ಅಡುಗೆ ಸಹಾಯಕಿ ಹುದ್ದೆ ನೇಮಕಕ್ಕೆ ₹50 ಸಾವಿರ ಬೇಡಿಕೆ

| Published : Jun 25 2024, 12:30 AM IST

ಸಾರಾಂಶ

ಮಹಿಳೆಯೊಬ್ಬರು ಅಡುಗೆ ತಯಾರಿಕಾ ಹುದ್ದೆಗೆ ಅರ್ಜಿ ಸಲ್ಲಿಸಿ ಆ ವಾರ್ಡ್‌ನ ಮಹಿಳಾ ಪಪಂ ಸದಸ್ಯೆಯ ಮನೆಗೆ ಹೋಗಿ, ನಾನು ಅಡುಗೆ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದು, ನನ್ನನ್ನು ಕೆಲಸಕ್ಕೆ ನೇಮಿಸಿ ಎಂದು ವಿನಂತಿಸಿದಾಗ, ₹50 ಸಾವಿರ ಹಣ ನೀಡಿದರೆ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಮಹಿಳಾ ಸದಸ್ಯೆ ಹೇಳಿ ಕಳುಹಿಸಿದ್ದಾರೆ.

ಮುಂಡಗೋಡ: ಪ್ರಾಥಮಿಕ ಶಾಲೆಯ ಬಿಸಿಯೂಟ ಅಡುಗೆ ಸಹಾಯಕಿ ಹುದ್ದೆಗೆ ನೇಮಕ ಮಾಡಿಸಲು ಪಟ್ಟಣ ಪಂಚಾಯಿತಿ ಮಹಿಳಾ ಸದಸ್ಯೆಯೊಬ್ಬರು ₹೫೦ ಸಾವಿರ ಹಣದ ಬೇಡಿಕೆ ಇಟ್ಟಿರುವ ಮೊಬೈಲ್ ಸಂಭಾಷಣೆ ವೈರಲ್ ಆಗಿದ್ದು, ಈ ವಿಷಯವೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬಿಸಿಯೂಟ ಆಡುಗೆ ತಯಾರಕ ಸಿಬ್ಬಂದಿ ಹುದ್ದೆ ಖಾಲಿಯಾಗಿವೆ. ಈ ಹುದ್ದೆಗೆ ಅರ್ಹ ಫಲಾನುಭವಿಯನ್ನು ಆಯ್ಕೆ ಮಾಡಲು ಪಟ್ಟಣ ಪಂಚಾಯಿತಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಮಹಿಳೆಯೊಬ್ಬರು ಅಡುಗೆ ತಯಾರಿಕಾ ಹುದ್ದೆಗೆ ಅರ್ಜಿ ಸಲ್ಲಿಸಿ ಆ ವಾರ್ಡ್‌ನ ಮಹಿಳಾ ಪಪಂ ಸದಸ್ಯೆಯ ಮನೆಗೆ ಹೋಗಿ, ನಾನು ಅಡುಗೆ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದು, ನನ್ನನ್ನು ಕೆಲಸಕ್ಕೆ ನೇಮಿಸಿ ಎಂದು ವಿನಂತಿಸಿದಾಗ, ₹50 ಸಾವಿರ ಹಣ ನೀಡಿದರೆ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಮಹಿಳಾ ಸದಸ್ಯೆ ಹೇಳಿ ಕಳುಹಿಸಿದ್ದಾರೆ.

ನಂತರ ಫೋನ್ ಕರೆ ಮಾಡಿ ಮಾತನಾಡಿದ ಫಲಾನುಭವಿ ಮಹಿಳೆ, ಅಷ್ಟೊಂದು ಹಣ ಕೊಡಲು ಆಗುವುದಿಲ್ಲ, ಐದು ಅಥವಾ ಹತ್ತು ಸಾವಿರ ಕೊಡುತ್ತೇವೆ. ನಾವು ತುಂಬಾ ಬಡವರಿದ್ದೇವೆ. ನಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದಾಗ, ಮಹಿಳಾ ಸದಸ್ಯೆ ಮಾತನಾಡಿ, ತಿಂಗಳಿಗೆ ₹೩೬೦೦ ಪಗಾರ ಬರುತ್ತದೆ, ಹತ್ತು ಜನ ಶಾಲೆಯ ಮಾಸ್ತರಗಳು ಬದಲಾಗುತ್ತಾರೆ. ಆದರೆ, ನೀವು ಬದಲಿ ಆಗುವುದಿಲ್ಲ. ಅಧಿಕಾರಿಗಳಿಗೆ ಹಣ ಕೊಟ್ಟರೆ ಕೆಲಸ ಮಾಡುತ್ತಾರೆ. ಕೊನೆಯದಾಗಿ ₹೪೦ ಸಾವಿರ ಕೊಟ್ಟರೆ ಮಾಡುತ್ತೇನೆ. ಇಲ್ಲದಿದ್ದರೆ ಬೇರೆಯವರನ್ನು ನೇಮಕ ಮಾಡುತ್ತೇವೆ ಎಂದು ಮಾತನಾಡಿರುವ ಆಡಿಯೋ ತಾಲೂಕಿನಾದ್ಯಂತ ವೈರಲ್ ಆಗಿದ್ದು, ಗುತ್ತಿಗೆ ಆಧರಿತವಾಗಿ ನೇಮಿಸಿಕೊಳ್ಳುವ ಕೇವಲ ₹೩೬೦೦ ವೇತನದ ಕೆಲಸಕ್ಕೆ ₹೫೦ ಸಾವಿರ ಲಂಚ ನೀಡುವಂತೆ ಕೇಳುವುದಾದರೆ ದೊಡ್ಡ ದೊಡ್ಡ ಹುದ್ದೆಗಳ ನೇಮಕವಾಗಬೇಕಾದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪಾರದರ್ಶಕ ಪ್ರಕ್ರಿಯೆ: ಶಾಲೆಗಳಲ್ಲಿ ಖಾಲಿ ಇರುವ ಬಿಸಿಯೂಟ ತಯಾರಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಯನ್ನು ನೇಮಕ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಲಿದೆ. ಪಟ್ಟಣ ಪಂಚಾಯಿತಿ ಸದಸ್ಯರು ಹಣ ಕೇಳಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಅದರ ಬಗ್ಗೆ ನಾನು ಏನು ಹೇಳಲಾಗದು. ಹಣ ಕೇಳಿದ ಪಪಂ ಸದಸ್ಯರೇ ಇದಕ್ಕೆ ಉತ್ತರಿಸಬೇಕು ಎಂದು ಮುಂಡಗೋಡ ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ. ತಿಳಿಸಿದರು.