ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಮಸಮಾಜ, ಸರ್ವೋದಯ ಸಮಾಜ ನಿರ್ಮಿಸಲು ಅಂಬೇಡ್ಕರ್ ಚಿಂತನೆಗಳು ಅತಿ ಅಗತ್ಯವಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಶಿವಮೊಗ್ಗ ವಿಭಾಗದ ಜಂಟಿ ನಿರ್ದೇಶಕ ಅಶೋಕ್ ಎನ್. ಚಲವಾದಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಸಿ ಅವರು ಮಾತನಾಡಿದರು.ಅಂಬೇಡ್ಕರ್ ಚಿಂತನೆಗಳನ್ನು ಎಲ್ಲರ ಮನ- ಮನೆಗಳಿಗೆ ತಲುಪಿಸುವ ಅಗತ್ಯವಿದೆ. ಅದುವೇ ಭಾರತ ಬದಲಾವಣೆಗಿರುವ ಹಾದಿ. ಬಸವಳಿದ ಬದುಕಿಗೆ ಆಸರೆಯಾದ ಅಂಬೇಡ್ಕರ್ ಅವರು ಮನುಷ್ಯ ಎಲ್ಲಿಯವರೆಗೆ ಪರಾವಲಂಬಿಯಾಗಿ ಬದುಕುತ್ತಾನೋ, ಅಲ್ಲಿಯವರೆಗೆ ಅವನ ಸಂಕಷ್ಟಗಳು, ಸಂಕಟಗಳು ನಿರಂತರ ಮುಂದುವರಿಯುತ್ತಲೇ ಇರುತ್ತವೆ. ಎಂಥದೇ ಕಷ್ಟ-ನಷ್ಟಗಳು ಬಂದರೂ ದಿಟ್ಟತನದಿಂದ ಎದುರಿಸಿ, ತನ್ನದೇ ಆದ ಬದುಕನ್ನು ಕಟ್ಟಿಕೊಂಡು ಬದುಕುವುದನ್ನು ಮೊದಲು ಕಲಿಯಬೇಕು ಎಂಬುದೇ ಅಂಬೇಡ್ಕರ್ ಅವರ ಬಹುದೊಡ್ಡ ಜೀವನ ಸಂದೇಶ ಎಂದು ಅಭಿಪ್ರಾಯಪಟ್ಟರು.
ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ ಮಾತನಾಡಿ, ಇಡೀ ಜೀವನವನ್ನು ಸಮಾಜ ಮತ್ತು ರಾಷ್ಟ್ರದ ಸೇವೆಗಾಗಿ ಮೀಸಲಿಟ್ಟ ಮಹೋನ್ನತ ನಾಯಕರಾಗಿದ್ದ ಅಂಬೇಡ್ಕರ್ ಅವರ ಚಿಂತನ-ಮಂಥನದ ಫಲವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿದೆ. ಇದಕ್ಕೆ ಸಮಾಜದ ಎಲ್ಲ ಜನರು ಭಾಗವಹಿಸಲು ಮತ್ತು ದೇಶದ ಮುಖ್ಯವಾಹಿನಿಗೆ ಬರುವುದು ಅತ್ಯವಶ್ಯಕ. ಇಲ್ಲದಿದ್ದರೆ ಇಡೀ ವ್ಯವಸ್ಥೆ ಅಸಮಾನತೆಗಳ ಕೊಂಪೆ ಆಗಿ ಕುಸಿದುಬೀಳುವ ಅಪಾಯ ಇರುತ್ತದೆ ಎಂದರು.ಈ ದೃಷ್ಟಿಯಿಂದಲೇ ಭಾರತೀಯ ಸಂವಿಧಾನದ ಅತ್ಯಂತ ಪರಿಣಾಮಕಾರಿ ಅಂಶ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವ ಮೀಸಲಾತಿ ವ್ಯವಸ್ಥೆ. ಇದರಿಂದ ಸಮಾಜದ ಅತ್ಯಂತ ಕೆಳವರ್ಗದ ಶೋಷಿತ, ವಂಚಿತ ಸಮುದಾಯದ ವ್ಯಕ್ತಿ ಸಹ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಮತ್ತು ದೇಶ ನಿರ್ಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಸಂಪೂರ್ಣ ಅವಕಾಶ ಹೊಂದಿರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಅಪರಾಧ ಶಾಸ್ತ್ರದ ಪ್ರಾಧ್ಯಾಪಕ ಡಾ.ನಟರಾಜ್ ವಿಶೇಷ ಉಪನ್ಯಾಸದಲ್ಲಿ, ದಲಿತ, ಬಡವ ಹಾಗೂ ಮಹಿಳೆಯರ ಆರ್ಥಿಕ ಸ್ವಾವಲಂಬನೆ ದೇಶದ ಪ್ರಗತಿಗೆ ನಾಂದಿ ಎಂದಿರುವ ಅಂಬೇಡ್ಕರ್ ಚಿಂತನೆಗಳನ್ನು ಮನನ ಮಾಡಿ ಅನುಷ್ಠಾನಗೊಳಿಸಿದರೆ ಸಮಗ್ರ ಭಾರತವೇ ಬದಲಾಗುವುದರಲ್ಲಿ ಸಂಶಯವಿಲ್ಲ ಎಂದರು."ಭಾರತದ ಸಮಗ್ರ ಬದಲಾವಣೆಗೆ ಅಂಬೇಡ್ಕರ್ ಚಿಂತನೆಗಳು " ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕನ್ನಡ ಭಾರತಿಯ ಎಂ.ಸಿ. ಮಾರುತಿ, ದ್ವಿತೀಯ ಬಹುಮಾನ ಪಡೆದ ಎಸ್.ಸಾಹಿತ್ಯ, ತೃತೀಯ ಬಹುಮಾನಕ್ಕೆ ಪಾತ್ರರಾದ ವರುಣವಾಲಿ ಅವರಿಗೆ ಪ್ರಮಾಣಪತ್ರ, ಸಂವಿಧಾನ ನಡಾವಳಿ ಸಂಪುಟಗಳನ್ನು ಬಹುಮಾನವಾಗಿ ನೀಡಿ ಅಭಿನಂದಿಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಆಕಾಶವಾಣಿ ಕಲಾವಿದ ಕುಣಿಗಲ್ ರಾಮಚಂದ್ರ ಇತರರು ಹಾಜರಿದ್ದರು.- - -
ಬಾಕ್ಸ್ "ಕೆಲವೇ ಮಹಾಮೇಧಾವಿಗಳಲ್ಲಿ ಒಬ್ಬರಾಗಿದ್ದ ಅಂಬೇಡ್ಕರ್ " ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಸ್.ವೆಂಕಟೇಶ್ ಮಾತನಾಡಿ, ದಿಕ್ಕೆಟ್ಟ ಭಾರತೀಯ ಸಮಾಜವನ್ನು ಸಮಾನತೆಯ ತತ್ವ, ಸಾಮಾಜಿಕ ಏಳಿಗೆ, ಸ್ಥಿರ ಪ್ರಜಾಪ್ರಭುತ್ವದ ಮೂಲಕ ಭಾರತದ ಬದಲಾವಣೆಗೆ ನಾಂದಿ ಹಾಡಿದವರು ಅಂಬೇಡ್ಕರ್. ಭಾರತ ತನ್ನ ಸುದೀರ್ಘ ಇತಿಹಾಸದಲ್ಲಿ ಕೆಲವೇ ಮಹಾಮೇಧಾವಿಗಳಲ್ಲಿ ಒಬ್ಬರಾಗಿರುವರು. ಮಾನವನ ಸಂಕಲ್ಪಶಕ್ತಿಗೆ, ಪ್ರಯತ್ನಶೀಲತೆಗೆ ಬರೆದ ಮಹಾಭಾಷ್ಯ ಅಂಬೇಡ್ಕರ್‌ರವರ ಬದುಕು. ಸರ್ವರ ಉದ್ಧಾರಕ್ಕೆ ಜೀವನವಿಡಿ ಹೋರಾಟ ಮಾಡಿದ ಮಹಾಸಾಧಕರು. ಎಲ್ಲರಿಗೂ ಕಲಿಯುವ ಹಕ್ಕಿದೆ. ಮನುಷ್ಯ ಜೀವಿಸಲು ಆಹಾರ ಎಷ್ಟು ಅಗತ್ಯವೋ, ವಿದ್ಯೆಯೂ ಅಷ್ಟೇ ಅಗತ್ಯ ಎಂದಿರುವ ಅಂಬೇಡ್ಕರ್ ಚಿಂತನೆಗಳು, ಭಾರತದ ಸಮಗ್ರ ಬದಲಾವಣೆಗೆ ಸಿದ್ಧೌಷಧ ಆಗಿವೆ ಎಂದು ಅಭಿಪ್ರಾಯಪಟ್ಟರು.- - --24ಎಸ್‌ಎಂಜಿಕೆಪಿ01:
ಸಮಾರಂಭವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಶಿವಮೊಗ್ಗ ವಿಭಾಗದ ಜಂಟಿ ನಿರ್ದೇಶಕ ಅಶೋಕ್ ಎನ್. ಚಲವಾದಿ ಉದ್ಘಾಟಿಸಿದರು.