ಎಂಇಎಸ್‌ ಪುಂಡರ ಮೇಲೆ ಕ್ರಮಕ್ಕೆ ಆಗ್ರಹ

| Published : Mar 01 2025, 01:01 AM IST

ಸಾರಾಂಶ

ಎಂಇಎಸ್ ಭಾಷಾ ಸಮಸ್ಯೆ ಸೃಷ್ಟಿಸಿ ಅಶಾಂತಿ ಉಂಟು ಮಾಡಿರುವುದನ್ನು ಖಂಡಿಸಿ ಜಯಕರ್ನಾಟಕ ತಾಲೂಕು ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಧಾರವಾಡ: ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಪುಂಡರು ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನ ಮೇಲೆ ಹಲ್ಲೆ ಮಾಡಿ, ಕರ್ನಾಟಕದ ಬಸ್‌ಗಳಿಗೆ ಕಪ್ಪು ಮಸಿ ಬಳಿದು ಭಾಷಾ ಸಮಸ್ಯೆ ಸೃಷ್ಟಿಸಿ ಅಶಾಂತಿ ಉಂಟು ಮಾಡಿರುವುದನ್ನು ಖಂಡಿಸಿ ಜಯಕರ್ನಾಟಕ ತಾಲೂಕು ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಭಾರತ ದೇಶ ಹಲವು ರಾಜ್ಯಗಳಿಂದ ಕೂಡಿದ ಒಕ್ಕೂಟ ವ್ಯವಸ್ಥೆಯಿಂದ ನಿರ್ಮಾಣಗೊಂಡ ಹಾಗೂ ಪ್ರಪಂಚದಲ್ಲಿಯೇ ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದ ರಾಷ್ಟ್ರ. ಇಂತಹ ಸಂದರ್ಭದಲ್ಲಿ ಬಸ್‌ ನಿರ್ವಾಹಕ ಮೇಲೆ ಹಲ್ಲೆ ನಡೆಸಿ ಪೋಕ್ಸೋ ಪ್ರಕರಣ ದಾಖಲಿಸಿದ್ದು ತಪ್ಪು. ಎಂಇಎಸ್‌ ಪುಂಡರು ಸೊಲ್ಲಾಪುರ ಹಾಗೂ ಜಬ್ಬಲ್‌ಪುರ ಹಾಗೂ ಬಾಳೇಕುಂದ್ರಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಎಸಗಿರುವದು ನಾಚಿಕೆಗೇಡು. ಮಹಾರಾಷ್ಟ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಪೊಲೀಸರು ಶಾಂತಿ ಕದಡುವ ನಿಟ್ಟಿನಲ್ಲಿ ಇಂತಹ ಕೃತ್ಯ ಎಸಗಿದ ಈ ಪುಂಡರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ದುರ್ಗಪ್ಪ ಕಡೇಮನಿ, ಲಕ್ಷ್ಮಣ ದೊಡ್ಡಮನಿ, ರಾಜು ಜುನ್ನಾಯ್ಕರ, ಮಂಜುನಾಥ ಸುತಗಟ್ಟಿ, ನಾರಾಯಣ ಮಾದರ, ಶ್ರೀಕಾಂತ ತಳವಾರ, ಹನುಮಂತ ಮೊರಬ, ಶಬ್ಬಿರ ಅತ್ತಾರ, ಮುತ್ತು ಕುಲಕರ್ಣಿ, ಮಡಿವಾಳಪ್ಪ ನಡಕಟ್ಟಿ, ಪರಶುರಾಮ ದೊಡಮನಿ, ಇರ್ಫಾನ ಬೇಪಾರಿ, ವಿನೋದ ಕಾಳಿ, ಮಂಜುನಾಥ ಕಡೇಮನಿ ಮತ್ತಿತರರು ಇದ್ದರು.