ಸಾರಾಂಶ
ಗೋನಾಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವರಾಜ್ ಸಗರ ಎಂಬವರು ಆಶ್ರಯ ಮನೆಗಳ ಹಂಚಿಕೆ ಸಮಯದಲ್ಲಿ ಲಂಚ ಕೇಳಿರುವುದು ವೀಡಿಯೋ ಮೂಲಕ ಸಾಬಿತು ಆಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹ.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವರಾಜ್ ಸಗರ ಎಂಬವರು ಆಶ್ರಯ ಮನೆಗಳ ಹಂಚಿಕೆ ಸಮಯದಲ್ಲಿ ಲಂಚ ಕೇಳಿರುವುದು ವೀಡಿಯೋ ಮೂಲಕ ಸಾಬಿತು ಆಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ವಡಗೇರಾ ತಾಲೂಕು ಘಟಕದ ವತಿಯಿಂದ ವಡಗೇರಾ ತಾಲೂಕು ಪಂಚಾಯತ್ ಅಧಿಕಾರಿ ಮಲ್ಲಿಕಾರ್ಜುನ್ ಸಂಗ್ವಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಸರಕಾರ ಬಡವರಿಗಾಗಿ ಆಶ್ರಯ ಯೋಜನೆ ಮನೆಗಳು ನೀಡಿದೆ. ಆದರೆ, ಅಧಿಕಾರಿಗಳು ಸಾರ್ವಜನಿಕರಲ್ಲಿ ಲಂಚದ ಬೇಡಿಕೆ ಇಟ್ಟಿದ್ದು, ತೀವ್ರ ಖಂಡನಿಯ ಮತ್ತು ಲಂಚದ ಹಣವನ್ನು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಕೊಡಬೇಕು ಎಂದು ಹೇಳುವ ಪಿಡಿಓ ಶಿವರಾಜ್ ಸಗರ ಅವರದ್ದು ಎನ್ನಲಾದ ಮಾತುಗಳ ಸಂಭಾಷಣೆಯಲ್ಲಿ ಹೇಳಿರುವುದು ಸ್ಪಷ್ಟತೆಯಿಂದ ಕೂಡಿದೆ. ಮೇಲಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಇದೆ, ಅಭಿವೃದ್ಧಿ ಅಧಿಕಾರಿ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ತಕ್ಷಣ ಅವರನ್ನು ವಜಾಗೊಳಿಸಬೇಕು. ಒಂದು ವೇಳೆ ವಿಳಂಬ ಮಾಡಿದ್ದಲ್ಲಿ ವಡಗೇರಾ ತಾಪಂ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘದ ಮುಖಂಡರು ಎಚ್ಚರಿಸಿದರು.
ರಾಜ್ಯ ರೈತ ಸಂಘದ ತಾಲೂಕು ಗೌರವಾಧ್ಯಕ್ಷ ಶರಣು ಜಡಿ, ಕ್ರಿಷ್ಣಾ ಟೇಲರ್, ಸತೀಶ್ ಪೂಜಾರಿ, ಹಳ್ಳೆಪ್ಪ ತೇಜೇರ, ಮಲ್ಲು ನಾಟೇಕರ್, ವೆಂಕಟೇಶ್ ಇಟಗಿ, ತಿರುಮಲ ಮುಸ್ತಾಜಿರ, ಮಹ್ಮದ್ ಇತರರಿದ್ದರು.