ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿನ ಪ್ರಾಯೋಜಕತ್ವ, ವಿಶೇಷ ಪಾಲನೆ, ಉಪಕಾರ್ ಹಾಗೂ ಮುಖ್ಯಮಂತ್ರಿ ಅವರ ಬಾಲಸೇವಾ ಯೋಜನೆಯನ್ನು ಅರ್ಹರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿನ ಪ್ರಾಯೋಜಕತ್ವ, ವಿಶೇಷ ಪಾಲನೆ, ಉಪಕಾರ್ ಹಾಗೂ ಮುಖ್ಯಮಂತ್ರಿ ಅವರ ಬಾಲಸೇವಾ ಯೋಜನೆಯನ್ನು ಅರ್ಹರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವ್ಯಾಪ್ತಿಯ ಪ್ರಾಯೋಜಕತ್ವ ಹಾಗೂ ಪೋಷಕತ್ವ ಅನುಮೋದನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಮಿಷನ್ ವಾತ್ಸಲ್ಯ ಮಾರ್ಗಸೂಚಿಯಂತೆ ಪ್ರಾಯೋಜಕತ್ವ ಯೋಜನೆ ಜಾರಿಗೊಳಿಸಿದ್ದು, 18 ವರ್ಷದೊಳಗಿನ ಮಕ್ಕಳ ರಕ್ಷಣೆ, ಪಾಲನೆ ಮತ್ತಿತರ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಎಸ್.ಹೊನ್ನೇಗೌಡ ಅವರು ಪ್ರಾಯೋಜಕತ್ವ ಯೋಜನೆಯಡಿ 4 ಸಾವಿರ ರು.. ನೀಡಲಾಗುತ್ತಿದ್ದು, 2025- 26 ನೇ ಸಾಲಿನ ಮೂರನೇ ತ್ರೈಮಾಸಿಕಕ್ಕೆ 102 ಅರ್ಜಿಗಳು ಸ್ವೀಕೃತವಾಗಿದ್ದು, ಈ ಅರ್ಜಿಗಳಲ್ಲಿ 92 ಅರ್ಜಿಗಳು ಜಿಲ್ಲಾ ಪ್ರಾಯೋಜಕತ್ವ ಮತ್ತು ಪೋಷಕತ್ವ ಅನುಮೋದನಾ ಸಮಿತಿಗೆ ಮಂಡಿಸಲಾಗಿದೆ ಎಂದರು.
ವಿಶೇಷ ಪಾಲನಾ ಯೋಜನೆಯಡಿ ಅರ್ಹರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. 18 ವರ್ಷದೊಳಗಿನ ಮಕ್ಕಳ ರಕ್ಷಣೆ, ಪಾಲನೆ, ಪೋಷಣೆ ಮತ್ತಿತರ ಸಂಬಂಧ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.ಉಪಕಾರ್ ಯೋಜನೆ ಜಾರಿಗೊಳಿಸಲಾಗಿದೆ:
ಉಪಕಾರ್ ಯೋಜನೆಯಡಿ ಬಾಲ ನ್ಯಾಯ ಮಕ್ಕಳ ಪಾಲನೆ ಮತ್ತು ರಕ್ಷಣೆ ಕಾಯ್ದೆ, 2015ರಡಿ ನೋಂದಾಯಿಸಲಾಗಿರುವ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ 18 ವರ್ಷ ಪೂರ್ಣಗೊಂಡು ಸಂಸ್ಥೆಯಿಂದ ಬಿಡುಗಡೆಯಾದ ಮಕ್ಕಳ ಮುಂದಿನ ಪುನರ್ ವಸತಿಗಾಗಿ ಹಾಗೂ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅನುವಾಗುವಂತೆ ಆರ್ಥಿಕ ಸ್ವಾವಲಂಬನೆಗೆ ಉಪಕಾರ್ ಯೋಜನೆ ಜಾರಿಗೊಳಿಸಲಾಗಿದೆ ಎಂದರು.ಮಕ್ಕಳ ರಕ್ಷಣಾ ಅಧಿಕಾರಿ ಸಚಿನ್ ಸುವರ್ಣ ಅವರು ಉಪಕಾರ್ ಯೋಜನೆಯಡಿ ಮಾಸಿಕ 5 ಸಾವಿರ ರು. ಅರ್ಹರಿಗೆ ನೀಡಲಾಗುತ್ತಿದ್ದು, ಕನಿಷ್ಠ ಮೂರು ವರ್ಷದವರೆಗೆ ಮಕ್ಕಳ ಪಾಲನೆ ಸಂಬಂಧಪಟ್ಟ ಸಂಸ್ಥೆಯವರದಾಗಿರುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಅವರ ಬಾಲಸೇವಾ ಯೋಜನೆಯಡಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪೋಷಕರನ್ನು ಕಳೆದುಕೊಂಡಿರುವ ಮಗುವಿಗೆ 18 ವರ್ಷ ತುಂಬುವವರೆಗೆ ಮಾಸಿಕ 3,500 ರು. ನೀಡಲಾಗುತ್ತಿದ್ದು, ಈ ಯೋಜನೆಯಡಿ ಇಬ್ಬರಿಗೆ ಸಹಾಯಧನ ದೊರೆಯುತ್ತಿದೆ ಎಂದು ಮಾಹಿತಿ ನೀಡಿದರು.ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಅಂಬಿಕಾ, ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ನಾಗರತ್ನ ಇತರರು ಇದ್ದರು.
ಸಭೆ: ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಚಟುವಟಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಸೂಚಿಸಿದರು.
ಕ್ರಮವಹಿಸಬೇಕು:ಬಾಲ ಹಾಗೂ ಕಿಶೋರ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು. ಪತ್ತೆಯಾದ ಬಾಲ/ ಕಿಶೋರ ಕಾರ್ಮಿಕರಿಗೆ ಅರ್ಹತೆ ಅನುಸಾರ ಸರ್ಕಾರಿ ಬಾಲಮಂದಿರ ವಸತಿ ನಿಲಯಗಳಲ್ಲಿ ನೇರವಾಗಿ ದಾಖಲಿಸಲು ಕ್ರಮವಹಿಸಬೇಕು ಎಂದು ಸಲಹೆ ಮಾಡಿದರು.
ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿ, ಗ್ರಾಮ ಸಭೆಗಳಲ್ಲಿ ಬಾಲ/ಕಿಶೋರ ಕಾರ್ಮಿಕರ ರಕ್ಷಣೆ ಬಗ್ಗೆ ಬೆಳಕು ಚೆಲ್ಲುವಂತಾಗಬೇಕು ಸಲಹೆ ಮಾಡಿದರು.ಬಾಲ ಕಾರ್ಮಿಕರ ಮತ್ತು ಕಿಶೋರ ಕಾರ್ಮಿಕರು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅರಿವು ಮೂಡಿಸುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಕಾರ್ಯಕ್ರಮ ತಲುಪಿಸುವಂತೆ ನಿರ್ದೇಶನ ನೀಡಿದರು. ಈ ಸಂಬಂಧ ಇಬ್ಬರಿಗೆ ಕಲಿಕಾ ಸಾಮಗ್ರಿಗಳನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ವಿತರಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕಾವೇರಿ, ತಾಲೂಕು ಕಾರ್ಮಿಕ ಅಧಿಕಾರಿಗಳಾದ ಎಂ.ಎಂ.ಯತ್ನಟ್ಟಿ, ಶಶಿಧರ, ಎಂ.ಸಿ.ಮಾದಪ್ಪ, ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಶಿರಾಜ್ ಅಹಮದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನಕುಮಾರ್ ಇತರರು ಹಲವು ಮಾಹಿತಿ ನೀಡಿದರು