ಸಾರಾಂಶ
ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರ ಹಾಗೂ ಸೇವಾನಗರ ತಾಂಡಾದ ಮಾರ್ಗ ಮಧ್ಯ ಟ್ರಕ್ ಹಾಗೂ ಟಾಟಾ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮಹಾರಾಷ್ಟ್ರ ಮೂಲದ ಹೈದ್ರಾಬಾದ್‌ನ ನಿವಾಸಿಯಾಗಿರುವ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಹಾಗೂ 10 ಜನ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಮಹಾರಾಷ್ಟ್ರದ ಗಂಗಾಖೇಡ್ ತಾಲೂಕಿನ ರಾಣಿಸಾವರಗಾಂವ್ ಗ್ರಾಮಕ್ಕೆ ಫೆ.27ರಂದು ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ತೆರಳಿ ರಾತ್ರಿ ಅಲ್ಲಿಂದ ಹೊರಟು ಹೈದ್ರಾಬಾದ್‌ಗೆ ವಾಪಸ್ ಆಗುವ ಮಾರ್ಗಮಧ್ಯ ಸೇವಾನಗರ ತಾಂಡಾ ಸಮೀಪ ಫೆ.28ರಂದು ಬೆಳ್ಳಂ ಬೆಳಗ್ಗೆ 3.45ಕ್ಕೆ ಎದುರಿನಿಂದ ಬಂದ ಲಾರಿಯೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.ಮಹಾರಾಷ್ಟ್ರದ ಉದಗೀರ ಜಿಲ್ಲೆಯ ಕುಮದಾಳ್ ಗ್ರಾಮ ಮೂಲದ ಹೈದ್ರಾಬಾದ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದಸ್ತಗೀರ್ ದಾವಲಸಾಬ್ (36), ಹೈದ್ರಾಬಾದ್‌ನ ಶಾಸ್ತ್ರಿಪುರಂನಲ್ಲಿ ಮನೆಗೆಲಸದಲ್ಲಿದ್ದ ಉದಗೀರ್‌ನ ದೇವುಳವಾಡಿಯ ರಶೀದಾ ಮಹ್ಮದ್ ಸಾಬ್ (50), ಅದೇ ಗ್ರಾಮ ಮೂಲದ ಹೈದ್ರಾಬಾದ್‌ನಲ್ಲಿ ವೆಲ್ಡರ್ ವೃತ್ತಿಯಲ್ಲಿದ್ದ ಅಹ್ಮದ್ ಸಲ್ಮಾನ್‌ಶೇಖ್ (29) ಹಾಗೂ ಟಾಟಾ ಟೆಂಪೊ ಚಾಲಕ ಹೈದ್ರಾಬಾದ್ ಮೂಲದ ವಲಿಪಾಶಾ ಸಲ್ಮಾನ್‌ಶೇಖ್ (29) ಅಪಘಾತದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಗಾಯಗೊಂಡಿರುವ 10 ಜನರನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ. ಧನ್ನೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
6 ಜನ ಮಹಿಳೆಯರು, 5 ಜನ ಪುರುಷರು ಹಾಗೂ ಮೂವರು ಮಕ್ಕಳು ಸೇರಿದಂತೆ ವಾಹನ ಚಾಲಕ ಸೇರಿದಂತೆ ಒಟ್ಟು 14 ಜನ ಹೈದ್ರಾಬಾದ್‌ಗೆ ವಾಪಸ್ಸಾಗುತ್ತಿದ್ದ ಮಾರ್ಗ ಮಧ್ಯ ಅಪಘಾತಕ್ಕೀಡಾಗಿ ಭಾರಿ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಧಾವಿಸಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸುವತ್ತ ಕಾಳಜಿವಹಿಸಿದ್ದಾರೆ. ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್ ಅವರು ಬ್ರಿಮ್ಸ್ ಆಸ್ಪತ್ರೆಗೂ ತೆರಳಿ ಗಾಯಾಳುಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ಸಿಗುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದು ವಿಶೇಷವಾಗಿತ್ತು.