ಸಾರಾಂಶ
ಧಾರವಾಡದ ಎಂಜಿನಿಯರ್ ವಿದ್ಯಾರ್ಥಿ ಕುಮಾರ ವ್ಯಾಸ ದೇಸಾಯಿ, ವ್ಯಾಸಂಗಕ್ಕೆ ಡೆಲ್ ಕಂಪನಿಯ ಲ್ಯಾಪ್‌ಟಾಪ್‌ನ್ನು 2021ರ ಡಿಸೆಂಬರ್ 23ರಂದು ₹ 67,990 ಮತ್ತು ಹೆಚ್ಚಿನ ಒಂದು ವರ್ಷ ವಾರಂಟಿಗೆ ₹ 1999 ಸೇರಿ ₹ 69,989 ಪಾವತಿಸಿ ಖರೀದಿಸಿದ್ದರು.
ಧಾರವಾಡ:
ವಿದ್ಯಾರ್ಥಿಗೆ ದೋಷಪೂರಿತ ಲ್ಯಾಪ್‌ಟಾಪ್ ನೀಡಿದ ಡೆಲ್ ಕಂಪನಿಗೆ ದಂಡ ವಿಧಿಸಿದ ಇಲ್ಲಿಯ ಗ್ರಾಹಕರ ಆಯೋಗವು ಪರಿಹಾರಕ್ಕೆ ಆದೇಶ ಮಾಡಿದೆ.ಇಲ್ಲಿಯ ಎಂಜಿನಿಯರ್ ವಿದ್ಯಾರ್ಥಿ ಕುಮಾರ ವ್ಯಾಸ ದೇಸಾಯಿ, ವ್ಯಾಸಂಗಕ್ಕೆ ಡೆಲ್ ಕಂಪನಿಯ ಲ್ಯಾಪ್‌ಟಾಪ್‌ನ್ನು 2021ರ ಡಿಸೆಂಬರ್ 23ರಂದು ₹ 67,990 ಮತ್ತು ಹೆಚ್ಚಿನ ಒಂದು ವರ್ಷ ವಾರಂಟಿಗೆ ₹ 1999 ಸೇರಿ ₹ 69,989 ಪಾವತಿಸಿ ಖರೀದಿಸಿದ್ದರು. ಖರೀದಿಯ ಮೂರು ತಿಂಗಳ ಒಳಗಾಗಿ ಲ್ಯಾಪ್‌ಟಾಪ್‌ನಲ್ಲಿ ದೋಷಗಳು ಕಂಡುಬಂದಿದ್ದು ಅದನ್ನು ಸರಿಪಡಿಸಿ ಕೊಡಲಾಗಿದೆ. ಆದರೆ, ಪದೇ ಪದೇ ನ್ಯೂನತೆಗಳು ಕಂಡುಬಂದಿದ್ದರಿಂದ ತನಗೆ ದೋಷಪೂರಿತ ಲ್ಯಾಪ್‌ಟಾಪ್ ಕೊಡಲಾಗಿದ್ದು ಸರಿಯಾಗಿ ರಿಪೇರಿ ಸಹ ಮಾಡಿಕೊಡುತ್ತಿಲ್ಲ ಎಂದು ಕುಮಾರ ವ್ಯಾಸ ಅವರು ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಪ್ರಕರಣ ಸಾಬೀತು ಪಡಿಸಲು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಲಾಯಿತು. ಲ್ಯಾಪ್‌ಪ್‌ನಲ್ಲಿ ಖರೀದಿಸಿದ ಮೂರು ತಿಂಗಳ ಒಳಗೆ ವಾಯ್‌ಫೈ ಸಿಸ್ಟಮ್ ತೊಂದರೆ ಮತ್ತು ಬ್ಯಾಟರಿ ನ್ಯೂನತೆ ಇತರೇ ಸಮಸ್ಯೆಗಳು ಇರುವುದು ಕಂಡುಬಂದಿದೆ. ಅಲ್ಲದೇ ಆಯೋಗ ನೇಮಿಸಿದ ಕಮೀಷನರ್ ರಿಪೋರ್ಟ್‌ನಲ್ಲಿಯೂ ಸಹ ಲ್ಯಾಪ್‌ಟಾಪ್‌ನ ನ್ಯೂನತೆಗಳ ಬಗ್ಗೆ ಪ್ರಸ್ತಾಪವಿದೆ. ಈ ಎಲ್ಲ ಮೇಲಿನ ಅಂಶಗಳನ್ನು ಅವಲೋಕಿಸಿ, ಡೆಲ್ ಕಂಪನಿ ಕೊಟ್ಟಂತಹ ಲ್ಯಾಪ್‌ಟಾಪ್ ದೋಷಯುಕ್ತವಾಗಿದೆ. ಆದರಿಂದ ದೂರುದಾರರಿಗೆ ಹಳೆಯ ಲ್ಯಾಪ್‌ಟಾಪ್ ಪಡೆದುಕೊಂಡು ಅದೇ ಮಾಡಲ್‌ನ ನೂತನ ಲ್ಯಾಪ್‌ಟಾಪ್‌ನ್ನು ಒಂದು ತಿಂಗಳ ಒಳಗೆ ಕೊಡಲು ಆದೇಶಿಸಿದೆ. ತಪ್ಪಿದ್ದಲ್ಲಿ ಲ್ಯಾಪ್‌ಟಾಪ್‌ನ ಮೊತ್ತ ₹ 69,989ನ್ನು ಬಡ್ಡಿ ಸಮೇತ ಪೂರ್ತಿ ಹಣ ಸಂದಾಯ ಆಗುವವರೆಗೆ ದೂರುದಾರ ವಿದ್ಯಾರ್ಥಿ ವ್ಯಾಸ್‌ಗೆ ಕೊಡಲು ಆಯೋಗ ನಿರ್ದೇಶಿಸಿದೆ. ಜೊತೆಗೆ ₹ 25 ಸಾವಿರ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚವೆಂದು ₹ 10 ಸಾವಿರ ಕೊಡುವಂತೆ ಬೆಂಗಳೂರಿನ ಡೆಲ್ ಕಂಪನಿಗೆ ಆಯೋಗ ಆದೇಶಿಸಿದೆ.