ಪಟ್ಟಣದ ಉರ್ದು ಶಾಲೆಯ ಶಿಕ್ಷಕ ಜಗದೀಶ ಒಗ್ಗಣ್ಣನವರ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಶಾಲೆಗೆ ನುಗ್ಗಿ ಹಲ್ಲೆ ಮಾಡಿ, ಚಪ್ಪಲಿಹಾರ ಹಾಕಿ ಮೆರವಣಿಗೆ ಕೈಗೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಒಕ್ಕೂಟ ಸೋಮವಾರ ನೀಡಿದ್ದ ಸವಣೂರ ಬಂದ್ ಕರೆಗೆ ಸ್ಥಳೀಯರಿಂದ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಯಿತು.
ಸವಣೂರು:ಪಟ್ಟಣದ ಉರ್ದು ಶಾಲೆಯ ಶಿಕ್ಷಕ ಜಗದೀಶ ಒಗ್ಗಣ್ಣನವರ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಶಾಲೆಗೆ ನುಗ್ಗಿ ಹಲ್ಲೆ ಮಾಡಿ, ಚಪ್ಪಲಿಹಾರ ಹಾಕಿ ಮೆರವಣಿಗೆ ಕೈಗೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಒಕ್ಕೂಟ ಸೋಮವಾರ ನೀಡಿದ್ದ ಸವಣೂರ ಬಂದ್ ಕರೆಗೆ ಸ್ಥಳೀಯರಿಂದ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಯಿತು. ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಪಟ್ಟಣದ ಭರಮಲಿಂಗೇಶ್ವರ ವೃತ್ತದಲ್ಲಿ ಜಮಾವಣೆಗೊಂಡರು. ಭಾನುವಾರ ನಿಧನಗೊಂಡ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ಅವರ ಆತ್ಮಕ್ಕೆ ಶಾಂತಿಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಂತರ, ಬಿಜೆಪಿ ಮಂಡಳ ನಿಕಟಪೂರ್ವ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊರಳಲ್ಲಿ ಚಪ್ಪಲಿ ಹಾರವನ್ನು ಹಾಕಿ ಶಾಲಾ ಆವರಣದಿದಂದ ಮುಖ್ಯ ಮಾರುಕಟ್ಟೆಯ ಮೂಲಕ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ಮುಖಾಂತರ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ದಾಳಿ ಮಾಡಿ ಗೂಂಡಾವರ್ತನೆ ತೋರಿದ ಕಿಡಿಗೇಡಿಗಳನ್ನು ಆದಷ್ಟು ಬೇಗ ಬಂಧಿಸಬೇಕು. ನೈತಿಕ ಪೊಲೀಸ್ ಗಿರಿ ನಡೆಸಿದ ಪುಂಡರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಪ್ರಕರಣದ ಸಮಗ್ರ ತನಿಖೆ ಮಾಡಿ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಮಾತ್ರ ಇಂದು ಸವಣೂರು ಬಂದ್‌ಗೆ ಕರೆಯನ್ನು ನೀಡಲಾಗಿತ್ತು. ಆದರೆ, ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ಅವರ ನಿಧನ ಹಿನ್ನೆಲೆಯಲ್ಲಿ ಶಾಂತಿಯುತ ಪ್ರತಿಭಟನೆಯ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಲು ಎರಡು ದಿನ ಗಡುವು ನೀಡಲಾಗುವದು. ಆದ್ದರಿಂದ, ಸ್ವ-ಇಚ್ಛೆಯಿಂದ ಪಟ್ಟಣದ ಶೇ. 80ರಷ್ಟು ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ್‌ಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಭರಮಲಿಂಗೇಶ್ವರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮುಖ್ಯ ಮಾರುಕಟ್ಟೆಯಲ್ಲಿ ಹಾಯ್ದು ಅಂಚೆ ಕಚೇರಿ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿ ಆವರಣಕ್ಕೆ ತಲುಪಿತು.ತಹಸೀಲ್ದಾರ್ ರವಿಕುಮಾರ ಕೊರವರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಗೂಂಡಾವರ್ತನೆ ತೋರಿದ ಕಿಡಿಗೇಡಿಗಳನ್ನು ಆದಷ್ಟು ಬೇಗ ಬಂಧಿಸಿ ಸಮಗ್ರ ತನಿಖೆ ಮಾಡಿ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ಈ ರೀತಿ ಪ್ರಕರಣಗಳು ಮುಂದೆ ನಡೆಯದಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮುಂದಿನ 2 ದಿನದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸದಿದ್ದಲ್ಲಿ ನಮ್ಮ ಹೋರಾಟವನ್ನು ಜಿಲ್ಲೆಯಾದ್ಯಂತ ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ತಹಸೀಲ್ದಾರ್ ರವಿಕುಮಾರ ಕೊರವರ ಮನವಿ ಸ್ವೀಕರಿಸಿ ಮಾತನಾಡಿ, ಆರೋಪಿಗಳ ಬಂಧನ ಪ್ರಕ್ರಿಯೆ ಆರಂಭಗೊಳಿಸಿದ್ದು, ಈ ಕುರಿತು ಹಿರಿಯ ಪೋಲಿಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವದು ಎಂದರು. ಪ್ರಮುಖರಾದ ಮೈಲಾರಪ್ಪ ತಳ್ಳಿಹಳ್ಳಿ, ಶಿವಪುತ್ರಪ್ಪ ಕಲಕೋಟಿ, ಸುಭಾಷ ಗಡೆಪ್ಪನವರ, ಬಸನಗೌಡ ಕೊಪ್ಪದ, ಹನಮಂತಗೌಡ ಮುದಿಗೌಡ್ರ, ಮಾಲತೇಶ ಬಿಜ್ಜೂರ, ಪರಶುರಾಮ ಈಳಿಗೇರ, ಈರಣ್ಣ ಸಾಲಿಮಠ, ಹೊನ್ನಪ್ಪ ಕೊಳ್ಳವರ, ಗಾಳೇಪ್ಪ ದೊಡ್ಡಪೂಜಾರ, ಮಹೇಶ ಮುದುಗಲ್, ಮಹೇಶ ಜಡಿ, ಶ್ರೀಕಾಂತ್ ಅಜ್ಜಣ್ಣನವರ, ಡಿ.ಎಂ. ಸಾಲಿ, ಪ್ರವೀಣ ಬಾಲೇಹೊಸೂರ, ಶ್ರೀನಿವಾಸ್ ಗಿತ್ತೆ, ದುರಗಪ್ಪ ಗಡೇದ, ಶಂಕರ ಪಾಟೀಲ, ಚಿದಾನಂದ ಬಡಿಗೇರ, ನಿಂಗಪ್ಪ ಬಂಕಾಪುರ, ಶ್ರೀಕಾಂತ್ ತಿಮ್ಮಣ್ಣವರ, ಪಕ್ಕೀರೇಶ ದೇವಗಿರಿ, ವಿನಾಯಕ ಕುಲಕರ್ಣಿ, ಅರುಣ ಮೆಕ್ಕಿ, ನಿಂಗಪ್ಪ ಬಸನಾಳ ಹಾಗೂ ಇತರರು ಇದ್ದರು. ಸಾಮಾಜಿಕ ಕಾರ್ಯಕರ್ತ ಕಿರಣಕುಮಾರ ವಿವೇಕವಂಶಿ ನಿರ್ವಹಿಸಿದರು.