಂಹಪ್ಪ ಅವರು ಲೋಕಾಯುಕ್ತಕ್ಕೆ ಅರ್ಜಿ ನೀಡಿದ್ದರು.
ನಂತರದ ದಿನಗಳಲ್ಲಿ ಉಳಿದ ಜಮೀನಿನಲ್ಲಿ ಕಾನೂನು ಪ್ರಕಾರ ಬಗರ್ ಹುಕುಂ ಸಮಿತಿಯಲ್ಲಿ ಮಂಜೂರು ಮಾಡಿಸಿಕೊಳ್ಳಬೇಕೆಂಬ ನಿರ್ದೇಶನವಿದ್ದರೂ ಇದನ್ನು ಮೀರಿ ಗ್ರಾಮದಲ್ಲಿ ವಾಸವಿರದವರಿಗೆ ಹಾಗೂ ಸರ್ಕಾರಿ ನೌಕರರು, ನಿವೃತ್ತ ನೌಕರರ ಕುಟಂಬಗಳಿಗೆ ಸೇರಿ 11 ಜನರಿಗೆ ಕಾನೂನು ಬಾಹಿರವಾಗಿ ಮಂಜೂರು ಮಾಡಿ ಜೊತೆಗೆ ಅವರಿಗೆ ಪಹಣೆ ಮತ್ತು ಮ್ಯುಟೇಷನ್ ಸೇರಿ ಎಲ್ಲಾ ದಾಖಲೆಗಳನ್ನು ನೀಡಿದೆ ಎಂದು ನರಸಿಂಹಪ್ಪ ಅವರು ಅರ್ಜಿಯಲ್ಲಿ ದೂರಿದ್ದನ್ನು ಲೋಕಾಯುಕ್ತ ಎಸ್‌ಪಿ ಅವರು ಹೊನ್ನಾಳಿ ತಹಸೀಲ್ದಾರ್ ಅವರ ಗಮನಕ್ಕೆ ತಂದು ಈ ಬಗ್ಗೆ ಸ್ಥಳ ತನಿಖೆ ಮಾಡಿ ಸಮಗ್ರ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಲು ಸೂಚಿಸಿದರು.ತಾಲೂಕಿನ ಯಕ್ಕನಹಳ್ಳಿಯಲ್ಲಿ ಆರಂಭದಲ್ಲಿ ಮರಣ ಪ್ರಮಾಣ ಪತ್ರ ಮಂಜೂರು ಮಾಡಲು ಮಾಹಿತಿ ಲಭ್ಯವಿಲ್ಲ ಎಂದು ತಿರಸ್ಕರಿಸಿ ನಂತರದಲ್ಲಿ ಮರಣ ಪ್ರಮಾಣ ಪತ್ರ ನೀಡಲಾಗಿದೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಗ್ರಾಮಸ್ಥರು ದೂರು ಅರ್ಜಿ ಸಲ್ಲಿಸಿದ್ದರು,
ಗ್ರಾಮದ ಅಂಗನವಾಡಿ ಕಾರ್ಯಕರ್ತೆಗೆ ಮನೆ ಮಂಜೂರು ಮಾಡಿದ್ದು ನಂತರ ಅವರು ಮನೆ ಕಟ್ಟದಿದ್ದರೂ ಕೂಡ ಅವರಿಗೆ ಸರ್ಕಾರದಿಂದ ಹಣ ಮಂಜೂರಾಗಿದ್ದು, ಈ ಬಗ್ಗೆ ಕೂಡ ದೂರು ಸಲ್ಲಿಸಿದ್ದು ಈ ವಿಚಾರವಾಗಿ ಸಂಬಂಧಿಸಿದ ತಾಪಂ ಇಒ ಅವರಿಗೆ ಸೂಚನೆ ನೀಡಿ ಈ ಬಗ್ಗೆ ಪರಿಶೀಲನೆ ಮಾಡಿ ಸಂಬಂಧಿಸಿದ ಅಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಎಸ್‌ಪಿ ಅವರು ಸೂಚನೆ ನೀಡಿದರು.ನೀರು ಸರಬರಾಜು, ಗ್ರಾಮ ನೈರ್ಮನ್ಯ ಸೌಲಭ್ಯಗಳ ಬಗ್ಗೆ ಸೇರಿದಂತೆ ಒಟ್ಟು 12 ದೂರು ಅರ್ಜಿಗಳನ್ನು ಸ್ವೀಕರಿಸಿ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು.
ಈ ವೇಳೆ ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ, ಇನ್ಸೆಪೆಕ್ಟರ್ ಮಧುಸೂಧನ್, ಪ್ರಭುಸೂರಿ, ಸರಳಾ ಹಾಗೂ ಹೊನ್ನಾಳಿ ಎಸಿ ಅಭಿಷೇಕ್, ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜ ಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ತಾಪಂ ಇಒ ಪ್ರಕಾಶ್, ಪೊಲೀಸ್ ಇನ್ಸೆಪೆಕ್ಟರ್ ಸುನಿಲ್ ಕುಮಾರ್, ಬೆಸ್ಕಾಂ ಎಇಇ ಜಯಪ್ಪ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸೋಮ್ಲಾ ನಾಯ್ಕ, ಅರಣ್ಯ ಇಲಾಖೆಯ ಕಿಶೋರ್, ಸಮಾಜ ಕಲ್ಯಾಣ ಇಲಾಖೆ ಉಮಾ, ಬಿಸಿಎಂ ಇಲಾಖೆ ಮೃತ್ಯುಂಜಯ ಸ್ವಾಮಿ, ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜ ಸೇವಾಕರ್ತ ಸೂರಟೂರು ಹನುಮಂತಪ್ಪ, ಅನಂದಪ್ಪ ಹಾಗೂ ವಿವಿಧ ಗ್ರಾಮಗಳಿಂದ ಅಗಮಿಸಿದ್ದ ಅರ್ಜಿದಾರರು ಇದ್ದರು.