ಸಾರಾಂಶ
ಮುಡುಬ ಸಿದ್ದಾಪುರ ಗ್ರಾ.ಪಂ ನೂತನ ಸದಸ್ಯರಾದ ದ್ರಾಕ್ಷಾಯಣಪ್ಪ ಒತ್ತಾಯಕನ್ನಡಪ್ರಭ ವಾರ್ತೆ ಶಿಕಾರಿಪುರ ಸುಳ್ಳು ಜಾತಿ ಪ್ರಮಾಣ ಸಲ್ಲಿಸಿ ಗ್ರಾ.ಪಂ ಚುನಾವಣೆಯಲ್ಲಿ ಜಯಸಾಧಿಸಿದ ಅಭ್ಯರ್ಥಿಯ ಸದಸ್ಯತ್ವ ನ್ಯಾಯಾಲಯ ರದ್ದುಗೊಳಿಸಿದ್ದು, ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಇದುವರೆಗೂ ಕಠಿಣ ಕ್ರಮ ಕೈಗೊಳ್ಳದೆ ಪರಿಶಿಷ್ಟ ವರ್ಗಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ತಾಲೂಕಿನ ಮುಡುಬ ಸಿದ್ದಾಪುರ ಗ್ರಾ.ಪಂ ನೂತನ ಸದಸ್ಯರಾದ ದ್ರಾಕ್ಷಾಯಣಮ್ಮ ತಿಳಿಸಿದರು.
ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರಲ್ಲಿ ನಡೆದ ಗ್ರಾಪಂ ಸಾರ್ವತ್ರಿಕ ಚುನಾವಣೆಯಲ್ಲಿ ತಾಲೂಕಿನ ಮುಡುಬ ಸಿದ್ದಾಪುರ ಪರಿಶಿಷ್ಟ ವರ್ಗ ಮೀಸಲು ಕ್ಷೇತ್ರ ಬಸಮ್ಮ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಮೂಲ ಪರಿಶಿಷ್ಟ ವರ್ಗಕ್ಕೆ ಮೋಸಗೊಳಿಸಿ ರಾಜಕೀಯ ದುರುದ್ದೇಶದಿಂದ ಸ್ಪರ್ದಿಸಿದ್ದರು. ಚುನಾವಣೆ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಅಭ್ಯರ್ಥಿಯ ಜಾತಿ ಬಗ್ಗೆ ಆಕ್ಷೇಪಿಸಲಾಗಿತ್ತು. ಚುನಾವಣಾಧಿಕಾರಿ ಕೆರೆಯಪ್ಪನವರು ಸಾಮಾನ್ಯ ಮಹಿಳಾ ಅಭ್ಯರ್ಥಿ ಎಂದು ಪರಿಗಣಿಸಿ ಕಣ್ಣಿಗೆ ಮಣ್ಣೆರಚಿ ಪರಿಶಿಷ್ಟ ಜಾತಿ ಮೀಸಲಾತಿಯಡಿ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗಿತ್ತು ಎಂದು ದೂರಿದರು. 12 ಹೆಚ್ಚು ಮತಗಳ ಅಂತರದಿಂದ ಜಯಸಾಧಿಸಿದ ಬಸಮ್ಮನವರ ಸ್ಪರ್ಧೆ ಪ್ರಶ್ನಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ದಾವಣಗೆರೆಯ ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದ ದೂರನ್ನು ಪ್ರಾಧಿಕಾರ ಸೂಕ್ತವಾಗಿ ಪರಿಶೀಲಿಸಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿದ್ದಾರೆ ಎಂದು ತಿಳಿಸಿದರು.ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಬಸಮ್ಮನವರ ಸದಸ್ಯತ್ವ ರದ್ದುಗೊಳಿಸಿ ಚುನಾವಣೆಯಲ್ಲಿ 12 ಮತಗಳ ಹಿನ್ನಡೆಯಿಂದ ಎರಡನೇ ಸ್ಥಾನಗಳಿಸಿದ ನನಗೆ ಡಿ.20ರಂದು ಸದಸ್ಯತ್ವ ನೀಡಿದ್ದಾರೆ ಎಂದು ತಿಳಿಸಿದ ಅವರು, ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಬಸಮ್ಮ ಸಹಿತ ಚುನಾವಣಾಧಿಕಾರಿ ಕೆರೆಯಪ್ಪ ಮತ್ತಿತರರ ನಾಲ್ಕು ಆರೋಪಿಗಳ ವಿರುದ್ಧ ದೂರು ದಾಖಲಾ ಗಿದ್ದು ಇದುವರೆಗೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕಾನೂನಿನ ಭಯವಿಲ್ಲದೆ ರಾಜಾರೋಷವಾಗಿ ತಿರುಗುತ್ತಿರುವ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಅಧಿಕಾರಿಗಳು ಆರೋಪಿಗಳ ಪರವಾಗಿದ್ದಾರೆ ಎಂದು ದೂರಿದರು.
ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಮಹಿಳೆಗೆ ಆದ ಅನ್ಯಾಯಕ್ಕೆ ಸೂಕ್ತ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದ ಅವರು, ಪುನಃ ಇಂತಹ ಘಟನೆ ಮರುಕಳಿಸದ ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಗ್ರಾ.ಪಂ ಸದಸ್ಯ ಜಿ.ಬಸವರಾಜ ಮಾತನಾಡಿ, ಬಹುತೇಕ ಶಾಲಾ ಕಾಲೇಜುಗಳಲ್ಲಿ ದಾಖಲಿಸುವಾಗ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಲಾಗುತ್ತಿದ್ದು, ಇಂತಹ ಘಟನೆ ಸಾಮಾನ್ಯವಾಗುತ್ತಿದೆ. ಜನತೆಗೆ ಕಾನೂನಿನ ಭಯವಿಲ್ಲವಾಗಿದೆ ಸುಳ್ಳು ಜಾತಿ ಪ್ರಮಾಣ ಪತ್ರದ ಮೂಲಕ ಹಲವರು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಇದರಿಂದ ಪರಿಶಿಷ್ಟ ಜನಾಂಗ ಮೀಸಲಾತಿಯಿಂದ ವಂಚಿತವಾಗಲಿದೆ. ಈ ದಿಸೆಯಲ್ಲಿ ಕಟ್ಟುನಿಟ್ಟಿನ ಕ್ರಮದ ಮೂಲಕ ದುರುಪಯೋಗವನ್ನು ತಡೆಗಟ್ಟಬೇಕಾಗಿದೆ ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ನಿವೃತ್ತ ಸೈನಿಕ, ರೈತ ಸಂಘದ ಅಧ್ಯಕ್ಷ ಪಿ.ವೈ ರವಿ ಮುಖಂಡ ರೇವಪ್ಪ ಬೇಗೂರು,ಆನಂದಪ್ಪ ಅಮಟೆಕೊಪ್ಪ, ಶಶಿರೇಖಾ, ಕುಸುಮಮ್ಮ ಅಂಗಡಿ, ಧನಂಜಯ ಬನ್ನೂರು, ರಂಗಪ್ಪ,ಬಾಬು ಮತ್ತಿತರರು ಉಪಸ್ಥಿತರಿದ್ದರು.