ಸಾರಾಂಶ
ಮಂಡ್ಯ: ನಗರದ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ನಗರಸಭೆಯ ಆಯುಕ್ತ ಆರ್.ಮಂಜುನಾಥ್‌ರವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಕನ್ನಡ ನಾಮಫಲಕಗಳ ಮಸೂದೆಯನ್ನು ಸರ್ಕಾರ ಘೋಷಿಸಿದ್ದರೂ ಕೂಡ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಮಾಲ್‌ಗಳು, ಪೆಟ್ರೋಲ್ ಬಂಕ್ ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಹೋಟೆಲ್ ಅಂಗಡಿ, ಮತ್ತಿತರ ಮಳಿಗೆಗಳಲ್ಲಿ ನಾಮಫಲಕವನ್ನು ಕನ್ನಡ ಭಾಷೆಯಲ್ಲಿ ಶೇಕಡ ಶೇ.60ರಷ್ಟು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ಸರ್ಕಾರ ಆಗ್ರಹಿಸಿದೆ.ಆದರೆ, ಜಿಲ್ಲೆಯಲ್ಲಿ, ಮಂಡ್ಯ ನಗರದಲ್ಲಿ ಕನ್ನಡ ನಾಮಫಲಗಳನ್ನು ಶೇ.60ರಷ್ಟು ಪ್ರದರ್ಶಿಸದೆ ಕನ್ನಡದ ಜೊತೆಗೆ ಇಂಗ್ಲಿಷ್ ಸಮಾನವಾಗಿದ್ದು, ಕೆಲವು ಅಂಗಡಿ ಮುಂಗುಟ್ಟುಗಳ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಸಣ್ಣದಾಗಿ ಇಂಗ್ಲಿಷ್ ಭಾಷೆಯನ್ನು ದಪ್ಪ ಅಕ್ಷರಗಳಲ್ಲಿ ಅಳವಡಿಸಿದ್ದಾರೆ. ಇದರ ಬಗ್ಗೆ ಜಿಲ್ಲಾಡಳಿತವಾಗಲಿ, ನಗರಸಭೆಯಾಗಲಿ, ಪುರಸಭೆ, ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲಿ ತಮಗೂ ಇದಕ್ಕೂ ಸಂಬಂಧ ಇಲ್ಲದಂತೆ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರದ ಮಸೂದೆಗೆ ಅವಮಾನ ಮಾಡಿದಂತೆ ಎಂದು ಕದಂಬ ಸೈನ್ಯ ಆರೋಪಿಸಿದೆ.
ಜಿಲ್ಲಾಡಳಿತ ಮತ್ತು ನಗರದ ಆಯುಕ್ತರು ಅಂಗಡಿ-ಮುಂಗಟ್ಟುಗಳಲ್ಲಿ ನಾಮಫಲಕಗಳು ಶೇ.60 ರಷ್ಟು ಕನ್ನಡ ಭಾಷೆಯನ್ನು ಹೊಂದಿರಬೇಕು. ಇಲ್ಲವಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನಗರಸಭೆ ಅಧಿಕಾರಿಗಳನ್ನು ಕನ್ನಡದ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಿ ಕರಪತ್ರ ಮೂಲಕ ಚಳಿವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ರಾಜ್ಯ ಸಮಿತಿ ಸದಸ್ಯ ಆರಾಧ್ಯ ಗುಡಿಗೆನಹಳ್ಳಿ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ರಾಮು ಚಿಕೆಗೌಡನದೊಡ್ಡಿ, ಜೋಸೆಫ್, ರಾಮು ಕೀಲಾರ, ನಗರ ಕಾರ್ಯದರ್ಶಿ ಕೃಷ್ಣ ಮತ್ತಿತರರಿದ್ದರು.